“ಒಂದು ಕಥೆ ಕೇಳಿದ್ದೆ. ತುಂಬಾನೇ ಚೆನ್ನಾಗಿತ್ತು. ಕಥೆ ಹೇಳಿದವರ ಜೊತೆ ಮಾತನಾಡುತ್ತ, ಈ ಕಥೆ ಚೆನ್ನಾಗಿದೆ. ಮಾಡಿದರೆ ಒಂದೊಳ್ಳೆಯ ಸಿನಿಮಾ ಆಗುತ್ತೆ ಅಂತ ಹೇಳಿದ್ದೆ. ಆದರೆ, ಅವರು ಆ ಕಥೆ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ ಅಂತ ಖಂಡಿತವಾಗಿಯೂ ಭಾವಿಸಿರಲಿಲ್ಲ. ಎರಡು ದಿನ ಚಿತ್ರೀಕರಣ ಶುರು ಮಾಡಿ, ಅಂದು ಹೇಳಿದ ಕಥೆಯನ್ನು ಚಿತ್ರ ಮಾಡುತ್ತಿರುವುದಾಗಿ ಹೇಳಿ, ಇದೀಗ ಚಿತ್ರ ಬಿಡುಗಡೆವರೆಗೂ ತಂದಿದ್ದಾರೆ…’
– ಹೀಗೆ ಹೇಳಿದ್ದು ನಿರ್ದೇಶಕ ರವಿ ಆರ್.ಗರಣಿ. ಅವರು ಹೇಳಿದ್ದು, “ಗಿಣಿ ಹೇಳಿದ ಕಥೆ’ ಚಿತ್ರದ ನಿರ್ಮಾಪಕ ಕಮ್ ನಾಯಕ ದೇವರಾಜ್ ಬಗ್ಗೆ. ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಚಿತ್ರದ ಬಗ್ಗೆ ಹೇಳಲೆಂದೇ ನಿರ್ದೇಶಕ ನಾಗರಾಜ್ ಉಪ್ಪುಂದ ಮಾಧ್ಯಮ ಮುಂದೆ ಬಂದಿದ್ದರು. ರವಿ ಆರ್. ಗರಣಿ ಅಂದು ಚಿತ್ರತಂಡದ ಶ್ರಮ ಮತ್ತು ಪ್ರತಿಭೆ ಕುರಿತು ಹೇಳುತ್ತಾ ಹೋದರು.
“ದೇವ್ ಒಬ್ಬ ಒಳ್ಳೆಯ ಕಥೆಗಾರ. ಸಾಕಷ್ಟು ಕನಸು ಕಟ್ಟಿಕೊಂಡಾತ. ರಂಗಭೂಮಿ ಹಿನ್ನೆಲೆಯಿರುವ ಅವನಿಗೆ ಏನಾದರೊಂದು ಸಾಧಿಸುವ ಛಲ. ರಂಗಭೂಮಿಯ ಬಹುತೇಕ ಕಲಾವಿದರನ್ನು ಒಟ್ಟುಗೂಡಿಸಿ, ಚಿತ್ರದಲ್ಲಿ ಕಾಣುವಂತೆ ಮಾಡಿದ್ದಾರೆ. ಸಿನಿಮಾ ಬಗ್ಗೆ ಹೇಳುವುದಾದರೆ, ಇಲ್ಲಿ ಮೂರು ಜನ ಹೀರೋಗಳು. ಮೊದಲಿಗೆ ಕಥೆ ಹೀರೋ. ನಾಗರಾಜ್ ಉಪ್ಪುಂದ ಇನ್ನೊಬ್ಬ ಹೀರೋ. ಎಲ್ಲವನ್ನೂ ಸರಿದೂಗಿಸಿಕೊಂಡು, ಸಿನಿಮಾ ಮಾಡಿ ಜನರ ಮುಂದೆ ತರುತ್ತಿರುವ ದೇವ್ ಇನ್ನೊಬ್ಬ ಹೀರೋ. ಹಾಗಾಗಿ ನಾನು ಇದನ್ನ ಮಲ್ಟಿಸ್ಟಾರರ್ ಚಿತ್ರ ಎನ್ನುತ್ತೇನೆ. ಇದು ಎಲ್ಲರಿಗೂ ಗೆಲುವು ಕೊಡಲಿ’ ಅಂದರು ರವಿ ಆರ್.ಗರಣಿ.
ನಿರ್ದೇಶಕ ನಾಗರಾಜ್ ಉಪ್ಪುಂದ ಇಲ್ಲಿ ನಿರ್ದೇಶನದ ಜೊತೆಗೆ ಛಾಯಾಗ್ರಹಣವನ್ನೂ ಮಾಡಿದ್ದಾರೆ. ಈ ವಾರ ಚಿತ್ರ ಬರುತ್ತಿದ್ದು, ಸುಮಾರು 60 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ. ಇದೊಂದು ವಿಶೇಷ ಕಥೆ. ನಾಯಕ ಇಲ್ಲಿ ಡ್ರೈವರ್ ತನ್ನ ಕಾರಿನ ಪ್ರಯಾಣಿಕನೊಬ್ಬನಿಗೆ ಒಂದು ಕಥೆ ಹೇಳುತ್ತಾನೆ. ಅದೇ ಸಿನಿಮಾದ ವಿಶೇಷತೆ. ಇಲ್ಲಿ ಗಿಣಿ ಹೇಳುವ ಕಥೆಯೂ ಇದೆ. ಅದು ಬೇರೊಂದು ಕಥೆ ಹೇಳುತ್ತದೆ. ಇನ್ನೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ರಂಗಭೂಮಿಯ ನೂರಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ ಎಂದು ವಿವರ ಕೊಟ್ಟರು ನಿರ್ದೇಶಕರು.
ಸಂಗೀತ ನಿರ್ದೇಶಕ ಹಿತನ್ ಹಾಸನ್ ಅವರಿಲ್ಲಿ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿಯಲ್ಲಿದ್ದಾರೆ. ಚಿತ್ರದಲ್ಲಿ ಹೀರೋ ಎಂಬ ಹಾಡು ಈಗಾಗಲೇ ಎಲ್ಲೆಡೆ ಮೆಚ್ಚುಗೆ ಪಡೆದಿರುವುದರಿಂದ ಅವರಿಗೆ ಸಿನಿಮಾವನ್ನೂ ಸಹ ಎಲ್ಲರೂ ಮೆಚ್ಚುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ. ಒಳ್ಳೆಯ ಕಥೆ, ಚಿತ್ರಕಥೆ ಇದ್ದುದರಿಂದ ಹಿನ್ನೆಲೆ ಸಂಗೀತವನ್ನೂ ಸಹ ಚೆನ್ನಾಗಿ ಮಾಡಲು ಸಾಧ್ಯವಾಗಿದೆ ಎಂದು ಹೇಳಿಕೊಂಡರು ಅವರು.
ನಾಯಕಿ ಗೀತಾಂಜಲಿ ತಮ್ಮ ಪಾತ್ರದ ಬಗ್ಗೆ ಹೇಳುವುದಕ್ಕಿಂತ ಚಿತ್ರದಲ್ಲಿರುವ ಕನ್ನಡ ಸತ್ವ ಬಗ್ಗೆಯೇ ಹೆಚ್ಚು ಮಾತನಾಡಿದರು. “ಅಪ್ಪಟ ಕನ್ನಡ ಭಾಷೆ ಇಲ್ಲಿದೆ. ತಂಡದ ಎಫರ್ಟ್ ಚೆನ್ನಾಗಿತ್ತು. ಹಾಗಾಗಿ ಚಿತ್ರ ಕೂಡ ಅಷ್ಟೇ ಚೆನ್ನಾಗಿ ಮೂಡಿಬಂದಿದೆ. ರಂಗಭೂಮಿಯ ಬಹುತೇಕ ಕಲಾವಿದರು ಇಲ್ಲಿದ್ದಾರೆ. ನನಗೆ ಖುಷಿ ಮತ್ತು ಭಯ ಎರಡೂ ಇದೆ. ಯಾಕೆಂದರೆ, ಜನರು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಏನೋ ಎಂಬ ಕುತೂಹಲವು ಇದೆ. ಆದರೆ, ಎಲ್ಲರ ಶ್ರಮ ಇಲ್ಲಿ ವ್ಯರ್ಥ ಆಗಲ್ಲ ಎಂಬ ನಂಬಿಕೆಯೂ ಇದೆ’ ಎಂದರು ಗೀತಾಂಜಲಿ.
ದೀಪಕ್ ಸುಮಾರು 60 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಸಿದ ಬಗ್ಗೆ ಹೇಳಿಕೊಂಡರು. ರಾಜಶೇಖರ್ ಇಲ್ಲೊಂದು ಹಾಡು ಬರೆದಿದ್ದು, ನಿರ್ದೇಶಕರ ಜೊತೆ ದಶಕಗಳ ಸ್ನೇಹವಿದೆ. ಆ ಕಾರಣದಿಂದ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿಕೊಂಡರು.