Advertisement

ನಿಷ್ಕ್ರಿಯಗೊಂಡ ಬಾಗಲಕೋಟೆ ನಗರಸಭೆ ಆಡಳಿತ

01:23 PM May 03, 2019 | Suhan S |

ಬಾಗಲಕೋಟೆ: ನಗರದಲ್ಲಿ ಆಡಳಿತ ವ್ಯವಸ್ಥೆ  ಸಂಪೂರ್ಣ ನಿಷ್ಕ್ರಿಯಯಗೊಂಡಿದೆ ಎಂಬ ಆರೋಪ ಪ್ರಬಲವಾಗಿ ಕೇಳಿಬರುತ್ತಿದೆ.

Advertisement

ನಿಜ, ಇಡೀ ನಗರದ ಮೂಲ ಸೌಲಭ್ಯದ ಜವಾಬ್ದಾರಿ ಹೊತ್ತ ನಗರಸಭೆಯಂತೂ, ಸದ್ಯಕ್ಕೆ ಇದ್ದೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ನಗರದ ಸ್ವಚ್ಛತೆಯಿಂದ ಹಿಡಿದು ಕುಡಿಯುವ ನೀರಿನ ಸಮಸ್ಯೆ ಎಲ್ಲೆ ಕಂಡರೂ ತಕ್ಷಣ ಸ್ಪಂದಿಸುವ ಕ್ರಿಯಾಶೀಲತೆ ಹೊಂದಿದ್ದ ಅಧಿಕಾರಿಗಳೆಲ್ಲ ಈಗ ನಿರ್ಲಿಪ್ತಗೊಂಡಿದ್ದಾರೆ ಎಂಬ ಅಸಮಾಧಾನ, ನಗರಸಭೆಯ ಸಿಬ್ಬಂದಿಯಿಂದಲೇ ಕೇಳಿ ಬರುತ್ತಿದೆ.

ಸಮನ್ವಯತೆ ಇಲ್ಲ: ಸದ್ಯ ಬಿರು ಬೇಸಿಗೆಯಿಂದ ಜನರು ಕಂಗೆಟ್ಟಿದ್ದಾರೆ. ಹನಿ ನೀರಿಗೂ ಪರಿತಪಿಸುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾದ ನಗರಸಭೆಯ ಅಧಿಕಾರಿಗಳಲ್ಲಿ ಸಮನ್ವಯತೆ ಕೊರತೆ ಇದೆ ಎನ್ನಲಾಗುತ್ತಿದೆ. ನಗರಸಭೆಯ ಕಿರಿಯ ಸಹಾಯಕ ಅಭಿಯಂತರ ನವೀದ ಖಾಜಿಯಂತಹ ಕೆಲವೇ ಕೆಲವರು ಮಾತ್ರ, ಎಲ್ಲ ಜವಾಬ್ದಾರಿ ನಿರ್ವಹಿಸಿ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಕೈಜೋಡಿಸಿ, ಇತರೇ ಅಧಿಕಾರಿ, ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನಲಾಗಿದೆ.

ಇನ್ನು ನಗರಸಭೆಯ ಪೌರಾಯುಕ್ತರಂತೂ ಒಮ್ಮೆಯೂ ನಗರ ಪ್ರದಕ್ಷಿಣೆ ಹಾಕಿಲ್ಲ. ಯಾವ ಬಡಾವಣೆಯಲ್ಲಿ ಯಾವ ಸಮಸ್ಯೆ ಇದೆ ಎಂದು ತಿಳಿದಿಲ್ಲ. ತಮ್ಮದೇ ನಗರಸಭೆಯ ಸಿಬ್ಬಂದಿ, ಅಧಿಕಾರಿಗಳ ಕೈಗೂ ಅವರು ಸಿಗಲ್ಲ. ಇನ್ನು ನಗರದ ಜನರ ಕೈಗೆ ಸಿಗುವುದು ದೂರದ ಮಾತು ಎಂಬ ಅಸಮಾಧಾನ ನಗರಸಭೆ ಕೆಲ ಸದಸ್ಯರು ವ್ಯಕ್ತಪಡಿಸುತ್ತಿದ್ದಾರೆ.

ಹಿನ್ನೀರಿದ್ದರೂ ಕೊಳವೆ ಬಾವಿಯೇ ಗತಿ: ಮುಳುಗಡೆ ನಗರದ ಪರಿಸ್ಥಿತಿ ಹೇಗಿದೆ ಎಂದರೆ, ಇಲ್ಲಿ ಹೇರಳ ನೀರಿದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕ್ರಿಯಾಶೀಲತೆ ಜಿಲ್ಲಾಡಳಿತ ಅಥವಾ ನಗರಸಭೆಗೆ ಇಲ್ಲ. ನವನಗರದ ಎಲ್ಲ ಸೆಕ್ಟರ್‌ಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಬಿಟಿಡಿಎ ಮಾಡುತ್ತದೆ. ಇನ್ನುಳಿದ ಹಳೆಯ ಬಾಗಲಕೋಟೆ, ವಿದ್ಯಾಗಿರಿ ಏರಿಯಾಗಳಿಗೆ ನಗರಸಭೆ ನೀರು ಪೂರೈಕೆ ಮಾಡಬೇಕು. ಆದರೆ, ಇಲ್ಲಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ವ್ಯವಸ್ಥೆ ಬಿಟ್ಟರೆ, ಪರ್ಯಾಯ ವ್ಯವಸ್ಥೆ ಇಲ್ಲ. ಕೋಟ್ಯಂತರ ಖರ್ಚು ಮಾಡಿ, ಯೋಜನೆ ಕೈಗೊಂಡರೂ, ಅದನ್ನು ಸರಿಯಾಗಿ ಅನುಷ್ಠಾನ ಮಾಡುವ ಗೋಜಿಗೆ ಯಾರೂ ಹೋಗಿಲ್ಲ.

Advertisement

ಒಂದೆಡೆ ಹೇರಳ; ಮತ್ತೂಂದೆಡೆ ನೀರಿಲ್ಲ: ನಗರದ ಬಹುತೇಕ ಕಡೆ ಕೊಳವೆ ಬಾವಿಯಿಂದ ನೀರು ಕೊಡುತ್ತಿದ್ದು, ಆಯಾ ಬಡಾವಣೆಗಳ ಜನರೇ ಕೊಳವೆ ಬಾವಿಯ ವಿದ್ಯುತ್‌ ಪಂಪಸೆಟ್ ಆರಂಭಿಸಿ, ಅವರೇ ಬಂದ್‌ ಮಾಡುವ ಸಂಪ್ರದಾಯವಿದೆ. ಹೀಗಾಗಿ ಒಂದೊಂದು ಏರಿಯಾದಲ್ಲಿ 24 ಗಂಟೆಯೂ ನೀರು ಹರಿದರೆ, ಕೆಲವೊಂದು ಏರಿಯಾಗಳಲ್ಲಿ ನೀರು ಕೇಳಿದರೂ ಸಿಗುವ ಪರಿಸ್ಥಿತಿ ಇಲ್ಲ. ನಗರಸಭೆಯಿಂದ ನಿತ್ಯ ಸಮಯ ನಿಗದಿಮಾಡಿ, ಎಲ್ಲ ಬಡಾವಣೆಗಳಿಗೂ ಸರಿಯಾಗಿ ನೀರು ಒದಗಿಸಬೇಕು ಎಂಬುದು ಜನರ ಒತ್ತಾಯ.

ಕೋಟಿ ಖರ್ಚಾದರೂ ಬಾರದ ನೀರು: ನಗರ, ವಿದ್ಯಾಗಿರಿ, ನವನಗರ ಏರಿಯಾದ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿಯೇ 72 ಕೋಟಿ ಖರ್ಚು ಮಾಡಿ, ಹೆರಕಲ್ ಮೂಕಿಯಿಂದ ನಗರಕ್ಕೆ ನೀರು ಸರಬಾರು ಯೋಜನೆಯನ್ನು 2013ರಲ್ಲೇ ಆರಂಭಿಸಲಾಗಿದೆ. ಅದು ಈ ವರೆಗೂ ಪೂರ್ಣಗೊಂಡು, ಜನರ ಬಾಯಿಗೆ ಆ ನೀರು ಬಿದ್ದಿಲ್ಲ ಎಂದರೆ, ಇಲ್ಲಿನ ಆಡಳಿತ, ಜನಪರ ಕಾಳಜಿ ಎಷ್ಟಿದೆ ಎಂಬುದು ಅರಿಯಬೇಕಾಗುತ್ತದೆ ಎಂದು ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸುತ್ತಾರೆ.

72 ಕೋಟಿ ವೆಚ್ಚದ ಹೆರಕಲ್ದಿಂದ ಕುಡಿಯುವ ನೀರು ಪೂರೈಕೆ ಯೋಜನೆ ಜತೆಗೆ ನಗರದ ಸಿಮೆಂಟ್ ಕ್ವಾರಿಯಿಂದ ನಗರದ ಜನರಿಗೆ ನಿತ್ಯ ತಲಾ ಒಬ್ಬರಿಗೆ 133 ಲೀಟರ್‌ ನೀರು ಕೊಡುವ 8 ಕೋಟಿ ವೆಚ್ಚದ ಪ್ರತ್ಯೇಕ ಯೋಜನೆಯೂ ಇದೆ. ಅದೂ ಕೂಡ ಅನುಷ್ಠಾನಗೊಂಡಿಲ್ಲ. ಕೇವಲ ಒಂದು ಸರ್ಕಾರದವರು ಭೂಮಿಪೂಜೆ ಮಾಡಿದ್ದರೆ, ಇನ್ನೊಂದು ಸರ್ಕಾರದವರು ಆ ಯೋಜನೆಯ ಉದ್ಘಾಟನೆ ಮಾಡಿ, ಪ್ರಚಾರ ಪಡೆದರು. ಆದರೆ, ಜನರಿಗೆ ಮಾತ್ರ ನೀರು ಪೂರೈಕೆಯಾಗುತ್ತಿಲ್ಲ.

ಇನ್ನು ಕಳೆದ ಅಕ್ಟೋಬರ್‌ನಲ್ಲಿಯೇ ನಗರದ 35 ವಾರ್ಡಗಳಿಗೆ ಹೊಸ ಸದಸ್ಯರು ಆಯ್ಕೆಯಾದರೂ ಈ ವರೆಗೆ ಅವರ ಕೈಗೆ ಅಧಿಕಾರ ಸಿಕ್ಕಿಲ್ಲ. ನಗರಸಭೆಯಲ್ಲಿ ಅವರ ಮಾತು ಅಧಿಕಾರಿಗಳು ಕೇಳುತ್ತಿಲ್ಲ. ಹೀಗಾಗಿ ಜನರು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಲೂ ಆಗುತ್ತಿಲ್ಲ. ಅಲ್ಲದೇ ಈ ಕ್ಷೇತ್ರದ ಶಾಸಕರು ಒಂದು ಪಕ್ಷದವರಿದ್ದರೆ, ರಾಜ್ಯದಲ್ಲಿ ಸರ್ಕಾರ ಮತ್ತೂಂದು ಪಕ್ಷದ್ದು. ಇದೆಲ್ಲದರ ಮಧ್ಯೆ ಜನರು, ನಮ್ಮ ಸಮಸ್ಯೆ ಯಾರಿಗೆ ಹೋಳ್ಳೋದು ಎಂಬ ಗೊಂದಲದಲ್ಲೂ ಇದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 250 ಕೊಳವೆ ಬಾವಿಗಳಿವೆ. ಅದರಲ್ಲಿ ಕೆಲವೆಡೆ ನೀರು ಕಡಿಮೆಯಾಗುತ್ತಿದೆ. ನೀರು ಕಡಿಮೆಯಾದ ಕೊಳವೆಯ ಪಕ್ಕದಲ್ಲಿ ಮತ್ತೂಂದು ಕೊಳವೆ ಬಾವಿಗಳಿದ್ದು, ಅವುಗಳಿಂದ ಸದ್ಯಕ್ಕೆ ನೀರು ಕೊಡಲಾಗುತ್ತಿದೆ. ನಗರದಲ್ಲಿ ನೀರಿನ ಸಮಸ್ಯೆ ಅಷ್ಟೊಂದು ಗಂಭೀರತೆ ಇಲ್ಲ. -ನವೀದ ಖಾಜಿ ನಗರಸಭೆ ಸಹಾಯಕ ಅಭಿಯಂತರ

•ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next