ಚೆನ್ನೈ:ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ಕೋ, ಅಯಾನ್, ಮಾಟ್ರಾನ್, ಕಪ್ಪಾನ್ ನಂತಹ ಹಿಟ್ ಸಿನಿಮಾ ನಿರ್ದೇಶಿಸಿದ್ದ ಕೆವಿ ಆನಂದ್ (54ವರ್ಷ) ಶುಕ್ರವಾರ ನಸುಕಿನ ವೇಳೆ ಹೃದಯ ಸ್ತಂಭನದಿಂದ ವಿಧಿವಶರಾಗಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮಹಾರಾಷ್ಟ್ರ: ಜುಲೈ-ಆಗಸ್ಟ್ ನಲ್ಲಿ ಕೋವಿಡ್ ಮೂರನೇ ಅಲೆ: ಸಚಿವ ಟೋಪೆ
ಸಿನಿಮಾ ಪ್ರಚಾರಕ ರಿಯಾಝ್ ಕೆ ಅಹ್ಮದ್ ಈ ಕುರಿತು ಟ್ವೀಟ್ ಮಾಡಿದ್ದು, ಲೆಜೆಂಡರಿ ಸಿನಿಮಾ ನಿರ್ದೇಶಕ ಕೆವಿ ಆನಂದ್ ನಸುಕಿನ ವೇಳೆ ನಿಧನರಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. ಕೆವಿ ಆನಂದ್ ದಿಢೀರ್ ನಿಧನದ ಸುದ್ದಿಗೆ ತಮಿಳುಚಿತ್ರರಂಗ ಆಘಾತ ವ್ಯಕ್ತಪಡಿಸಿದ್ದು, ಹಿತೈಷಿಗಳು, ಅಭಿಮಾನಿಗಳು, ತಂತ್ರಜ್ಞರು, ನಟರು ಸಂತಾಪ ಸೂಚಿಸಿದ್ದಾರೆ.
ಕೆವಿ ಆನಂದ್ ಅವರು ಫ್ರೀಲ್ಯಾನ್ಸ್ ಫೋಟೋಜರ್ನಲಿಸ್ಟ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ತಮಿಳಿನ ಹಲವು ಪ್ರತಿಷ್ಠಿತ ಮ್ಯಾಗಜೀನ್ಸ್ ಗಳಿಗೆ ಫೋಟೋ ಒದಗಿಸುತ್ತಿದ್ದರು. 1990ರ ದಶಕದಲ್ಲಿ ಸಿನಿಮಾ ಛಾಯಾಗ್ರಾಹಕ ಪಿಸಿ ಶ್ರೀರಾಮ್ ಅವರನ್ನು ಭೇಟಿಯಾಗಿ ತಮ್ಮ ಆಸೆಯನ್ನು ಹೇಳಿಕೊಂಡಿದ್ದರು, ನಂತರ ಶ್ರೀರಾಮ್ ಅವರ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.
ಗೋಪುರ ವಾಸಲಿಲೆ, ಅಮರಾನ್, ದೇವರ್ ಮಗನ್ ಮತ್ತು ತಿರುಡಾ ತಿರುಡಾದಂತಹ ಸಿನಿಮಾದಲ್ಲಿ ಕೆವಿ ಆನಂದ್ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. 1996ರಲ್ಲಿ ಕೆವಿ ತಮ್ಮ ಮೊದಲ ಸಿನಿಮಾ ಕಾದಲ್ ದೇಶಂ ನಿರ್ದೇಶಿಸಿದ್ದರು.