Advertisement

ಡೈರೆಕ್ಟರೇಟ್‌ ಸೆಕೆಂಡರಿ ಅಗ್ರಿಕಲ್ಚರ್‌; ದೇಶದಲ್ಲಿಯೇ ಪ್ರಥಮ

01:15 AM Apr 14, 2022 | Team Udayavani |

ಬೆಂಗಳೂರು: ಡೈರೆಕ್ಟರೇಟ್‌ ಆಫ್ ಸೆಕೆಂಡರಿ ಅಗ್ರಿಕಲ್ಚರ್‌ ರಚನೆ ಕುರಿತ ಪ್ರಧಾನಿಯವರ ಕನಸನ್ನು ಕರ್ನಾಟಕದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ನನಸು ಮಾಡಿದ್ದು, ಇದರಿಂದ ಕೃಷಿ ತೋಟಗಾರಿಕೆ, ಹೈನುಗಾರಿಕೆ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ, ಗುಡಿ ಕೈಗಾರಿಕೆ ಮೂಲಕ ರೈತರಿಗೆ ಹೆಚ್ಚಿನ ಆದಾಯ, ಉದ್ಯೋಗ ಹೆಚ್ಚಳ ಸಾಧ್ಯವಾಗಲಿದೆ. ಕೃಷಿ ಉಪ ಉತ್ಪನ್ನಗಳ ತಯಾರಿಕೆಯೂ ಸಾಧ್ಯವಾಗುತ್ತಿದೆ ಎಂದು ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮನಿರ್ಭರ ಯೋಜನೆಯಡಿ ಆಹಾರ ಸಂಸ್ಕರಣ ಘಟಕಗಳನ್ನು ರಚಿಸಲು ಸೆಕೆಂಡರಿ ಡೈರೆಕ್ಟರೇಟ್‌ ನೆರವಾಗಲಿದೆ. ಇದರಡಿ ಘಟಕಕ್ಕೆ ಪಡೆದ ಸಾಲಕ್ಕೆ ಶೇ. 35ರಷ್ಟು ಸಬ್ಸಿಡಿ ಸಿಗಲಿದೆ ಎಂದು ತಿಳಿಸಿದರು. ಅಲ್ಲದೆ ರಾಜ್ಯ ಸರಕಾರವು ಶೇ. 15ರಷ್ಟು ಸಬ್ಸಿಡಿ ನೀಡಲಿದ್ದು, ಒಟ್ಟು ಶೇ. 50 ಸಬ್ಸಿಡಿ ಸಿಗಲಿದೆ ಎಂದು ತಿಳಿಸಿದರು.

261 ಕೋಟಿ ರೂ. ವಿದ್ಯಾರ್ಥಿವೇತನ
ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಮಕ್ಕಳಿಗೆ ಕೃಷಿ ಕಾಲೇಜು ಸೇರಲು ಶೇ 40ರಷ್ಟು ಮೀಸಲಾತಿ ಇತ್ತು. ಅದನ್ನು 2021ರಲ್ಲಿ ಶೇ 50ಕ್ಕೆ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷ 186 ಜನ ರೈತರ ಮಕ್ಕಳಿಗೆ ಹೆಚ್ಚುವರಿ ಸೀಟು ಲಭಿಸಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ರೈತ ವಿದ್ಯಾನಿಧಿ ಆರಂಭ ಮಾಡಿದ್ದು, ಇದರಿಂದ 7.13 ಲಕ್ಷ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರೂ. 261 ಕೋಟಿ ವಿದ್ಯಾರ್ಥಿವೇತನ ಸಿಕ್ಕಿದೆ. ಇದು ಕೂಡ ದೇಶದಲ್ಲೇ ಮೊದಲು ಎಂದು ತಿಳಿಸಿದರು.

742 ರೈತ ಸಂಪರ್ಕ ಕೇಂದ್ರ
ಕರ್ನಾಟಕದಲ್ಲಿ 742 ರೈತ ಸಂಪರ್ಕ ಕೇಂದ್ರಗಳಿದ್ದು, ಅದರಲ್ಲಿ 694 ಕೃಷಿ ಯಾಂತ್ರೀಕರಣ ಕೇಂದ್ರಗಳನ್ನು ಸ್ಥಾಪಿಸಿ 22 ಲಕ್ಷ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲಿ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆಗೆ ಕೊಡಲಾಗುತ್ತಿದೆ. ಟ್ರಾಕ್ಟರ್‌ ಮತ್ತಿತರ ಉಪಕರಣ ಇಲ್ಲದ ರೈತರಿಗೆ ಇದರಿಂದ ಪ್ರಯೋಜನ ಸಿಗುತ್ತಿದೆ ಎಂದು ವಿವರ ನೀಡಿದರು. ಕೃಷಿ ಯಂತ್ರೋಪಕರಣ ಬ್ಯಾಂಕ್‌ ಕೂಡ ಆರಂಭವಾಗಿದೆ. ರಾಜ್ಯದಲ್ಲಿ ರಸಗೊಬ್ಬರದ ಯಾವುದೇ ಕೊರತೆ ಇಲ್ಲ ಎಂದರು.

Advertisement

ಪೊಲೀಸ್‌ ಮಾದರಿ “ದಳ’
ರಿವಾರ್ಡ್‌ ರಿಜುವನೇಟಿಂಗ್‌ ವಾಟರ್‌ಶೆಡ್‌ ಫಾರ್‌ ಅಗ್ರಿಕಲ್ಚರ್‌ ಯೋಜನೆಯು ಕರ್ನಾಟಕಕ್ಕೆ ಸಿಕ್ಕಿದ್ದು, ರಾಜ್ಯದ 21 ಜಿಲ್ಲೆಗಳಲ್ಲಿ 600 ಕೋಟಿ ರೂ. ವೆಚ್ಚದಡಿ ಮುಂದಿನ 5 ವರ್ಷಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ನ್ಯೂ ಜನರೇಷನ್‌ ವಾಟರ್‌ಶೆಡ್‌ ಯೋಜನೆಯಡಿ 642 ಕೋಟಿ ಮೊತ್ತವನ್ನು 51 ತಾಲೂಕುಗಳಲ್ಲಿ ಖರ್ಚು ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಕಳಪೆ ರಸಗೊಬ್ಬರ, ಕಳಪೆ ಬಿತ್ತನೆ ಬೀಜ ಮಾರಾಟದ ವಿರುದ್ಧ ಕಠಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಜಾಗೃತ ದಳವನ್ನು ಪೊಲೀಸ್‌ ಮಾದರಿಯಲ್ಲಿ ಜಾಗೃತಗೊಳಿಸಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next