Advertisement

“ಮೋಡದ ಮರೆ’ಯಲ್ಲಿ ಮರೆಯಾದ ಮನ ಮೆಚ್ಚಿದ ನಿರ್ದೇಶಕ

06:00 AM Oct 30, 2018 | |

ಬೆಂಗಳೂರು: ನಿರ್ದೇಶಕ ಎಂ.ಎಸ್‌.ರಾಜಶೇಖರ್‌ ಅಂದಾಕ್ಷಣ, ಥಟ್ಟನೆ ನೆನಪಾಗೋದು ನಟ ಶಿವರಾಜಕುಮಾರ್‌. ಅದಕ್ಕೆ ಕಾರಣ,
ಶಿವರಾಜಕುಮಾರ್‌ ಅವರಿಗಾಗಿಯೇ ಅತೀ ಹೆಚ್ಚು ಅಂದರೆ, 14 ಚಿತ್ರಗಳನ್ನು ನಿರ್ದೇಶಿಸಿದ ಹೆಗ್ಗಳಿಕೆ ಎಂ.ಎಸ್‌.ರಾಜಶೇಖರ್‌ ಅವರದ್ದಾಗಿತ್ತು. ಅಷ್ಟೇ ಅಲ್ಲ, ಡಾ.ರಾಜ ಕುಮಾರ್‌ ಸೇರಿ ಅವರ ಪುತ್ರರಾದ ಶಿವರಾಜಕುಮಾರ್‌ ಮತ್ತು ರಾಘವೇಂದ್ರ ರಾಜ 
ಕುಮಾರ್‌ ಚಿತ್ರಗಳನ್ನು ನಿರ್ದೇಶಿಸಿದ ಹೆಮ್ಮೆಯೂ ಅವರದು. 1985 ರಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡ ಎಂ.ಎಸ್‌.ರಾಜಶೇಖರ್‌, 2006 ರವರೆಗೂ ಕನ್ನಡ ಚಿತ್ರರಂಗದಲ್ಲಿದ್ದುಕೊಂಡು ಸಿನಿಮಾ ನಿರ್ದೇಶಿಸಿದ್ದು ವಿಶೇಷ. ಡಾ.ರಾಜಕುಮಾರ್‌ ಅಭಿನಯದ “ಧ್ರುವತಾರೆ’ ಅವರ ಮೊದಲ ಚಿತ್ರವಾದರೆ, ರವಿಚಂದ್ರನ್‌ ನಟಿಸಿದ “ರವಿಶಾಸ್ತ್ರಿ’ ಅವರ ಕೊನೆಯ ಚಿತ್ರವಾಗಿತ್ತು. ಅವರ ನಿರ್ದೇಶನದ ಪಟ್ಟಿಯಲ್ಲಿ ಸುಮಾರು 35ಕ್ಕೂ ಹೆಚ್ಚು ಚಿತ್ರಗಳಿವೆ. ಈ ಪೈಕಿ ಡಾ.ರಾಜಕುಮಾರ್‌ ಅವರಿಗೆ 1985 ರಲ್ಲಿ “ಧ್ರುವತಾರೆ’ ಮತ್ತು 1986 ರಲ್ಲಿ “ಅನುರಾಗ ಅರಳಿತು’ ಚಿತ್ರ ನಿರ್ದೇಶಿಸಿದ್ದರು. ರಾಘವೇಂದ್ರ ರಾಜಕುಮಾರ್‌ ಅವರಿಗೆ ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದಲ್ಲಿ ಎಂಟು ಕಾದಂಬರಿ ಆಧಾರಿತ ಚಿತ್ರಗಳಿವೆ ಎಂಬುದು ಮತ್ತೂಂದು ವಿಶೇಷ.

Advertisement

ಅಣ್ಣಾವ್ರಿಗೆ 2 ಕಾದಂಬರಿ ಚಿತ್ರ: ಎಂ.ಎಸ್‌.ರಾಜಶೇಖರ್‌ 1985ರಲ್ಲಿ ಡಾ.ರಾಜಕುಮಾರ್‌ ಅಭಿನಯದ “ಧ್ರುವತಾರೆ’ ಚಿತ್ರ ನಿರ್ದೇಶಿಸುವ ಮೂಲಕ ನಿರ್ದೇಶಕರಾ ದರು. “ಧ್ರುವತಾರೆ’ ವಿಜಯ ಸಾಸನೂರು ಅವರ “ಅಪರಂಜಿ’ ಕಾದಂಬರಿ ಆಧರಿತ ಚಿತ್ರ. ಅದು ಅದ್ಭುತ ಯಶಸ್ಸು ಕಂಡಿತ್ತು. ನಂತರ ರಾಜಶೇಖರ್‌ 1986ರಲ್ಲಿ ಅವರು ಪುನಃ ಡಾ.ರಾಜ ಕುಮಾರ್‌ ಅವರಿಗೆ “ಅನುರಾಗ ಅರಳಿತು’ ಚಿತ್ರ ನಿರ್ದೇಶಿಸಿದರು. ಅದೂ ಸಹ, ಎಚ್‌.ಜಿ.ರಾಧಾದೇವಿ ಅವರು ಬರೆದ “ಅನುರಾಗದ ಅಂತಃಪುರ’ ಕಾದಂಬರಿ ಆಧರಿಸಿದ ಚಿತ್ರವಾಗಿತ್ತು. 1986 ರಲ್ಲಿ ಶಿವರಾಜಕುಮಾರ್‌ಗೆ “ರಥಸಪ್ತಮಿ’ ಚಿತ್ರ ನಿರ್ದೇಶಿಸಿದರು. ಅದು ವಿದ್ಯಾಲತಾ ಬರೆದ “ರಥಸಪ್ತಮಿ’ ಕಾದಂಬರಿ ಆಧರಿಸಿತ್ತು. 1987 ರಲ್ಲಿ ಕುಂ.ವೀರಭದ್ರಪ್ಪ ಅವರ “ಬೇಟೆ’ ಕಾದಂಬರಿ ಇಟ್ಟುಕೊಂಡು “ಮನ ಮೆಚ್ಚಿದ ಹುಡುಗಿ’ ಚಿತ್ರ ನಿರ್ದೇಶಿಸಿದರು. ಅದು ಅದ್ಭುತ ಯಶಸ್ಸು ಪಡೆಯಿತು. 1992 ರಲ್ಲಿ ಸಾಯಿಸುತೆ ಅವರು ಬರೆದ ಕಾದಂಬರಿ “ಮಿಡಿದ ಶ್ರುತಿ’ ಚಿತ್ರ ವಾಯ್ತು. 1993 ಸಾಯಿಸುತೆ ಬರೆದ ಚಿರಬಾಂಧವ್ಯ ಕಾದಂಬರಿ ಅದೇ ಹೆಸರಿನ 
ಚಿತ್ರವಾಯಿತು. 1995 ರಲ್ಲಿ ವಿಜಯ್‌ ಸಾಸನೂರು ಬರೆದ “ಸವ್ಯಸಾಚಿ’, ಸಾಯಿಸುತೆ ಅವರ ಕಾದಂಬರಿ ಆಧರಿಸಿದ “ಮನ ಮಿಡಿಯಿತು’ ಚಿತ್ರವನ್ನು ನಿರ್ದೇಶಿಸಿದರು.

ಇವುಗಳೊಂದಿಗೆ 1991 ಮತ್ತು 1992 ರಲ್ಲಿ ಅಂಬರೀಷ್‌ ಅವರಿಗೆ ವಂಶಿ ಬರೆದ “ಹಿಮದ ಹೂವು’ ಕಾದಂಬರಿ ಆಧರಿಸಿ, “ಹೃದಯ ಹಾಡಿತು’ ಮತ್ತು “ಮಣ್ಣಿನ ದೋಣಿ’ ಚಿತ್ರ ನಿರ್ದೇಶಿಸಿದ್ದಾರೆ. 1993ರಲ್ಲಿ ಬಿಡುಗಡೆಯಾದ ಶಶಿಕುಮಾರ್‌, ಮಾಲಾಶ್ರೀ ಅಭಿನಯದ “ಕಲ್ಯಾಣ ರೇಖೆ’ ಚಿತ್ರ ಕೂಡ ಸಾಯಿಸುತೆ ಅವರ ಕಾದಂಬರಿ ಆಧರಿಸಿದ್ದು ಎಂಬುದು ವಿಶೇಷ. 

ರಾಜ್‌ ಕುಟುಂಬಕ್ಕೆ ಆಪ್ತ: ಶಿವರಾಜಕುಮಾರ್‌ ಅವರಿಗೆ “ರಥಸಪ್ತಮಿ’, “ಮನ ಮೆಚ್ಚಿದ ಹುಡುಗಿ’, “ಅದೇ ರಾಗ ಅದೇ ಹಾಡು’, “ಆಸೆಗೊಬ್ಬ ಮೀಸೆ ಗೊಬ್ಬ’, “ಮೋಡದ ಮರೆಯಲ್ಲಿ’, “ಮಿಡಿದ ಶ್ರುತಿ’, “ಪುರುಷೋತ್ತ ಮ’, “ಚಿರ ಬಾಂಧವ್ಯ’, “ಮುತ್ತಣ್ಣ’, “ಸವ್ಯ ಸಾಚಿ’, “ಮನ ಮಿಡಿಯಿತು’, “ಹೃದಯ ಹೃದಯ’, “ಸುಂದರ  ಕಾಂಡ’, “ಬಹಳ ಚೆನ್ನಾಗಿದೆ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಾಘವೇಂದ್ರ ರಾಜ ಕುಮಾರ್‌ಗೆ “ನಂಜುಂಡಿ ಕಲ್ಯಾಣ’, “ಗಜಪತಿ ಗರ್ವ ಭಂಗ’, “ಅನುಕೂಲಕ್ಕೊಬ್ಬ ಗಂಡ’, “ಪಕ್ಕದ್ಮನೆ ಹುಡುಗಿ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಮೂಲಕ ಡಾ.ರಾಜಕುಮಾರ್‌ ಕುಟುಂಬಕ್ಕೂ ರಾಜಶೇಖರ್‌ ಆಪ್ತರಾಗಿದ್ದರು ಎಂಬುದು ವಿಶೇಷ.

ರಾಜಶೇಖರ್‌ ಅವರಲ್ಲಿ ನಾನು ಇಷ್ಟಪಟ್ಟ ಗುಣ ಎಂದರೆ ಕಲಾವಿದರನ್ನು ಚೆನ್ನಾಗಿ ನಡೆಸಿಕೊಳ್ಳುವುದು. ಯಾರೇ ಕಲಾವಿದರಾಗಲಿ ಅವರನ್ನು ತುಂಬಾ ನೀಟಾಗಿ ಟ್ರೀಟ್‌ ಮಾಡುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಅವರಿಗೆ ಒಳ್ಳೆಯ ಮನಸ್ಸಿತ್ತು. ಒಬ್ಬ ಒಳ್ಳೆಯ ವ್ಯಕ್ತಿ, ನಿರ್ದೇಶಕನನ್ನು ಇವತ್ತು ಕಳೆದುಕೊಂಡಿದ್ದೇವೆ.
● ಶಿವರಾಜಕುಮಾರ್‌, ನಟ

Advertisement

ತನ್ನ ಪ್ರತಿಭೆ, ಪರಿಶ್ರಮದಿಂದ ಚಿತ್ರರಂಗದಲ್ಲಿ ಎಷ್ಟು ದೊಡ್ಡ ನಿರ್ದೇಶಕರಾಗಬಹುದು ಎಂಬುದಕ್ಕೆ ರಾಜಶೇಖರ್‌ ಉದಾಹರಣೆ. ಅವರ ಸರಳತೆ, ವಿನಯ ಎಲ್ಲರಿಗೂ ಮಾದರಿ. ಚಿತ್ರರಂಗದಲ್ಲಿ ಎಲ್ಲರನ್ನೂ ಪ್ರೀತಿಸುವ ವ್ಯಕ್ತಿ ನಮ್ಮನ್ನು ಬಿಟ್ಟು ಹೋಗಿದ್ದು ನೋವು ತಂದಿದೆ.
● ಎಸ್‌.ಎ ಚಿನ್ನೇಗೌಡ, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಕನ್ನಡ ಚಿತ್ರಂಗಕ್ಕೆ ಅವರ ಕೊಡುಗೆ ಸಾಕಷ್ಟಿದೆ. ಇಂದು ಅವರು ನಮ್ಮನ್ನು ಬಿಟ್ಟು ಹೋದರೂ, ಅವರು ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಎಂದೆಂದಿಗೂ ಶಾಶ್ವತ. 
● ಸಾ.ರಾ. ಗೋವಿಂದು, ನಿರ್ಮಾಪಕ

Advertisement

Udayavani is now on Telegram. Click here to join our channel and stay updated with the latest news.

Next