Advertisement

ವಿಕಲಚೇತನರ ಆಪದ್ಬಾಂಧವ ಸಂಯುಕ್ತ ಪ್ರಾದೇಶಿಕ ಕೇಂದ್ರ

04:21 PM Oct 15, 2018 | Team Udayavani |

ದಾವಣಗೆರೆ: ವಿಕಲಚೇತನರಿಗೆ ಚಿಕಿತ್ಸೆ, ತರಬೇತಿ ಮೂಲಕ ಸ್ವಾವಲಂಬಿ ಬದುಕು ಕಟ್ಟಿ ಕೊಡುವ, ಅವರನ್ನೂ ಸಹ ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಸರ್ಕಾರದ ಸಂಯುಕ್ತ ಪ್ರಾದೇಶಿಕ ಕೇಂದ್ರಕ್ಕೇ ಈಗ ನೆರವು ಬೇಕಿದೆ.

Advertisement

ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ದಿವ್ಯಾಂಗರ) ಸಚಿವಾಲಯದ ಈ ಕೇಂದ್ರವು ನಗರದ ದೇವರಾಜ ಅರಸು ಬಡಾವಣೆಯಲ್ಲಿ ಎಲೆಮರೆ ಕಾಯಿಯಂತೆ ಕಳೆದ ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ. ಫಲಾನುಭವಿಗಳಿಗೆ ಕೇಂದ್ರದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಒದಗಿಸಲು ಈ ಕೇಂದ್ರಕ್ಕೆ ಜಾಗದ ಕೊರತೆ ಕಾಡುತ್ತಿದೆ.
 
2017ರ ಫೆಬ್ರವರಿಯಲ್ಲಿ ಕಾರ್ಯಾರಂಭಿಸಿರುವ ಕೇಂದ್ರದ ವ್ಯಾಪ್ತಿಗೆ ಕರ್ನಾಟಕ ಮತ್ತು ಗೋವಾ ರಾಜ್ಯಗಳು ಒಳ ಪಡುತ್ತಿವೆ. ವಿಕಲಚೇತನರಿಗೆ ಚಿಕಿತ್ಸೆ, ಅಗತ್ಯ ಸಾಧನ, ಸಲಕರಣೆ, ಅತ್ಯಾಧುನಿಕ ಸೌಲಭ್ಯ ಒದಗಿಸಿ ಅವರ ಅಂಗವಿಕಲತೆ ನಿವಾರಣೆ ಜತೆಗೆ  ವಲಂಬಿಗಳನ್ನಾಗಿಸುವುದು ಈ ಕೇಂದ್ರದ ಸದುದ್ದೇಶ.

ಕೇಂದ್ರವು 21 ರೀತಿಯ ನ್ಯೂನ್ಯತೆಯುಳ್ಳ ವಿಕಲಚೇತನರಿಗೆ ತರಬೇತಿ ಮತ್ತು ವಿಶೇಷ ಶಿಕ್ಷಣ ನೀಡುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಇದುವರೆಗೆ ಈ ಕೇಂದ್ರದಲ್ಲಿ 600ಕ್ಕೂ ಹೆಚ್ಚು ವಿಕಲಚೇತನರು ನೋಂದಣಿ ಮಾಡಿಸಿದ್ದು, ನಿತ್ಯ 20 ವಿಕಲಚೇತನರಿಗೆ ತರಬೇತಿ ನೀಡಲಾಗುತ್ತಿದೆ. ಬಿಪಿಎಲ್‌ ಕಾರ್ಡ್‌ದಾರರಿಗೆ ಇಲ್ಲಿ ಉಚಿತ ಸೌಲಭ್ಯ ಕಲ್ಪಿಸಲಾಗುವುದು. ರಾಜ್ಯದ ಮೂಲೆ ಮೂಲೆಗಳಿಂದಲೂ ವಿಕಲಚೇತನರು ಈ ಕೇಂದ್ರಕ್ಕೆ ಬಂದು ಚಿಕಿತ್ಸೆ, ತರಬೇತಿ ಪಡೆದು ಸ್ವಾವಲಂಬಿಗಳಾಗಿ ಜೀವನ ನಡೆಸುವ ನಿಟ್ಟಿನಲ್ಲಿ ತಯಾರಾಗುತ್ತಿದ್ದಾರೆ. 

ಸೇವಾ ಸೌಲಭ್ಯಗಳು: ಶಾರೀರಿಕ ಔಷಧೋಪಚಾರಗಳು ಮತ್ತು ಪುನರ್ವಸತಿ, ಮಾನಸಿಕ ತೊಂದರೆ ನಿವಾರಣೆ, ವಿಶೇಷ ಶಿಕ್ಷಣ, ದೈಹಿಕ ವ್ಯಾಯಾಮ, ಔದ್ಯೋಗಿಕ ಚಿಕಿತ್ಸೆ, ಆಡಿಯಾಲಜಿ ಮತ್ತು ಸ್ಪೀಚ್‌ ಲಾಂಗ್ವೇಜ್‌ ಥೆರಪಿ, ಪ್ರಾಸ್ತೋಟಿಲಕ್‌ ಮತ್ತು ಆರ್ಥೋಟಿಕ್‌ ಸೇವೆ, ಮಾರ್ಗದರ್ಶನ ಮತ್ತು ಆಪ್ತ ಸಮಾಲೋಚನೆ, ದೀರ್ಘ‌ ಮತ್ತು ತಾತ್ಕಾಲಿಕ ತರಬೇತಿ, ಕೌಶಲ್ಯ ಅಭಿವೃದ್ಧಿ, ಸಾಧನ ಸಲಕರಣೆ ವಿತರಣೆ ಸೇರಿ ವಿವಿಧ ಸೇವೆಗಳು ವಿಕಲಚೇತನರಿಗೆ ಈ ಕೇಂದ್ರದಲ್ಲಿ ದೊರೆಯುತ್ತವೆ.

ಫಿಜಿಯೊಥೆರಪಿ, ಮಕ್ಕಳು ಮತ್ತು ಪಾಲಕರಿಗೆ ಆಪ್ತ ಸಮಾಲೋಚನೆ, ಬುದ್ಧಿಮಾಂದ್ಯ ಮಕ್ಕಳು ಮತ್ತು ಪಾಲಕರಿಗೆ ವಿಶೇಷ ಶಿಕ್ಷಣ, ಶ್ರವಣ ಸಾಧನ ಅಳವಡಿಕೆ ಮತ್ತು ತರಬೇತಿ, ದೃಷ್ಟಿಹೀನರಿಗೆ ತರಬೇತಿ, ಮಾತು ಬರದ ಮಕ್ಕಳಿಗೆ ಸಂಜ್ಞೆ ತರಬೇತಿ ಸಹ ಕೇಂದ್ರದಲ್ಲಿ ನೀಡಲಾಗುತ್ತಿದೆ.
 
ಡಿಪ್ಲೊಮಾ ಕೋರ್ಸ್‌: ಸಂಯುಕ್ತ ಪ್ರಾದೇಶಿಕ ಕೇಂದ್ರವು ಮುಂಬರುವ ಶೈಕ್ಷಣಿಕ ವರ್ಷದಿಂದ ಡಿಪ್ಲೋಮಾ ಮೂರು ಕೋರ್ಸ್‌ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಶ್ರವಣದೋಷ ಮತ್ತು ಬುದ್ಧಿಮಾಂದ್ಯತೆ ವಿಷಯಗಳಲ್ಲಿ ವಿಶೇಷ ಶಿಕ್ಷಣದ ಎರಡು ಪ್ರತ್ಯೇಕ ಕೋರ್ಸ್‌ ಆರಂಭಿಸಲಾಗುವುದು. ಸಂಜ್ಞಾ ಭಾಷೆಗೆ ಸಂಬಂಧಿಸಿದ ಮತ್ತೂಂದು ಡಿಪ್ಲೊಮಾ ಕೋರ್ಸ್‌ ಕೂಡ ಇದರಲ್ಲಿ ಇರಲಿದೆ.
 
ಏನೇನು ತರಬೇತಿ: ಕೇಂದ್ರದಲ್ಲಿ ವಿಕಲಚೇತನ ಮಕ್ಕಳಿಗೆ ಪೇಪರ್‌ ಬ್ಯಾಗ್‌ ತಯಾರಿಕೆ, ಬಳೆ, ಸರ, ಕಿವಿಯೋಲೆ, ಎಂಬ್ರಾಯಿಡರಿ, ಪೋಟೋ ಫ್ರೇಮಿಂಗ್‌ ಮುಂತಾದ ಕರಕುಶಲ ಕಲೆಗಳನ್ನು ಕಲಿಸಿಕೊಡುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಕೆಲಸ ನಿರಂತರವಾಗಿ ನಡೆಯಲಿದೆ. ಇನ್ನು ಜೆರಾಕ್ಸ್‌, ಲ್ಯಾಮಿನೇಷನ್‌, ಟೈಲರಿಂಗ್‌, ಡಾಟಾ ಎಂಟ್ರಿ, ಬೈಡಿಂಗ್‌, ಸ್ಕ್ರೀನ್‌ ಪ್ರಿಂಟಿಂಗ್‌ ಮುಂತಾದ ತರಬೇತಿ ನೀಡಲು ಸ್ಥಳಾವಕಾಶ ಕಡಿಮೆ ಆಗುತ್ತಿದೆ ಎನ್ನುತ್ತಾರೆ ಕೇಂದ್ರದ ತರಬೇತುದಾರ ಸುರೇಶ್‌ ಚಂದ್ರ ಕೇಸರಿ. 

Advertisement

ಸಾಧನ-ಸಲಕರಣೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಿಬಿರ ಆಯೋಜಿಸಿ 1 ಸಾವಿರಕ್ಕೂ ಹೆಚ್ಚು ವಿಕಲಚೇತನರ ಅಗತ್ಯತೆ ಗುರುತಿಸಿ 100 ಮಂದಿಗೆ ಕಲಿಕಾ ಸಾಮಗ್ರಿ, ಸಾಧನ, ಸಲಕರಣೆ ವಿತರಿಸಲಾಗಿದೆ. ಬುದ್ಧಿಮಾಂದ್ಯ ಮಕ್ಕಳಿಗೆ ಪ್ರಾಥಮಿಕವಾಗಿ 3 ವರ್ಷದಿಂದ 18 ವರ್ಷದ ಮಾಧ್ಯಮ ಶಿಕ್ಷಣದವರೆಗೆ ವಿಶೇಷವಾಗಿ ಕಲಿಕೆಗೆ ಪೂರಕವಾಗುವ ಅಗತ್ಯ ಸಾಮಗ್ರಿಗಳ ಕಿಟ್‌ ಟ್ರ್ಯಾಲಿ ನೀಡಲಾಗುತ್ತಿದೆ. 59 ಅಂಧ ಮಕ್ಕಳಿಗೆ ಇನ್ನೊಬ್ಬರ ಸಹಾಯವಿಲ್ಲದೇ ಓಡಾಡಲು ಅನುಕೂಲ ಆಗುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ. ಹೀಗೆ ಸಂಯುಕ್ತ ಪ್ರಾದೇಶಿಕ ಕೇಂದ್ರವು ಹತ್ತು ಹಲವು ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ವಿಕಲಚೇತನರ ಪಾಲಿಗೆ ಆಪದ್ಬಾಂಧವನಂತೆ ಕೈ ಹಿಡಿದು, ಚೈತನ್ಯ ತುಂಬುತ್ತಿದೆ.

40 ಕೋಟಿ ವೆಚ್ಚದಲ್ಲಿ ಸಿಆರ್‌ಸಿ ತರಬೇತಿ ಕೇಂದ್ರ ವಿಕಲಚೇತನರ ಸಮಗ್ರ ವಿಭಾಗೀಯ ಕೇಂದ್ರ ತೆರೆಯಲು ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ದಾವಣಗೆರೆ ತಾಲೂಕಿನ ವಡ್ಡಿನಹಳ್ಳಿಯ ಹಳೇ ಗ್ರಾಮ ಇಲ್ಲವೇ ತೊಳಹುಣಸೆಯ ರೇಷ್ಮೆ ಇಲಾಖೆಯ ಆವರಣ ಸೇರಿದಂತೆ ಇವುಗಳಲ್ಲಿ ಯಾವುದಾದರು ಒಂದು ಜಾಗದಲ್ಲಿ 8 ಎಕರೆ ಜಮೀನು ಮಂಜೂರು ಮಾಡಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇವೆ. ಈ ಬಗ್ಗೆ ತಹಶೀಲ್ದಾರ್‌ ಅವರಿಂದ ಜಿಲ್ಲಾಧಿಕಾರಿ ಪ್ರಸ್ತಾವನೆ ತರಿಸಿಕೊಂಡಿದ್ದಾರೆ. ಜಮೀನು ಮಂಜೂರಾದರೆ 40 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸಿಆರ್‌ಸಿ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಈ ಬಗ್ಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕೇಂದ್ರ ಸಚಿವ ತಾವರ್‌ಚಂದ್‌ ಅವರೊಂದಿಗೆ ಮಾತನಾಡಿದ್ದೇನೆ.
 ಜಿ.ಎಂ. ಸಿದ್ದೇಶ್ವರ್‌, ಸಂಸದ

ಇನ್ನಷ್ಟು ಜಾಗ ಬೇಕಿದೆ ದಾವಣಗೆರೆ ಸ್ಮಾರ್ಟ್‌ ಸಿಟಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜನರಿಗೆ ಸಿಆರ್‌ಸಿ ಕೇಂದ್ರದಿಂದ ಹೆಚ್ಚೆಚ್ಚು ಸೌಲಭ್ಯ ಒದಗಿಸಲು ಹಾಗೂ ಹೊಸ ತರಬೇತಿ ಕೋರ್ಸ್‌ ಆರಂಭಿಸಲು ವಿಸ್ತಾರವಾದ ಜಾಗದ ಆಗತ್ಯವಾಗಿದೆ. ಹಾಗಾಗಿ 10 ಎಕರೆ ಜಮೀನು ಮಂಜೂರು ಮಾಡುವಂತೆ ಬೇಡಿಕೆ ಇಟ್ಟಿದ್ದು, ಜಾಗ ಕೊಡಿಸುವುದಾಗಿ ಸಂಸದರು, ಹಿಂದಿನ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಜಾಗ ಸಿಕ್ಕಲ್ಲಿ ನಮಗೂ ಇನ್ನಷ್ಟು ಉತ್ತಮ ಕೆಲಸಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
 ಶೇಖ್‌ ಯಾಸಿನ್‌ ಷರೀಫ್‌, ಸಿಆರ್‌ಸಿ ಕೇಂದ್ರದ ಪ್ರಭಾರ ನಿರ್ದೇಶಕ

ಬುದ್ಧಿಮಟ್ಟ ಕೊರತೆಯಿಂದ ಬಳಲುತ್ತಿದ್ದ ನನ್ನ ಮಗ ಸಾಯಿ ವಿಷ್ಣುನನ್ನು ಆರು ತಿಂಗಳ ಹಿಂದೆ ಚಿಕಿತ್ಸೆಗಾಗಿ ಈ ಕೇಂದ್ರಕ್ಕೆ ಕರೆ ತಂದೆವು. ಇಲ್ಲಿ ತರಬೇತಿ ಪಡೆದ ಬಳಿಕ ಪೋಷಕರನ್ನು ಆಶ್ರಯಿಸದೇ ಈಗ ಸ್ವಾವಲಂಬಿಯಾಗಿ ಕೇಂದ್ರಕ್ಕೆ ಒಬ್ಬನೇ ಬಂದು ತರಬೇತಿ ಪಡೆದು ಮರಳಿ ಚನ್ನಗಿರಿ ತಾಲೂಕಿನ ನಮ್ಮ ಊರಿಗೆ (ಕಡರನಾಯಕನಹಳ್ಳಿ) ಬರುತ್ತಿದ್ದು, ಬಹಳಷ್ಟು ಗುಣಮುಖನಾಗುತ್ತಿದ್ದಾನೆ.
 ಎಚ್‌. ರಾಜು, ಬಾಲಕನ ತಂದೆ. 

„ವಿಜಯ್‌ ಕೆಂಗಲಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next