Advertisement

‘ಕಮ್ಮ ರಾಜ್ಯದಲ್ಲಿ ಕಡಪ ರೆಡ್ಡಿಗಳು’ ; ಏನಿದು ರಾಮ್ ಗೋಪಾಲ್ ವರ್ಮಾ ಹೊಸ ಚಿತ್ರದ ವಿವಾದ?

09:40 AM Dec 04, 2019 | Hari Prasad |

ಹೈದರಾಬಾದ್: ರಾಜಕೀಯ ಹಿನ್ನಲೆ ಮತ್ತು ಕ್ರೈಂ ಕಥೆ ಆಧಾರಿತ ಚಿತ್ರಗಳನ್ನು ಹಸಿಬಿಸಿಯಾಗಿ ಪ್ರೇಕ್ಷಕರಿಗೆ ನೀಡುವಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರದ್ದು ಎತ್ತಿದ ಕೈ. ಮೊನ್ನೆ ಮೊನ್ನೆಯಷ್ಟೇ ವರ್ಮಾ ಅವರು ತೆಲುಗುದೇಶಂ ಪಕ್ಷದ ಸ್ಥಾಪಕ ಮತ್ತು ಜನಪ್ರಿಯ ನಟ ಆಂಧ್ರಪ್ರದೇಶದ ಮಾಜೀ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಕುರಿತಾದ ‘ಲಕ್ಷ್ಮೀಸ್ ಎನ್.ಟಿ.ಆರ್.’ ಚಿತ್ರವನ್ನು ನಿರ್ದೇಶಿಸಿದ್ದರು. ಇದು ಆಂಧ್ರ ರಾಜಕೀಯದಲ್ಲಿ ಮತ್ತು ತೆಲುಗು ದೇಶಂ ಪಕ್ಷದಲ್ಲಿ ತಲ್ಲಣ ಮೂಡಿಸಿತ್ತು.

Advertisement

ಇದೀಗ ವರ್ಮಾ ಅವರು ಆಂಧ್ರದ ಜಾತಿ ರಾಜಕೀಯಕ್ಕೇ ನೇರವಾಗಿ ಕೈ ಹಾಕಿದ್ದಾರೆ. ಕರ್ನಾಟಕದಲ್ಲಿ ಲಿಂಗಾಯಿತರು ಮತ್ತು ಒಕ್ಕಲಿಗರು ಹೇಗೆ ಪ್ರಬಲ ಸಮುದಾಯವಾಗಿ ಗುರುತಿಸಿಕೊಂಡಿದ್ದಾರೆಯೋ ಅದೇ ರೀತಿಯಲ್ಲಿ ನಮ್ಮ ನೆರೆಯ ಸೀಮಾಂಧ್ರದಲ್ಲಿ ಕಮ್ಮ ಮತ್ತು ರೆಡ್ಡಿ ಸುಮದಾಯದ ಜನರು ಬಹುಸಂಖ್ಯೆಯಲ್ಲಿದ್ದು ಅಲ್ಲಿನ ರಾಜಕೀಯ ಚಿತ್ರಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಇದೀಗ ರಾಮ್ ಗೋಪಾಲ್ ವರ್ಮಾ ಅವರು ‘ಕಮ್ಮ ರಾಜ್ಯಂ ಲೋ ಕಡಪ ರೆಡ್ಲು’ (ಕಮ್ಮ ರಾಜ್ಯದಲ್ಲಿ ಕಡಪ ರೆಡ್ಡಿಗಳು) ಎಂಬ ಹೆಸರಿನ ಚಿತ್ರವನ್ನು ಸಿದ್ಧಪಡಿಸಿ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಎಲ್ಲಾ ಸರಿಯಾಗಿದ್ದಿದ್ದರೆ ವರ್ಮಾ ಅವರ ಈ ಚಿತ್ರ ನವಂಬರ್ 29ಕ್ಕೇ ತೆರೆ ಕಾಣಬೇಕಿತ್ತು. ಆದರೆ ಈ ಚಿತ್ರದ ಟೈಟಲ್ ಕುರಿತಾಗಿ ಆಂಧ್ರದ ರಾಜಕೀಯ ಪಕ್ಷಗಳು ತಕರಾರು ಎತ್ತಿರುವುದರಿಂದ ಸದ್ಯಕ್ಕೆ ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋಗಿದೆ.

ಈ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಬೇಕೆಂದು ತೆಲಂಗಾಣ ಹೈಕೋರ್ಟಿನಲ್ಲಿ ದೂರು ದಾಖಲುಗೊಂಡಿರುವುದರಿಂದ ಈ ಚಿತ್ರವನ್ನು ಬಿಡುಗಡೆಗೊಳಿಸದಿರುವ ಸಂಕಟದಲ್ಲಿ ವರ್ಮಾ ಸಿಲುಕಿದ್ದಾರೆ. ಈ ಎಲ್ಲಾ ವಿವಾದಗಳ ಹಿನ್ನಲೆಯಲ್ಲಿ ರಾಮ್ ಗೋಪಾಲ್ ವರ್ಮಾ ಅವರು ಇದೀಗ ತಮ್ಮ ಚಿತ್ರದ ಶೀರ್ಷಿಕೆಯನ್ನು ‘ಅಮ್ಮ ರಾಜ್ಯಂ ಲೋ ಕಡಪ ರೆಡ್ಲು’ ಎಂದು ಬದಲಾಯಿಸಲು ನಿರ್ಧರಿಸಿದ್ದಾರೆ. ಆದರೆ ಇದಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಇನ್ನಷ್ಟೇ ಒಪ್ಪಿಗೆ ನೀಡಬೇಕಾಗಿದೆ.

ಈ ಚಿತ್ರದಲ್ಲಿ ಬರುವ ಎರಡು ಪ್ರಮುಖ ಪಾತ್ರಗಳು ಸೀಮಾಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಮಾಜೀ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವ್ಯಕ್ತಿತ್ವವನ್ನು ಹೋಲುತ್ತವೆ. ಹಾಗಾಗಿ ಈ ಚಿತ್ರದ ಟೈಟಲ್ ಗೆ ಇದೀಗ ಆಕ್ಷೇಪ ವ್ಯಕ್ತವಾಗಿದೆ. ಇದು ನೇರವಾಗಿ ಎರಡು ಸಮದಾಯಗಳನ್ನು ಗುರಿಯಾಗಿಸಿರುವುದರಿಂದ ಚಿತ್ರದ ಟೈಟಲ್ ಗೆ ಅನುಮತಿ ನೀಡಬಾರದು ಎಂದು ವೈ.ಎಸ್.ಆರ್.ಸಿ.ಪಿ. ಪಕ್ಷದ ಹಿರಿಯ ನಾಯಕ ಸಜ್ಜಲ ರಾಮಕೃಷ್ಣ ರೆಡ್ಡಿ ಅವರು ಪ್ರಾದೇಶಿಕ ಸೆನ್ಸಾರ್ ಮಂಡಳಿಗೆ ಪತ್ರವನ್ನು ಬರೆದಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next