“ಪ್ರತಿಯೊಬ್ಬ ಅಭಿಮಾನಿಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಕ್ರೀನ್ ಮೇಲೆ ಹೇಗೆ ಕಾಣಿಸಬೇಕು ಅನ್ನೋ ಕಲ್ಪನೆ ಇರುತ್ತದೆಯೋ, “ರಾಬರ್ಟ್’ ಸಿನಿಮಾದಲ್ಲಿ ಹಾಗೇ, ಸ್ಕ್ರೀನ್ ಮೇಲೆ ದರ್ಶನ್ ಕಾಣಿಸುತ್ತಾರೆ. ಯಾಕೆಂದ್ರೆ, ನಾನು ಒಬ್ಬ ಅಭಿಮಾನಿಯ ಸ್ಥಳದಲ್ಲಿ ನಿಂತು ಈ ಸಿನಿಮಾ ಮಾಡಿದ್ದೇನೆ. ಹಾಗಾಗಿ ದರ್ಶನ್ ಅವರ ಪ್ರತಿಯೊಬ್ಬ ಅಭಿಮಾನಿಗೂ “ರಾಬರ್ಟ್’ ಖಂಡಿತ ಇಷ್ಟವಾಗುತ್ತದೆ…’ ಇದು “ರಾಬರ್ಟ್’ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಮಾತು.
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ “ರಾಬರ್ಟ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಬಿಝಿಯಾಗಿರುವ ಚಿತ್ರತಂಡ, “ರಾಬರ್ಟ್’ನನ್ನು ಪ್ರೇಕ್ಷಕರಿಗೆ ಮುಟ್ಟಿಸುವ ಅಂತಿಮ ಕೆಲಸದಲ್ಲಿದೆ.
ಈಗಾಗಲೇ ಹೈದರಾಬಾದ್ ಮತ್ತು ಹುಬ್ಬಳ್ಳಿ ಎರಡೂ ಕಡೆ “ರಾಬರ್ಟ್’ ಪ್ರೀ-ರಿಲೀಸ್ ಇವೆಂಟ್ ನಡೆಸಿರುವ ಚಿತ್ರತಂಡ, ಏಕಕಾಲಕ್ಕೆ ಎರಡೂ ಭಾಷೆಗಳಲ್ಲೂ “ರಾಬರ್ಟ್’ನ ತೆರೆಗೆ ತರುವ ಪ್ಲಾನ್ ಹಾಕಿಕೊಂಡಿದೆ. ಇದೇ ವೇಳೆ ಚಿತ್ರದ ಬಗ್ಗೆ ಮಾತಿಗೆ ಸಿಕ್ಕ ನಿರ್ದೇಶಕ ತರುಣ್ ಸುಧೀರ್ “ರಾಬರ್ಟ್’ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. ಅದು ಅವರ ಮಾತುಗಳಲ್ಲೇ ..
ಇದು ಫ್ಯಾನ್ಸ್ ಸಿನಿಮಾ
ಒಂದು ಮಾಸ್ ಎಂಟರ್‌ಟೈನ್ಮೆಂಟ್ ಸಿನಿಮಾದಲ್ಲಿ ಏನೇನು ಇರಬೇಕೋ, ಅದೆಲ್ಲವೂ “ರಾಬರ್ಟ್’ನಲ್ಲಿದೆ. ಅದರಲ್ಲೂ ದರ್ಶನ್ ಫ್ಯಾನ್ಸ್ ನಿರೀಕ್ಷಿಸುವ ಆ್ಯಕ್ಷನ್, ಸೆಂಟಿಮೆಂಟ್, ಎಮೋಶನ್ಸ್, ಕಾಮಿಡಿ, ಎಲ್ಲ ಮಾಸ್ ಎಂಟರ್‌ಟೈನ್ಮೆಂಟ್ ಎಲಿಮೆಂಟ್ಸ್ ಇದರಲ್ಲಿದೆ. “ರಾಬರ್ಟ್’ ದರ್ಶನ್ ಅವರ ಸಿನಿಮಾ ಕೆರಿಯರ್‌ನ 53ನೇ ಸಿನಿಮಾ. ಒಬ್ಬ ಅಭಿಮಾನಿಯಾಗಿ ಅವರ 52 ಸಿನಿಮಾಗಳಲ್ಲಿ ಯಾವ್ಯಾವ ಅಂಶಗಳು ನನಗೆ ಖುಷಿ ನೀಡಿತ್ತೋ, ಅದೆಲ್ಲ ಅಂಶಗಳನ್ನೂ ಇಟ್ಟುಕೊಂಡು, ಅದರ ಜೊತೆ ಒಂದಷ್ಟು ಹೊಸ ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ.
“ಚೌಕ’ದ ಪಾತ್ರ ಸಿನಿಮಾವಾಗುತ್ತೆ ಅನ್ನೋ ನಿರೀಕ್ಷೆ ಇರಲಿಲ್ಲ
ಸುಮಾರು ನಾಲ್ಕು ವರ್ಷದ ಹಿಂದೆ “ಚೌಕ’ ಸಿನಿಮಾದಲ್ಲಿ ದರ್ಶನ್ ಅವರಿಗಾಗಿ “ರಾಬರ್ಟ್’ ಅನ್ನೋ ಪಾತ್ರವನ್ನು ಬರೆಯಲಾಗಿತ್ತು. ಆದ್ರೆ ಅದೇ “ರಾಬರ್ಟ್’ ಪಾತ್ರ ಮುಂದೆ ಸಿನಿಮಾವಾಗುತ್ತೆ ಅಂಥ ಗೊತ್ತಿರಲಿಲ್ಲ. “ರಾಬರ್ಟ್’ ಅನ್ನೋ ಆ ಪಾತ್ರ ಇವತ್ತು ಎಷ್ಟು ದೊಡ್ಡ ಮಟ್ಟಕ್ಕೆ ನಿರೀಕ್ಷೆ ಹುಟ್ಟಿಸಿದೆ ಅಂದ್ರೆ, ಹಿಂತಿರುಗಿ ನೋಡಿದ್ರೆ ಅದೆಲ್ಲವೂ ಕನಸೇನೋ ಅಂಥ ಅನಿಸುತ್ತದೆ
ಸೆನ್ಸಾರ್ ಪರೀಕ್ಷೆಯಲ್ಲಿ “ರಾಬರ್ಟ್’ ಪಾಸ್
ಇತ್ತೀಚೆಗೆ “ರಾಬರ್ಟ್’ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ, ಚಿತ್ರಕ್ಕೆ “ಯು/ಎ’ ಪ್ರಮಾಣಪತ್ರ ನೀಡಿ ಬಿಡುಗಡೆಗೆ ಅಸ್ತು ಎಂದಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಸದ್ಯ “ರಾಬರ್ಟ್’ನನ ಮೂರು ನಿಮಿಷದ ಮತ್ತೂಂದು ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಇಂದಿನಿಂದ ರಿಷಭ್ ಹೀರೋಯಿಸಂ: ಹೊಸ ಜಾನರ್ ಜತೆ ಶೆಟ್ರ ಎಂಟ್ರಿ
ದರ್ಶನ್, ಉಮಾಪತಿ ಇಲ್ಲದಿದ್ದರೆ “ರಾಬರ್ಟ್’ ಊಹಿಸಲೂ ಆಗ್ತಿರಲಿಲ್ಲ
ಇಡೀ “ರಾಬರ್ಟ್’ ಸಿನಿಮಾ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆಗೋದಕ್ಕೆ. ಎರಡು ಭಾಷೆಯಲ್ಲಿ ಬಿಡುಗಡೆಯಾಗೋದಕ್ಕೆ ಕಾರಣ ಸಿನಿಮಾದ ಹೀರೋ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ. ಈ ಇಬ್ಬರು ಇಲ್ಲದಿದ್ದರೆ, “ರಾಬರ್ಟ್’ ಅನ್ನು ಊಹಿಸಲೂ ಆಗುತ್ತಿರಲಿಲ್ಲ. ಇಡೀ ಸಿನಿಮಾಕ್ಕೆ ಈ ಇಬ್ಬರು ದೊಡ್ಡ ಶಕ್ತಿ. ಅವರಿಂದಲೇ “ರಾಬರ್ಟ್’ ಈ ಮಟ್ಟಕ್ಕೆ ಬಂದಿದೆ.
ರವಿ ರೈ