ಬೆಂಗಳೂರು: ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಎಸ್. ನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬುಧವಾರ ಸೇರ್ಪಡೆಯಾದರು.
ನಾರಾಯಣ್ ಅವರೊಂದಿಗೆ ಪತ್ನಿ ಭಾಗ್ಯವತಿ, ಪುತ್ರ ಪಂಕಜ್ ಕೂಡ ಸಾಥ್ ನೀಡಿ ಪಕ್ಷ ಸೇರ್ಪಡೆಯಾಗಿದ್ದಾರೆ.ಇದೇ ವೇಳೆ ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರೂ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದರು.
ಸುದ್ದಿಗಾರರ ಜತೆ ಮಾತನಾಡಿದ ನಾರಾಯಣ್,’ಕಳೆದ 3 ದಶಕಗಳಿಂದ ನಟ, ನಿರ್ಮಾಪಕ, ನಿರ್ದೇಶಕನಾಗಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿರುವೆ .ಕನ್ನಡ ಚಿತ್ರರಂಗದ ನನಗೆ ಎಲ್ಲವನ್ನೂ ಕೊಟ್ಟಿದೆ.ನಿರೀಕ್ಷೆ ಮೀರಿದ ಅವಕಾಶ ಕೊಟ್ಟಿದೆ.ನಾನು ರಾಜಕೀಯ ರಂಗಕ್ಕೆ ಏಕೆ ಬಂದೆ ಎಂಬ ಪ್ರಶ್ನೆ ಗೆ ಉತ್ತರ ಸಿಗಲಿದೆ’ ಎಂದರು.
‘ಈ ಭಾರತ ಮಣ್ಣಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಋಣಿ ಆಗಿರಬೇಕು. ಬ್ರಿಟಿಷ್ ನವರು ದೇಶ ದೋಚಿ ಹೋದಾಗ, ಅನ್ನ, ನೀರು ಧೈರ್ಯ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ .ಹಿಂದುಳಿದ ವರ್ಗಗಳ ಧ್ವನಿಯಾಗಿದೆ ಕಾಂಗ್ರೆಸ್. ಪಕ್ಷದ ಜಾತ್ಯಾತೀತ ಸಿದ್ದಾಂತ ನನಗೆ ಇಷ್ಟ’ ಎಂದರು.
‘ಪಕ್ಷಕ್ಕೆ ಹಗಲು ರಾತ್ರಿ ಕೆಲಸ ಮಾಡಲು ಸಿದ್ದ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಸೇರ್ಪಡೆ ನನಗೆ ಹೊಸ ಹುರುಪು ತಂದಿದೆ. 2023ರ ಚುನಾವಣೆ- ಕಾಂಗ್ರೆಸ್ ಕರ್ನಾಟಕ ಎಂಬ ಸ್ಲೋಗನ್ ನಲ್ಲಿ ಕೆಲಸ ಮಾಡೋಣ’ ಎಂದು ಹೇಳಿದರು.