ಅತ್ತ ಕಡೆ ದುನಿಯಾ ವಿಜಯ್ ಫ್ಯಾಮಿಲಿ, ಇತ್ತ ಕಡೆ ನಿರ್ದೇಶಕ ಆರ್.ಚಂದ್ರು ಫ್ಯಾಮಿಲಿ, ಅದರ ಜೊತೆಗೆ ಚಿತ್ರರಂಗದ ಕುಟುಂಬ… ಹೀಗೆ ಕುಟುಂಬಗಳೆಲ್ಲವೂ ಒಟ್ಟಾಗಿ ಸಂಭ್ರಮಿಸಿದ್ದು “ಕನಕ’ ಚಿತ್ರದ ಆಡಿಯೋ ಬಿಡುಗಡೆಯ ವಿಶೇಷ ಎನ್ನಬಹುದು. ಆರ್.ಚಂದ್ರು ನಿರ್ಮಾಣ, ನಿರ್ದೇಶನದ “ಕನಕ’ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಗರದ ಲಲಿತ್ ಅಶೋಕ ಹೋಟೆಲ್‌ನಲ್ಲಿ ನಡೆಯಿತು.
ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ನಿರ್ದೇಶಕರುಗಳಾದ ಯೋಗರಾಜ್ ಭಟ್, ಸೂರಿ ಹಾಗೂ ಶಶಾಂಕ್ ಬಂದಿದ್ದರು. ಅವರೆಲ್ಲರೂ ಒಂದೊಂದು ಹಾಡುಗಳನ್ನು ಬಿಡುಗಡೆ ಮಾಡಿದರು. ಇನ್ನು, ದುನಿಯಾ ವಿಜಯ್ ಕುಟುಂಬ ಒಂದು ಹಾಡು ಬಿಡುಗಡೆ ಮಾಡಿದರೆ, ಉಳಿದಂತೆ ಯೋಗರಾಜ್ ಭಟ್, ಸೂರಿ, ಶಶಾಂಕ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು.
ಚಂದ್ರು ಸಿನಿಮಾಕ್ಕಾಗಿ ಬಡಿದಾಡುವ ಮನುಷ್ಯ ಎಂದು ಭಟ್ರಾ ಹೇಳಿದರೆ, ಚಂದ್ರು ಸಿನಿಮಾವನ್ನು ಪ್ರೀತಿಸುವ ವ್ಯಕ್ತಿ ಎಂದರು ಸೂರಿ. ಇನ್ನು, ಶಶಾಂಕ್ ಅವರಿಗೆ ಚಂದ್ರು ಅವರ ಮೇಕಿಂಗ್ ಶೈಲಿ ಇಷ್ಟವಂತೆ. ಜೊತೆಗೆ ಯಾವುದೇ ಒಂದು ಜಾನರ್‌ಗೆ ಅಂಟಿಕೊಳ್ಳದೇ, ಎಲ್ಲಾ ತರಹ ಪ್ರಯತ್ನಿಸುತ್ತಾರೆಂದರು ಶಶಾಂಕ್. ಆಡಿಯೋ ಬಿಡುಗಡೆಗೆ ಆರ್.ಚಂದ್ರು ಊರಾದ ಶಿಡ್ಲಘಟ್ಟದಿಂದಲೂ ಸಾಕಷ್ಟು ಮಂದಿ ಹಿತೈಷಿಗಳು ಬಂದಿದ್ದರು.
ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, “ಚಂದ್ರು ಅವರಿಗೆ ನಾಯಕತ್ವ ಗುಣವಿದೆ. ಅವರು ಬೇಕಾದರೆ ರಾಜಕೀಯಕ್ಕೂ ಬರಬಹುದು’ ಎನ್ನುತ್ತಾ “ಕನಕ’ ಚಿತ್ರಕ್ಕೆ ಶುಭಕೋರಿದರು. ತಾವು ಆಹ್ವಾನಿಸಿದವರೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದರಿಂದ ಆರ್.ಚಂದ್ರು ಖುಷಿಯಾಗಿದ್ದರು. “ಇವತ್ತು ಮೂವರು ನಿರ್ದೇಶಕರನ್ನು ಕರೆದು ಅವರಿಂದ ಹಾಡು ಬಿಡುಗಡೆ ಮಾಡಿಸಿ, ಸನ್ಮಾನಿಸಿದ್ದು ಖುಷಿ ಕೊಟ್ಟಿದೆ. ಅವರು ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಕಳೆದಿದೆ.
ನಾನು ಅವರನ್ನು ನೋಡಿ ಸಾಕಷ್ಟು ಕಲಿತಿದ್ದೇನೆ’ ಎಂದರು. “ದುನಿಯಾ’ ವಿಜಯ್ ಕೂಡಾ “ಕನಕ’ ಬಗ್ಗೆ ಮಾತನಾಡಿದರು. ಇನ್ನು, “ಕನಕ’ ಚಿತ್ರದ ಮೂಲಕ ಗಾಯಕ ನವೀನ್ ಸಜ್ಜು ಸಂಗೀತ ನಿರ್ದೇಶಕರಾಗಿದ್ದಾರೆ. ತಮಗೆ ಅವಕಾಶ ಕೊಟ್ಟ ವಿಜಯ್ ಹಾಗೂ ಚಂದ್ರು ಅವರನ್ನು ಯಾವತ್ತೂ ಮರೆಯಲ್ಲ ಎಂದರು. ಕಾರ್ಯಕ್ರಮದಲ್ಲಿ ಚಿತ್ರದ ಹಾಡು ಹಾಗೂ ಟ್ರೇಲರ್ ಪ್ರದರ್ಶಿಸಲಾಯಿತು. ನಾಯಕಿಯರಾದ ಮಾನ್ವಿತಾ ಹಾಗೂ ಹರಿಪ್ರಿಯಾ ಗೈರಾಗಿದ್ದರು.