ಸದ್ಯ ಕೋವಿಡ್ 19 ವೈರಸ್ ನಿಯಂತ್ರಿಸುವ ಸಲುವಾಗಿ ಏ. 14 ರ ವರೆಗೆ ದೇಶದಾದ್ಯಂತ ಕರ್ಫ್ಯೂ ಜಾರಿಯಾಗಿದೆ. ಉದ್ಯಮಗಳು, ಅಂಗಡಿ-ಮುಂಗಟ್ಟುಗಳು, ವ್ಯಾಪಾರ-ವಹಿವಾಟು ಎಲ್ಲವೂ ಕೋವಿಡ್ 19 ಎಫೆಕ್ಟ್ನಿಂದಾಗಿ ಬಂದ್ ಆಗಿದೆ. ಇನ್ನು ಮನೆಯಿಂದ ಯಾರೂ ಹೊರಬಾರದಂತೆ ಸೂಚಿಸಿರುವುದರಿಂದ, ಜನ ಸಾಮಾನ್ಯರಿಂದ ಹಿಡಿದು ರಾಜಕಾರಣಿಗಳು, ಸ್ಟಾರ್, ಸೆಲೆಬ್ರಿಟಿಗಳವರೆಗೆ ಎಲ್ಲರೂ
ಮನೆಯಲ್ಲೇ ಉಳಿಯುವಂತಾಗಿದೆ. ಮನೆಯಲ್ಲಿರುವ ಬಹುತೇಕರು ದಿನ ಕಳೆಯಲು ತಮ್ಮ ಆಸಕ್ತಿಕರ ಹವ್ಯಾಸಗಳು, ಕೆಲಸಗಳತ್ತ ಮೊರೆ ಹೋಗುತ್ತಿದ್ದಾರೆ. ಇನ್ನು ಸಿನಿಮಾಗಳ ಸೂತ್ರಧಾರರು ಎಂದೇ ಕರೆಸಿಕೊಳ್ಳುವ ನಿರ್ದೇಶಕರು ಈ ಸಮಯದಲ್ಲಿ ಏನು ಮಾಡುತ್ತಿರಬಹುದು, ಕಳೆದ ಒಂದು ವಾರದಲ್ಲಿ ಏನೇನು ಮಾಡಿರಬಹುದು, ಅವರ ದಿನಚರಿ ಹೇಗಿದೆ ಎಂಬುದರ ಸುತ್ತ ಒಂದು ರೌಂಡಪ್ ಡೈರೆಕ್ಟರ್ಸ್ ಸ್ಪೆಷಲ್ ಸಿನಿಪ್ರಿಯ ಓದುಗರ ಮುಂದೆ…
ಸದ್ಯಕ್ಕೆ ಯಾರೂ ಮನೆಯಿಂದ ಹೊರಗೆ ಹೋಗುವಂತಿಲ್ಲ. ಹಾಗಂತ ನಮ್ಮ ಕೆಲಸವೇನೂ ನಿಂತಿಲ್ಲ ಎನ್ನುತ್ತ ಮೊದಲು ಮಾತಿಗಿಳಿಯುತ್ತಾರೆ ನಿರ್ದೇಶಕ ಪವನ್ ಒಡೆಯರ್. ಹೌದು, ನಿರ್ದೇಶಕರ ಕೆಲಸ ಅನ್ನೊದು ಕ್ರಿಯೆಟಿವ್ ಕೆಲಸ ಆಗಿರುವುದರಿಂದ, ಯಾವುದೇ ಬಂದ್ ಆಗಲಿ, ಏನೇ ಕರ್ಫ್ಯೂ ಇರಲಿ ಅದ್ಯಾವುದು ಒಬ್ಬ ನಿರ್ದೇಶಕನ ಕೆಲಸಕ್ಕೆ ಎಂದೂ ಅಡ್ಡಿ ಮಾಡದು ಎನ್ನುವುದು ಪವನ್ ಒಡೆಯರ್ ಮಾತು. ಕಳೆದ ಹತ್ತು ದಿನಗಳಿಂದ ಗೃಹಬಂಧಿಯಂತೆ ಆಗಿರುವ ಪವನ್ ಒಡೆಯರ್, ಈ ವೇಳೆಯಲ್ಲಿ ಒಂದಷ್ಟು ಪುಸ್ತಕಗಳನ್ನು ಓದಿ ಮುಗಿಸಿ ದ್ದಾರಂತೆ. ಜೊತೆಗೆ ತಮ್ಮ ರೆಮೋ ಸಿನಿ ಮಾದ ಸಣ್ಣಪುಟ್ಟ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮಾಡಿದ್ದಾರಂತೆ. ಸಿಕ್ಕ ಗ್ಯಾಪಲ್ಲಿ ಕೆಲ ಒಳ್ಳೆಯ ಸಿನಿಮಾಗಳನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.
ಮತ್ತೂಬ್ಬ ನಟ ಕಂ ನಿರ್ದೇಶಕ ರಮೇಶ್ ಅರವಿಂದ್, ಕಳೆದ ಕೆಲದಿನಗಳಿಂದ ಕಂಪ್ಲೀಟ್ ಫ್ಯಾಮಿಲಿಮೆನ್! ಏಪ್ರಿಲ್ 14ರ ವರೆಗೂ ಹೊರಗೆಲ್ಲೂ ಹೋಗದಿರುವ ನಿರ್ಧಾರ ಮಾಡಿರುವ ರಮೇಶ್ ಅರಂದ್ ತಮಗೆ ತಾವೇ ಗೃಹಬಂಧನ ಧಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡುವ ರಮೇಶ್ ಅರವಿಂದ್, ಯಾವಾಗಲೂ ಕೆಲಸ ಅಂಥ ಬಹುತೇಕ ಸಮಯ ಹೊರಗೇ ಇರುತ್ತಿದ್ದೆ. ಈಗ ಅಪರೂಪಕ್ಕೆ ಮನೆಯಲ್ಲೇ ಇರುವಂಥ ಸಂದರ್ಭ ಬಂದಿದೆ. ಸದ್ಯಕ್ಕೆ ಈ ವೇಳೆ ಮನೆಯಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದೇನೆ. ಬಾಕಿಯಿದ್ದ ಎಲ್ಲ ಕೆಲಸಗಳನ್ನೂ ಒಂದೊಂದಾಗಿ ಮಾಡಿ ಮುಗಿಸುತ್ತಿದ್ದೇನೆ. ಬಹಳ ವರ್ಷಗಳ ನಂತರ ತುಂಬ ಸಮಯ ಸಿಕ್ಕಿದೆ ಏನೋ ಅಂಥ ಅನಿಸ್ತಿದೆ. ಇದರ ನಡುವೆ ಶಿವಾಜಿ ಸುರತ್ಕಲ್-2 ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಕೂಡ ನಡೆಯುತ್ತಿದೆ. ಒಟ್ಟಾರೆ ಮನೆಯಲ್ಲಿ ಫ್ಯಾಮಿಲಿ ಜೊತೆ ಸಣ್ಣಪುಟ್ಟ ಸಿನಿಮಾ ಕೆಲಸಗಳೂ ನಡೆಯುತ್ತಿದೆ. ನಮ್ಮನ್ನ ನಾವು ಅವಲೋಕನ ಮಾಡಿಕೊಳ್ಳೊದಕ್ಕೆ ಇದೊಳ್ಳೆ ಸಮಯ ಎನ್ನುವುದು ರಮೇಶ್ ಅರಂದ್ ಮಾತು.
ಕನ್ನಡದ ಮತ್ತೂಬ್ಬ ಯುವ ನಿರ್ದೇಶಕ ಬಹದ್ದೂರ್ ಚೇತನ್ ಕುಮಾರ್, ಕೋವಿಡ್ 19 ಕರ್ಫ್ಯೂದಿಂದ ಬ್ರೇಕ್ ತೆಗೆದುಕೊಂಡು ಬೆಂಗಳೂರಿನಿಂದ ತಮ್ಮ ಹುಟ್ಟೂರಿಗೆ ತೆರಳಿದ್ದಾರೆ. ಸದ್ಯ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ತಮ್ಮ ಮನೆಯಲ್ಲಿರುವ ಚೇತನ್ ಕುಮಾರ್, ತಮ್ಮ ಮುಂಬರುವ ಜೇಮ್ಸ್ ಚಿತ್ರದ ಎರಡನೇ ಹಂತದ ಶೂಟಿಂಗ್ ಪ್ಲಾನಿಂಗ್ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಚೇತನ್ ಕುಮಾರ್, ಇಡೀ ದೇಶದಲ್ಲಿ ಎಲ್ಲರೂ ಕೋವಿಡ್ 19 ವಿರುದ್ದ ಹೋರಾಡಲೇ ಬೇಕು. ಕನಿಷ್ಟ ಪಕ್ಷ ನಾವು ನಮ್ಮ ಮನೆಯಿಂದ ಹೊರಬಾರದೇ ಅದಕ್ಕೆ ಬೆಂಬಲವಾಗಿ ನಿಲ್ಲಬೇಕು. ಸದ್ಯಕ್ಕೆ ನಾನು ಮನೆಯಲ್ಲೇ ಇದ್ದು ಬಾಕಿ ಇರುವ ಒಂದಷ್ಟು ಸ್ಕ್ರಿಪ್ಟ್ ಕೆಲಸಗಳನ್ನು, ಹಾಡುಗಳನ್ನ ಬರೆಯುತ್ತಿದ್ದೇನೆ. ಮಿಸ್ ಮಾಡಿಕೊಂಡ ಒಳ್ಳೆಯ ಒಂದಷ್ಟು ಸಿನಿಮಾಗಳನ್ನ ನೋಡುತ್ತಿದ್ದೇನೆ. ಒಟ್ಟಿನಲ್ಲಿ ಬಂದ್ ಇದ್ದರೂ ನನ್ನ ಕೆಲಸಗಳು ಎಂದಿನಂತೆ ಮನೆಯೊಳಗೇ ನಡೆಯುತ್ತಿದೆ ಎನ್ನುತ್ತಾರೆ.
ನಿರ್ದೇಶಕ ಯೋಗರಾಜ ಭಟ್ ಕೂಡ ಸದ್ಯಕ್ಕೆ ಹೋಂ ಕ್ವಾರೆಂಟೈನ್ ಮೂಡ್‌ನಲ್ಲಿದ್ದಾರೆ! ಕೋವಿಡ್ 19 ಕೊಟ್ಟ ಬ್ರೇಕ್ ಬಗ್ಗೆ ಮಾತನಾಡುವ ಭಟ್ಟರು, ನಾವೆಲ್ಲ ಯಾವುದೋ ಗೊತ್ತು, ಗುರಿಯಿರದ ಧಾವಂತದ ಬದುಕಿನಲ್ಲಿ ಓಡುತ್ತಿದ್ದೆವು. ಆದ್ರೆ ಯಾಕಾಗಿ ಓಡ್ತಿದ್ದೇವೆ, ಯಾರಿಗಾಗಿ ಓಡ್ತಿದ್ದೇವೆ ಅನ್ನೊದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಈಗ ನಮ್ಮನ್ನೇ ನಾವು ಕೇಳಿಕೊಳ್ಳುವಂತ ಕಾಲ ಬಂದಿದೆ. ಕಳೆದ ಕೆಲ ದಿನಗಳಿಂದ ಒಂದಷ್ಟು ವೆಬ್ ಸೀರಿಸ್ ನೋಡ್ತಿದ್ದೀನಿ. ಒಂದಷ್ಟು ಪುಸ್ತಕ ಓದುತ್ತಿದ್ದೀನಿ. ಮನೆಯಲ್ಲಿ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದೇನೆ ಎನ್ನತ್ತಾರೆ ಯೋಗರಾಜ ಭಟ್.