Advertisement

1 ಕಿರುಚಿತ್ರ‌ ,ಎರಡೇ ಎರಡು ಸಿನಿಮಾ.. ಹೇಗಿದೆ ಯಶ್‌ ʼಟಾಕ್ಸಿಕ್‌ʼ ನಿರ್ದೇಶಕಿ ಗೀತು ಸಿನಿಪಯಣ

05:34 PM Dec 08, 2023 | Team Udayavani |

ರಾಕಿಂಗ್‌ ಸ್ಟಾರ್‌ ಯಶ್‌ ಅವರ 19ನೇ ಸಿನಿಮಾಕ್ಕೆ ʼಟಾಕ್ಸಿಕ್‌ʼ ಎನ್ನುವ ಟೈಟಲ್‌ ಇಡಲಾಗಿದೆ. ಈ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ ದಾಸ್‌ ನಿರ್ದೇಶನ ಮಾಡಲಿದ್ದಾರೆ.

Advertisement

ಕೆಜಿಎಫ್‌ 1, 2 ಬಳಿಕ ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಹೊರಹೊಮ್ಮಿದ್ದಾರೆ. ಹಾಗಾಗಿ ಅವರ ಮುಂದಿನ ಸಿನಿಮಾನೂ ಪ್ಯಾನ್‌ ಇಂಡಿಯಾವಾಗಿಯೇ ರಿಲೀಸ್‌ ಆಗಬೇಕೆಂದು ನಿರೀಕ್ಷೆ ಇಟ್ಟುಕೊಳ್ಳುವ ಮಟ್ಟಿಗೆ ಯಶ್‌ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಅಂತೂ 20 ತಿಂಗಳ ಬಳಿಕ ಯಶ್‌ ಅವರ ಮುಂದಿನ ಸಿನಿಮಾ ಅನೌನ್ಸ್‌ ಆಗಿದೆ. ಪ್ರಶಾಂತ್‌ ನೀಲ್‌ ನಂತಹ ಹಿಟ್‌ ನಿರ್ದೇಶಕರ ಜೊತೆ ಕೆಲಸ ಮಾಡಿದ ಯಶ್‌ ಅವರು, ಕೇವಲ ಎರಡು ಸಿನಿಮಾ ಮಾಡಿರುವ ಗೀತು ಮೋಹನ್‌ ದಾಸ್‌ ಅವರೊಂದಿಗೆ ಸಿನಿಮಾ ಮಾಡಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಎರಡೇ ಎರಡು ಸಿನಿಮಾ ಮಾಡಿ ಮಾಲಿವುಡ್‌ ನಲ್ಲಿ ಮಿಂಚಿರುವ ಗೀತು ಮೋಹನ್‌ ದಾಸ್‌ ಅವರ ಹಿನ್ನೆಲೆ ಏನು ಎನ್ನುವುದರ ಕುರಿತ ವಿವರ ಇಲ್ಲಿದೆ.

ಗೀತು ಮೋಹನ್‌ ದಾಸ್‌ ಅವರಿಗೆ ಸಿನಿಮಾರಂಗ ಹೊಸತಲ್ಲ. ಅವರಿಂದು ನಿರ್ದೇಶಕಿಯಾಗಿ ಗುರುತಿಸಿಕೊಂಡಿರಬಹುದು ಆದರೆ ಕ್ಯಾಮರಾದ ಮುಂದೆ ನಟನೆ ಮಾಡಿಯೇ ಅವರು ಡೈರೆಕ್ಟರ್‌ ಕ್ಯಾಪ್‌ ತೊಟ್ಟವರು.

1986 ರಲ್ಲಿ ರಿಲೀಸ್‌ ಆಗಿದ್ದ ಮೋಹನ್‌ ಲಾಲ್‌ ಅವರ ʼ ಒನ್ನು ಮಹಲ್ ಪೂಜೆಯಂʼ ಸಿನಿಮಾದಲ್ಲಿ ಗೀತು ಮೋಹನ್‌ ದಾಸ್‌ ಅವರು ಬಾಲನಟಿಯಾಗಿ ತೆರೆಮೇಲೆ ಕಾಣಿಸಿಕೊಂಡಿದ್ದರು. ಇದಾದ ಬಳಿಕ 1988 ರಲ್ಲಿ ತೆರೆಕಂಡ  ʼ ಎನ್ ಬೊಮ್ಮುಕುಟ್ಟಿ ಅಮ್ಮವುಕ್ಕುʼ ಸಿನಿಮಾದಲ್ಲೂ ಗೀತು ನಟಿಸಿದ್ದರು. 2000 ಇಸವಿಯಲ್ಲಿ ತೆರೆಕಂಡ ಮೋಹನ್‌ ಲಾಲ್‌ ಅವರ ʼಲೈಫ್‌ ಇಸ್‌ ಬ್ಯೂಟಿಫುಲ್ʼ ಸಿನಿಮಾದಲ್ಲಿ ನಟಿಸಿದ್ದರು.

Advertisement

2004 ರಲ್ಲಿ ತೆರೆಕಂಡ ಪೃಥ್ವಿರಾಜ್ ಸುಕುಮಾರನ್ ಅಭಿನಯದ ʼ ಅಕಲೆʼ ಸಿನಿಮಾದಲ್ಲಿನ ಗೀತು ಮೋಹನ್‌ ದಾಸ್‌ ಅವರ ʼರೋಸಿʼ ಪಾತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಪಾತ್ರಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ಕೇರಳ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡರು. ಅದೇ ವರ್ಷ ಅವರಿಗೆ ʼರೋಸಿʼ ಪಾತ್ರಕ್ಕಾಗಿ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ ಫೇರ್‌ ಪ್ರಶಸ್ತಿ ಕೂಡ ಬಂತು.

ಈ ಸಿನಿಮಾ ಮಾತ್ರವಲ್ಲದೆ ಗೀತು ‘ಒರಿಡಮ್’, ಶೇಷಮ್, ‘ತಕರಚೆಂದ’ ಮತ್ತು ‘ನಾಲು ಪೆನ್ನುಂಗಲ್’ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ.

ನಟನೆಯಿಂದ ನಿರ್ದೇಶನಕ್ಕಿಳಿದ ಗೀತು..

ನಟನೆಯಿಂದ ಗುರುತಿಸಿಕೊಂಡಿದ್ದ ಗೀತು ಮೋಹನ್‌ ದಾಸ್‌ 2009 ರಲ್ಲಿ ʼಕೆಲ್‌ಕ್ಕುನ್ನುಂಡುʼ ಎನ್ನುವ 22 ನಿಮಿಷದ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿತ್ತು. ಇಲ್ಲಿಂದ ಗೀತು ಅವರು ನಿರ್ದೇಶನದ ಮೂಲಕ ಸಿನಿರಂಗದಲ್ಲಿ ಹೊಸ ಪಯಣವನ್ನು ಆರಂಭಿಸಿದರು.

ಕಣ್ಣು ಕಾಣದ ಬಾಲಕಿಯೊಬ್ಬಳ ಕಥೆಯನ್ನು ʼಕೆಲ್‌ಕ್ಕುನ್ನುಂಡುʼ ನಲ್ಲಿ ಹೇಳಲಾಗಿದೆ.

ಇದಾದ ಬಳಿಕ ಗೀತು 5 ವರ್ಷದ ಬಳಿಕ ಅಂದರೆ 2014 ರಲ್ಲಿ ʼಲೈಯರ್ಸ್ ಡೈಸ್‌ʼ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದರು. ಮಾಲಿವುಡ್‌ ನಲ್ಲಿ ಇದು ಅವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿತ್ತು. ನಗರಕ್ಕೆ ವಲಸೆ ಬರುವ ಗಂಡನನ್ನು ಹಳ್ಳಿ ಮಹಿಳೆಯೊಬ್ಬರು ಹುಡುಕಿಕೊಂಡು ಬರುವ ಕಥೆಯನ್ನೊಳಗೊಂಡಿರುವ ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಎರಡು ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಕೂಡ ಈ ಸಿನಿಮಾಕ್ಕೆ ದಕ್ಕಿದೆ.

ಮೊದಲ ಸಿನಿಮಾದ ನಂತರ ಮತ್ತಷ್ಟು ಗ್ಯಾಪ್‌ ಪಡೆದುಕೊಂಡ ಗೀತು 2019 ರಲ್ಲಿ ʼಮೂತೊನ್‌ʼ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದರು. ನಿವಿನ್‌ ಪೌಲಿ ಪ್ರಮುಖ ಭೂಮಿಕೆಯಲ್ಲಿರುವ ಈ ಸಿನಿಮಾಕ್ಕೂ ಪ್ರೇಕ್ಷಕರಿಗೆ ಮೆಚ್ಚುಗೆ ವ್ಯಕ್ತವಾಯಿತು. ಆ ಮೂಲಕ ಮಾಲಿವುಡ್‌ ನಲ್ಲಿ ಗೀತು ಭರವಸೆಯ ನಿರ್ದೇಶಕಿಯಾದರು.

ಇದೀಗ ಮೂರನೇ ಸಿನಿಮಾವನ್ನು ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಮಾಡಲಿದ್ದಾರೆ. ಎರಡೂ ಭಿನ್ನವಾದ ಕಥೆಯನ್ನು ಹೇಳಿರುವ ಗೀತು ಮೋಹನ್‌ ದಾಸ್‌ ಮೂರನೇ ಸಿನಿಮಾದಲ್ಲಿ ಯಾವ ರೀತಿಯ ಕಥೆಯನ್ನು ಹೇಳಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ದೆ. ಇವರು ಮಾಡಿದ ಎರಡೂ ಸಿನಿಮಾದಲ್ಲಿ ಕಥೆಯೇ ಪ್ರಧಾನವಾಗಿದೆ. ಕೆಜಿಎಫ್‌ ಬಳಿಕ ಯಶ್‌ ಅವರ ಅಭಿಮಾನಿ ಅಂಥದ್ದೇ ಪಾತ್ರದಲ್ಲಿ ಯಶ್‌ ಅವರನ್ನು ನೋಡಲು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಯಶ್‌ ಅವರ ʼಟಾಕ್ಸಿಕ್‌ʼ ನಲ್ಲಿ ಗೋವಾದ ಡ್ರಗ್ಸ್‌ ಮಾಫಿಯಾದ ಕಥೆ ಇರಲಿದೆ ಎನ್ನಲಾಗಿದೆ.

ನಾನು ಯಾವಾಗಲೂ ನನ್ನ ಸಿನಿಮಾಗಳಲ್ಲಿ ಪ್ರಯೋಗ ನಡೆಸಿದ್ದೇನೆ. ನನ್ನ ಎರಡು ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಂಡಿದ್ದರೂ, ನನ್ನ ದೇಶದ ನನ್ನ ಸ್ವಂತ ಪ್ರೇಕ್ಷಕರನ್ನು ನಾನು ಯಾವಾಗಲೂ ನೋಡುತ್ತೇನೆ. ಈ ಸಿನಿಮಾ (ಟಾಕ್ಸಿಕ್) ಎರಡೂ ವಿರುದ್ಧ ಪ್ರಪಂಚಗಳ ಕಾಲ್ಪನಿಕ ಕಥೆಯನ್ನೊಳಗೊಂಡಿದೆ. ಇಂತಹ ಕಥೆಗೆ ರಾಕಿಂಗ್‌ ಸ್ಟಾರ್‌ ಯಶ್‌ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ. ಅವರೊಂದಿಗೆ ಹೊಸ ಜರ್ನಿಯನ್ನು ಆರಂಭಿಸಲು ಉತ್ಸುಕಳಾಗಿದ್ದೇನೆ ಎಂದು ಮಲಯಾಳಂ ಸಂದರ್ಶನವೊಂದರಲ್ಲಿ ಗೀತು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next