ಬಾದಾಮಿ: ಸರಕಾರ ಅಂಗವಿಕಲರಿಗೆ ಅನೇಕ ಯೋಜನೆ ಜಾರಿಗೆ ತಂದಿದೆ. ಆದರೆ, ಯೋಜನೆಗಳ ಅನುಷ್ಟಾನದಲ್ಲಿ ತಾಲೂಕಾಮಟ್ಟದ ಅಧಿಕಾರಿಗಳ ಇಚ್ಛಾಸಕ್ತಿ ಕೊರತೆ ಎದ್ದು ಕಾಣುತ್ತದೆ. ಕಾರಣ ಕಳೆದ 10 ತಿಂಗಳಿನಿಂದ ಅಂಗವಿಕಲರ ಕುಂದುಕೊರತೆ ಸಭೆ ನಡೆದಿಲ್ಲ.
ತಾಲೂಕಾಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಪ್ರತಿ ತಿಂಗಳ ಮೊದಲ ವಾರ ಅಂಗವಿಕಲರ ಕುಂದುಕೊರತೆ ಸಭೆ ನಡೆಸಬೇಕು ಎಂದು ಹಿಂದಿನ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ಸೂಚಿಸಿದ್ದರೂ 2018 ಆಗಸ್ಟ್ ನಂತರ ಇದೂವರೆಗೂ ಒಂದೂ ಸಭೆ ನಡೆಸಿಲ್ಲ. ತಾಲೂಕಿನಲ್ಲಿ ಸುಮಾರು 6 ಸಾವಿರಕ್ಕೂ ಅಧಿಕ ಅಂಗವಿಕಲರಿದ್ದು, ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಸಮಸ್ಯೆ ಯಾರ ಮುಂದೆ ಹೇಳಿಕೊಳ್ಳಬೇಕು ಎಂದು ತಾಲೂಕುಮಟ್ಟದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶೇ. 5 ಅನುದಾನ ಮೀಸಲು: ಸರಕಾರದ ಎಲ್ಲ ಇಲಾಖೆಗಳಲ್ಲಿ 2018-19 ನೇ ಸಾಲಿನಿಂದ ಒಟ್ಟು ಅನುದಾನದ ಶೇ. 5 ರಷ್ಟು ಅಂಗವಿಕಲರ ಕಾರ್ಯಕ್ರಮಗಳಿಗೆ ಖರ್ಚು ಮಾಡಬೇಕು ಎಂಬ ಆದೇಶ ಇದ್ದರೂ ಗ್ರಾಪಂ, ತಾಪಂ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಸರಿಯಾದ ಮಾಹಿತಿ ಇರದ ಕಾರಣ ಖರ್ಚು ಮಾಡುತ್ತಿಲ್ಲ.
ಅಂಗವಿಕಲರ ಸಮಸ್ಯೆಗಳೇನು?: ಅಂಗವಿಕಲರು ಮಾಸಿಕ ಪೋಷಣಾ ಭತ್ಯೆ, ಖಜಾನೆಯಿಂದ ಮಾಸಾಶನ ಪಡೆಯುವುದು, ವಾರ್ಷಿಕ ಆದಾಯ, ಕೆಲವು ಗ್ರಾಮಲೆಕ್ಕಾಧಿಕಾರಿಗಳು ಆದಾಯ ಮಿತಿ ಹೆಚ್ಚಿಗೆ ಬರೆದುಕೊಟ್ಟ ಕಾರಣ ಮಾಸಾಶನ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ.
ಪ್ರತಿ ತಿಂಗಳು ಮೂರನೇ ಮಂಗಳವಾರ ತಾಲೂಕಾ ಆಸ್ಪತ್ರೆಯಲ್ಲಿ ದೈಹಿಕ ದೋಷ, ದೃಷ್ಟಿದೋಷ, ಬುದ್ದಿಮಾಂದ್ಯತೆ, ಶ್ರವಣದೋಷ ಸೇರಿದಂತೆ ಎಲ್ಲ ವಿಕಲತೆಯ ಪ್ರಮಾಣಪತ್ರ ನೀಡುತ್ತಿದ್ದಾರೆ. ತಿಂಗಳಿಗೆ ಒಂದು ಬಾರಿ ಮಾಡುವ ಬದಲಾಗಿ ಎರಡು ಬಾರಿ ವೈದ್ಯಕೀಯ ಪ್ರಮಾಣಪತ್ರ ನೀಡುವಂತೆ ಮಾಡಬೇಕು ಎಂಬುದು ಅಂಗವಿಕಲರ ಒತ್ತಾಯವಾಗಿದೆ.