ಬೆಂಗಳೂರು: ಕನ್ನಡ ಚಿತ್ರರಂಗದ ಕಲಾ ಸಾಮ್ರಾಟ, ಖ್ಯಾತ ನಟ, ನಿರ್ದೇಶಕರಾದ ಎಸ್. ನಾರಾಯಣ್ ಅವರಿಗೆ ಗೌರವ ಡಾಕ್ಟರೇಟ್ ಗರಿ ಒಲಿದು ಬಂದಿದೆ.
ಚಿತ್ರರಂಗದಲ್ಲಿ ಇವರ ಅದಮ್ಯ ಸೇವೆಯನ್ನು ಗುರುತಿಸಿ ಇತ್ತೀಚೆಗೆ ಹೊಸೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಯೂನಿವರ್ಸಲ್ ಡೆವಲಪ್ ಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟ್ ನೀಡಿದೆ.
ಕನ್ನಡದ ‘ಚೈತ್ರದ ಪ್ರೇಮಾಂಜಲಿ’ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಸತತ 30 ವರ್ಷಗಳ ಕಾಲ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕೆಜಿಎಫ್- 2 ಚಿತ್ರೀಕರಣ ಮುಕ್ತಾಯ: ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಸರ್ಪ್ರೈಸ್ !
ಕನ್ನಡದ ಮೇರು ನಟರಾದ ರಾಜ್ ಕುಮಾರ್ ಸಾಹಸ ಸಿಂಹ ವಿಷ್ಣುವರ್ಧನ್ ಹೀಗೆ ಕನ್ನಡದ ಅತ್ಯುನ್ನತ ನಟರುಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರತಿ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಕನ್ನಡದ ಒಟ್ಟು 49 ಸಿನಿಮಾಗಳನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆ ಇವರದ್ದು. ಕೇವಲ ಕನ್ನಡ ಸಿನಿಮಾಗಳನ್ನು ಮಾತ್ರವಲ್ಲದೆ ತಮಿಳಿನ ಒಂದು ಸಿನಿಮಾವನ್ನೂ ಇವರು ನಿರ್ದೇಶಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಾ. ಎಸ್ ನಾರಾಯಣ್ ಇದೊಂದು ನಂಬಲಾಗದ ಸಂಗತಿ, ನನಗೆ ಚಿತ್ರರಂಗದ ಹಾಗೂ ಸಿನಿಮಾ ಅಭಿಮಾನಿಗಳ ಬೆಂಬಲದಿಂದ ಹಲವಾರು ಪ್ರಶಸ್ತಿಗಳು ಬಂದಿದೆ. ಆದರೆ ಇದೀಗ ಡಾಕ್ಟರೇಟ್ ಸಿಕ್ಕಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ ಎಂದಿದ್ದಾರೆ.