ಬೆಂಗಳೂರು: ನಿರ್ದೇಶಕ ದುನಿಯಾ ಸೂರಿ ಅಭಿಷೇಕ್ ಅಂಬರೀಶ್ ಅವರ ʼಬ್ಯಾಡ್ ಮ್ಯಾನರ್ಸ್ʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬ್ಯಾಕ್ ಟು ಬ್ಯಾಕ್ ಚಿತ್ರಗಳ ಸರದಾರ ದುನಿಯಾ ಸೂರಿ ಸೋಶಿಯಲ್ ಮೀಡಿಯಾ ಬಳಸುವುದು ತೀರಾ ಕಡಿಮೆ. ಅವರು ಫೇಸ್ ಬುಕ್, ಟ್ವಿಟರ್ ಯಾವುದರಲ್ಲೂ ತಮ್ಮ ಖಾತೆಯನ್ನು ಹೊಂದಿಲ್ಲ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಖಾತೆಯನ್ನು ಹೊಂದಿದ್ದಾರೆ. ಆದರೆ ತಮ್ಮ ಹೆಸರು ಬಳಸಿಕೊಂಡು ನಕಲಿ ಖಾತೆಯನ್ನು ತೆರೆದವರ ವಿರುದ್ಧ ಸೂರಿ ಬೇಸರಗೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಖಾತೆ ಹೊಂದಿದ್ದರೂ, ಸೂರಿ ಹೆಚ್ಚು ಪೋಸ್ಟ್ ಗಳನ್ನು ಹಾಕುವುದಿಲ್ಲ. ಅವರು ಸೋಶಿಯಲ್ ಮೀಡಿಯಾದಲ್ಲಿ ದೂರವೇ ಇರುವ ಹಾಗೆ ಇರುತ್ತಾರೆ. ಈ ನಡುವೆ ಅವರ ಹೆಸರು ಬಳಸಿಕೊಂಡು ಕೆಲವರು ನಕಲಿ ಫೇಸ್ ಬುಕ್, ಟ್ವಿಟರ್ ಇತ್ಯಾದಿ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಈ ಕಾರಣದಿಂದ ಮನಸ್ಸಿಗೆ ಬೇಜಾರು ಆಗುತ್ತಿದೆಯೆಂದು ಹೇಳಿ ಸೈಬರ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ತಾಯಿಯಾದ ನಟಿ ಸೋನಮ್ ಕಪೂರ್ ; ಪತಿ ಆನಂದ್ ಅಹುಜಾ ಸಂಭ್ರಮ
ಈ ಕುರಿತು ಬರೆದುಕೊಂಡಿರುವ ಅವರು, ‘ಎಲ್ಲರಿಗೂ ನಮಸ್ಕಾರ, ನಾನು ಕನ್ನಡ ಚಲನಚಿತ್ರ ನಿರ್ದೇಶಕ ಸೂರಿ (ಸುರೇಶ್ ರಾಮಸ್ವಾಮಿ) ಇನ್ ಸ್ಟಾಗ್ರಾಮ್ ಬಿಟ್ಟರೆ, ಬೇರೆ ಯಾವ ರೀತಿಯ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲೂ ನಾನು ಇಲ್ಲ. ಟ್ವಿಟ್ಟರ್‌ನಲ್ಲಿ ದುನಿಯಾ ಸೂರಿ ಎಂಬ ಅಕೌಂಟ್ ನನ್ನದಲ್ಲ. ಈ ನಡುವೆ ಟ್ವಿಟ್ಟರ್ ಅಕೌಂಟ್‌ನಲ್ಲಿ ಅಪ್ಡೇಟ್ ಆಗುತ್ತಿರುವ ಯಾವ ಅನಿಸಿಕೆಯೂ, ಅಭಿಪ್ರಾಯ ಮತ್ತು ಸಮಾಜದ ಆಗುಹೋಗುಗಳು ನನ್ನದಲ್ಲ. ಕಾನೂನು ಪ್ರಕಾರ ನನ್ನ ಫೋಟೋ ಹಾಗೂ ನನ್ನ ಹೆಸರನ್ನು ನನ್ನ ಅನುಮತಿ ಇಲ್ಲದೇ ಬಳಸುವುದು ಅಪರಾಧ. ದಯವಿಟ್ಟು ಇದನ್ನು ನಿಲ್ಲಿಸಿ, ಸೈಬರ್ ಕ್ರೈಂಗೆ ಈ ಹಿಂದೆ ಫೇಕ್ ಅಕೌಂಟ್ಸ್ ಹಾಗೂ ಫೇಕ್ ಆಡಿಷನ್‌ಗಳ ಬಗ್ಗೆ ನಾನು ದೂರು ನೀಡಿದ್ದೇನೆ. ಈಗ ಈ ಟ್ವಿಟ್ಟರ್‌ನ ಫೇಕ್ ಖಾತೆ ಬಗ್ಗೆಯೂ ದೂರು ನೀಡುತ್ತೇನೆ. ನನ್ನ ಕೆಲಸದ ನಡುವೆ ಈ ರೀತಿಯ ವಿಚಾರವು ನನ್ನ ಮನಸ್ಸಿಗೆ ಬಹಳ ನೋವು ಉಂಟು ಮಾಡಿದೆ” ಎಂದಿದ್ದಾರೆ.
ಸೂರಿ ”ಬ್ಯಾಡ್ ಮ್ಯಾನರ್ಸ್” ಚಿತ್ರದಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ ಶಿವರಾಜ್ ಕುಮಾರ್ ಅವರ ಚಿತ್ರವನ್ನು ನಿರ್ದೇಶನ ಮಾಡುತ್ತಾರೆ ಎನ್ನಲಾಗುತ್ತಿದೆ.