ನಿರ್ದೇಶಕ ಶಶಾಂಕ್, ಪುನೀತ್ ಅವರಿಗೆ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈ ಚಿತ್ರವನ್ನು ಪುನೀತ್‌ರಾಜಕುಮಾರ್ ತಮ್ಮ ಪಿಆರ್‌ಕೆ ಬ್ಯಾನರ್‌ನಡಿ ನಿರ್ಮಿಸಲಿದ್ದು, ಚಿತ್ರ ಮುಂದಿನ ವರ್ಷ ಆರಂಭವಾಗಲಿದೆ. ಇದರ ಹೊರತಾಗಿಯೂ ಶಶಾಂಕ್ ಪಾಳಯದಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ. ಅದು ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಸಿನಿಮಾದ ಕೆಲಸಗಳು. ಹೌದು, ಶಶಾಂಕ್ ತಮ್ಮದೇ ಆದ “ಶಶಾಂಕ್ ಸಿನಿಮಾಸ್’ ಎಂಬ ಬ್ಯಾನರ್ ಹುಟ್ಟುಹಾಕಿರುವ ವಿಚಾರ ನಿಮಗೆ ಗೊತ್ತೇ ಇದೆ.
ಈಗ ಈ ಬ್ಯಾನರ್‌ನಡಿ ಒಂದಷ್ಟು ಸಿನಿಮಾಗಳನ್ನು ಮಾಡಲು ಶಶಾಂಕ್ ನಿರ್ಧರಿಸಿದ್ದಾರೆ. ಮೊದಲ ಹಂತವಾಗಿ ಶಶಾಂಕ್ ಬ್ಯಾನರ್‌ನಲ್ಲಿ ಮೂರು ಸಿನಿಮಾಗಳು ತಯಾರಾಗಲಿವೆ.
ಅಜೇಯ್ ರಾವ್ ನಾಯಕರಾಗಿರುವ “ತಾಯಿಗೆ ತಕ್ಕ ಮಗ’, “ಆಪರೇಷನ್ ಅಲಮೇಲಮ್ಮ’ ಮೂಲಕ ನಾಯಕರಾದ ರಿಷಿ ನಟನೆ ಒಂದು ಚಿತ್ರ ಹಾಗೂ “ಕ್ರೇಜಿ ಬಾಯ್’ ದಿಲೀಪ್ ಪ್ರಕಾಶ್ ಹೀರೋ ಆಗಿರುವ ಒಂದು ಸಿನಿಮಾಗಳು ಶಶಾಂಕ್ ಸಿನಿಮಾಸ್‌ನಡಿ ತಯಾರಾಗಲಿವೆ. ಅಜೇಯ್‌ರಾವ್ ನಾಯಕರಾಗಿರುವ “ತಾಯಿಗೆ ತಕ್ಕ ಮಗ’ ಚಿತ್ರವನ್ನು ಶಶಾಂಕ್ ಅವರ ಶಿಷ್ಯ ರಘು ಕೋಮಿ ನಿರ್ದೇಶನ ಮಾಡುತ್ತಿದ್ದು, ಚಿತ್ರ ಇದೇ ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಇನ್ನು, ರಿಷಿ ನಾಯಕರಾಗಿರುವ ಚಿತ್ರ ಮುಂದಿನ ವರ್ಷ ಆರಂಭವಾಗಲಿದ್ದು, ಈ ಚಿತ್ರದ ನಿರ್ದೇಶಕರು ಇನ್ನಷ್ಟೇ ಅಂತಿಮವಾಗಬೇಕು. ಯಾರು ಒಳ್ಳೆಯ ಕಥೆ ತರುತ್ತಾರೋ ಅವರಿಗೆ ಈ ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಗುತ್ತದೆಯಂತೆ. ಸದ್ಯ ರಿಷಿ ಎರಡು ಸಿನಿಮಾಗಳಿಗೆ ಕಮಿಟ್ ಆಗಿದ್ದು, ಆ ಚಿತ್ರಗಳನ್ನು ಮುಗಿಸಿಕೊಂಡು ಶಶಾಂಕ್ ಸಿನಿಮಾಸ್‌ನಲ್ಲಿ ನಟಿಸಲಿದ್ದಾರೆ.
“ಕ್ರೇಜಿ ಬಾಯ್’ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟಿರುವ ದಿಲೀಪ್ ಪ್ರಕಾಶ್ ಅವರ ಸಿನಿಮಾವನ್ನು ಸ್ವತಃ ಶಶಾಂಕ್ ಅವರೇ ನಿರ್ದೇಶಿಸಲಿದ್ದಾರೆ. ಸದ್ಯ ಸ್ಕ್ರಿಪ್ಟ್ ಲಾಕ್ ಆಗಿದ್ದು, ಯಾವಾಗ ಬೇಕಾದರೂ ಚಿತ್ರೀಕರಣಕ್ಕೆ ತೆರಳುವಷ್ಟು ಸಿದ್ಧತೆ ನಡೆದಿದೆಯಂತೆ.
ಪುನೀತ್‌ರಾಜಕುಮಾರ್ ಅವರ ಸಿನಿಮಾ ಮುಗಿಸಿಕೊಂಡು ಶಶಾಂಕ್ ಈ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಶಶಾಂಕ್. ಇದು ಸದ್ಯ ಕಮಿಟ್ ಆಗಿರುವ ಸಿನಿಮಾಗಳು. ಇದರ ಹೊರತಾಗಿಯೂ ಶಶಾಂಕ್ ಸಿನಿಮಾಸ್‌ನಡಿ ಸತತವಾಗಿ ಸಿನಿಮಾ ಮಾಡುವ ಆಲೋಚನೆ ಶಶಾಂಕ್ ಅವರಿಗಿದೆ. ಎಲ್ಲವೂ ಕಾರ್ಪೋರೇಟ್ ಶೈಲಿಯಲ್ಲಿ ಮಾಡುವ ಉದ್ದೇಶ ಅವರದು.
“ಸಿನಿಮಾ ಮಾಡಿಕೊಡಿ ಎಂದು ನನ್ನಲ್ಲಿ ಸಾಕಷ್ಟು ಮಂದಿ ನಿರ್ಮಾಪಕರು ಬರುತ್ತಾರೆ. ಆದರೆ, ನಾನು ಒಂದು ಸಿನಿಮಾ ಸಂಪೂರ್ಣ ಮುಗಿಯುವ ಮುಂಚೆ ಮತ್ತೂಂದು ಸಿನಿಮಾ ಮಾಡೋದಿಲ್ಲ. ಹಾಗಂತ ಸಿನಿಮಾ ಮಾಡಿಕೊಡಿ ಎಂದು ಬಂದವರನ್ನು ನಿರಾಸೆ ಮಾಡಿ ಕಳಿಸೋದು ಸರಿಯಲ್ಲ.
ಹಾಗಾಗಿ, ನನ್ನದೇ ಒಂದು ತಂಡ ಮಾಡಿಕೊಂಡು ಜಾಯಿಂಟ್‌ವೆಂಚರ್‌ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದೇನೆ. ಇಲ್ಲಿ ಚಿತ್ರದ ಕ್ರಿಯೇಟಿವ್ ಪಾರ್ಟ್ ಬಗ್ಗೆ ನಾನು ಗಮನಹರಿಸುತ್ತೇನೆ. ಅದು ಯಾರದ್ದೇ ನಿರ್ದೇಶನವಾದರು. ಉಳಿದಂತೆ ನಿರ್ಮಾಣ ನೋಡಿಕೊಳ್ಳಲು ನನ್ನಿಬ್ಬರು ಸ್ನೇಹಿತರಿದ್ದಾರೆ. ಪಕ್ಕಾ ಕಾರ್ಪೋರೇಟ್ ಶೈಲಿಯಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಸ್ವಮೇಕ್ ಹಾಗೂ ಸಮಾಜ ಮುಖೀ ಸಿನಿಮಾಗಳನ್ನು ಕೊಡೋದು ನಮ್ಮ ಉದ್ದೇಶ’ ಎನ್ನುತ್ತಾರೆ ಶಶಾಂಕ್.