Advertisement
ಕಟೀಲು ನವಿಲುಪಾದೆಯ ಸಂತೋಷ್ ಶೆಟ್ಟಿ (35) ಅವರು ಕನ್ನಡ ಹಾಗೂ ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಗಂಧದ ಕುಡಿ (ಹಿಂದಿಯಲ್ಲಿ ಚಂದನ್‌ವನ್) ಸಿನೆಮಾದ ನಿರ್ದೇಶಕರಾಗಿದ್ದು, ಅದರ ಪೋಸ್ಟರ್ ಶೂಟಿಂಗ್ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಮೃತಪಟ್ಟಿದ್ದಾರೆ.
ಸುಮಾರು 10.15ರ ಹೊತ್ತಿಗೆ ಸಂತೋಷ್ ಶೆಟ್ಟಿ ಅವರು ಮೆಕ್ಯಾನಿಕಲ್ ಫಾರೆಸ್ಟರ್ ಎಂಬ ಪಾತ್ರದ ಫೋಟೊ ಶೂಟ್ ಮಾಡಲು ರೋಬೋ ರೀತಿಯ ವಿಶೇಷ ವಿನ್ಯಾಸದ ಭಾರವಾದ ಉಡುಗೆ (ಅವರು ಧರಿಸಿದ್ದ ಜಾಕೆಟ್, ಶೂ ಇತ್ಯಾದಿ ಸೇರಿ ಸುಮಾರು 30 ಕಿ.ಗ್ರಾಂ ನಷ್ಟು ಭಾರವಿತ್ತು) ತೊಟ್ಟು ನೀರಿಗೆ ಇಳಿದಿದ್ದರು. ಆಗ ನೀರಿನ ಸೆಳೆತಕ್ಕೆ ಸಿಕ್ಕಿ ಹಿಮ್ಮುಖವಾಗಿ ಆಳವಾಗಿದ್ದ ಹೊಂಡಕ್ಕೆ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಮೇಲೆತ್ತಲು ಪ್ರಯತ್ನಿಸಿದರೂ ಪ್ರಯೋಜನ ವಾಗಿಲ್ಲ. ತಂಡದ ಬೊಬ್ಬೆ ಕೇಳಿ ಸ್ಥಳೀ ಯರು ಕೂಡ ಆಗಮಿಸಿದರೂ ಅವರನ್ನು ರಕ್ಷಿಸಲಾಗಲಿಲ್ಲ.
ತತ್‌ಕ್ಷಣ ಬೆಳ್ತಂಗಡಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಬಂದು ಹುಡುಕಾಟ ನಡೆಸಿ 12.15ರ ಸುಮಾರಿಗೆ ಮೃತದೇಹವನ್ನು ಮೇಲಕ್ಕೆತ್ತಿದರು.
Related Articles
ಗಂಧದಕುಡಿ ಸಿನೆಮಾವನ್ನು ನಿರ್ಮಾಪಕ ಸತ್ಯೇಂದ್ರ ಪೈ ನಿರ್ದೇಶನದಲ್ಲಿ ಚಿತ್ರೀಕರಿಸಲಾಗುತ್ತಿದೆ. ಫೋಟೊ ಶೂಟ್ ವೇಳೆ ನಿರ್ಮಾಪಕರು ಸ್ಥಳದಲ್ಲಿರಲಿಲ್ಲ ಹಾಗೂ ಅಪಾಯದ ಅರಿವಿದ್ದರೂ ಯಾವುದೇ ಮುಂಜಾಗ್ರತೆ ಕೈಗೊಳ್ಳದೆ ನಿರ್ಲಕ್ಷ ವಹಿಸಿದ ಹಿನ್ನೆಲೆ ಹಾಗೂ ಸ್ಥಳೀಯವಾಗಿ ಚಿತ್ರೀಕರಣಕ್ಕೆ ಅನುಮತಿ ಪಡೆಯದ ಕಾರಣ ನಿರ್ಮಾಪಕರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement
ಅಪಾಯಕಾರಿ ಪ್ರದೇಶವಾಗಿದ್ದರೂ ಮುಂಜಾಗ್ರತೆ ಮಾಡಿರಲಿಲ್ಲಘಟನೆ ನಡೆದ ಸ್ಥಳದಲ್ಲಿ ವರ್ಷದ ಹಿಂದೆ ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟಿದ್ದರು. ಸಾಮಾನ್ಯವಾಗಿ ಜಲಪಾತಗಳ ಬಳಿ ಅಳವಾದ ಹೊಂಡಗಳಿರುವುದು ಸಾಮಾನ್ಯ. ಎರ್ಮಾಯಿ ಜಲಪಾತದಲ್ಲಿ ಈ ಹಿಂದೆ ದುರ್ಘಟನೆ ನಡೆದಿದ್ದರೂ ಯಾವುದೇ ಮುಂಜಾಗ್ರತೆ ವಹಿಸದೆ ಭಾರವಾದ ವಸ್ತ್ರ ಧರಿಸಿ ಫೋಟೋ ಶೂಟ್‌ಗೆ ಮುಂದಾಗಿರುವ ಬಗ್ಗೆ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯರ ನೆರವು
ಶವ ಹುಡುಕಾಟಕ್ಕೆ ಆಗ್ನಿಶಾಮಕ ದಳದ ಸಿಬಂದಿ ಜತೆಗೆ ಕೊಲ್ಲಿ, ಕಾಜೂರು ಸಹಿತ ವಿವಿಧ ಪ್ರದೇಶಗಳ ಸ್ಥಳೀಯರು ಸಹಕರಿದ್ದಾರೆ. ವ್ಯಕ್ತಿ ಜಲಪಾತದಲ್ಲಿ ಮುಳುಗಿರುವ ಸುದ್ದಿತಿಳಿದು ಜನಸಮೂಹ ಘಟನೆನಡೆದಸ್ಥಳದ ಬಳಿ ಹಾಗೂ ಜಲಪಾತದ ಬಳಿ ನೆರೆದಿದ್ದರು. “ಕನಸು’ ಸಿನೆಮಾ ಮಾಡಿದ್ದರು
ಸಂತೋಷ್ ಶೆಟ್ಟಿ ಈ ಹಿಂದೆ ಕನಸು ಕಣ್ಣು ತೆರೆದಾಗ ಸಿನೆಮಾವನ್ನು ನಿರ್ದೇ ಶಿಸಿದ್ದರು. ಚಂದನವನ ಹಾಗೂ ಗಂಧದ ಕುಡಿ ಸಿನೆಮಾ ಸೆನ್ಸಾರ್ ಹಂತಕ್ಕೆ ತಲುಪಿದೆ ಎನ್ನಲಾಗಿದೆ. ಕನಸುಗಳ ಸಾಧಕ
ಕಿನ್ನಿಗೋಳಿ: ಗಂಧದ ಕುಡಿ ಪರಿಸರ ಸಂರಕ್ಷಣೆ ಆಧಾರಿತ ಮಕ್ಕಳ ಸಿನೆಮಾ ಆಗಿತ್ತು. ಗಿಡಕ್ಕೆ ಜೀವ ಇದೆ ಎಂದು ಮಗು ಸಾಧಿಸಿ ತೋರಿಸುವ ಕಥಾ ವಸ್ತುವಿನ ಸಿನೆಮಾ ಆಗಿತ್ತು. ಇದರಲ್ಲಿ ವಿಜ್ಞಾನಿಯ ಪಾತ್ರ ಮಾಡಿದ್ದ ಸಂತೋಷ್ ಅದಕ್ಕಾಗಿ ಗಡ್ಡ ಬಿಟ್ಟಿದ್ದರು. ಮಂಗಳೂರಿನಲ್ಲಿ ಎಸ್‌ಡಿಎಸ್ ಕಾಲೇಜು ಪಕ್ಕದಲ್ಲಿ ಇಮೇಜಿನೇಷನ್ ಮೂವೀಸ್ ಸಂಸ್ಥೆಯನ್ನು ನಡೆಸುತ್ತಿದ್ದರು. ಇಲ್ಲಿ ಎಡಿಟಿಂಗ್ ಮಾಡಲಾಗುತ್ತಿತ್ತು. ಮೊದಲು ತ್ರೀಡಿ ಮಾಡೆಲ್ ಮಾಡುತ್ತಿದ್ದರು. ಸ್ವ-ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿದ್ದ ಅವರು ಸಾಧನೆಯಿಂದ ಮೇಲೆ ಬರುತ್ತಿದ್ದರು. ಆಧ್ಯಾತ್ಮದ ಬಗ್ಗೆ ಮುಂದಿನ ಸಿನೆಮಾ ಮಾಡುವ ಕನಸಿತ್ತು. ಕಟೀಲು ಕ್ಷೇತ್ರದ ಸಿನೆಮಾ ಮಾಡುವ ಯೋಚನೆಯೂ ಇತ್ತು. ಅನೇಕ ಸಂಸ್ಥೆಗಳ ನೂರಾರು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದ ಸಂತೋಷ್ ಶಾಲಾ ದಿನಗಳಲ್ಲಿ ಪುಟಾಣಿ ಹೆಲಿಕಾಪ್ಟರ್, ಹಡಗುಗಳಂತಹ ಮಾಡೆಲ್‌ಗಳನ್ನು ನಿರ್ಮಿಸಿ ಶಿಕ್ಷಕರ ಅಚ್ಚರಿಗೆ ಪಾತ್ರರಾಗಿದ್ದರು. ಬೆಂಗಳೂರು ಟೊಯೊಟಾ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಸಂತೋಷ್ ಜೋಧಾ ಅಕºರ್, ಮಂಗಲ್ ಪಾಂಡೆ ಬಾಲಿವುಡ್ ಸಿನೆಮಾಗಳಲ್ಲಿ ಅಸಿಸ್ಟೆಂಟ್ ಸೆಟ್ ಡಿಸೈನರ್ ಆಗಿ ಕೆಲಸ ಮಾಡಿದ್ದರು. ಕಟೀಲು ಜಾತ್ರೆ ಸಂದರ್ಭ ರಥ ಎಳೆಯುವುದು ಇತ್ಯಾದಿ ಸೇವೆಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದ ಇವರು ಇತ್ತೀಚಿಗಷ್ಟೇ ಕಟೀಲು ಮಿತ್ತಬೈಲಿನಲ್ಲಿ ಮನೆ ಕಟ್ಟಿದ್ದರು. ಅವರು ಕೃಷಿಕರಾದ ತಂದೆ ಶಂಕರ್, ತಾಯಿ ಲೀಲಾ ಹಾಗೂ ಇಬ್ಬರು ಅಕ್ಕಂದಿರನ್ನು ಅಗಲಿದ್ದಾರೆ. ಕಟೀಲು ಸಿತ್ಲದ ಮನೆಯಲ್ಲಿ ಬುಧವಾರ ಸಂಜೆ ಸಂತೋಷ್ ಶೆಟ್ಟಿ ಅಂತ್ಯಕ್ರಿಯೆ ನಡೆಯಿತು.