Advertisement

ಕನ್ನಡ ಮೇಷ್ಟ್ರು ಹಿಂದೆ ಬಂದ ಮಹೇಂದರ್‌; ಎರಡು ಚಿತ್ರ ಒಂದೇ ಶೀರ್ಷಿಕೆ

04:46 PM Dec 10, 2018 | Sharanya Alva |

ನಿರ್ದೇಶಕ ಎಸ್‌.ಮಹೇಂದರ್‌ “ಒನ್ಸ್‌ ಮೋರ್‌ ಕೌರವ’ ಚಿತ್ರದ ನಂತರ ಏನು ಮಾಡುತ್ತಾರೆ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ‘ಕನ್ನಡ ಮೇಷ್ಟ್ರು’ ಉತ್ತರವಾಗಿದೆ. ಹೌದು, ಸದ್ದಿಲ್ಲದೆಯೇ ಎಸ್‌.ಮಹೇಂದರ್‌ “ಕನ್ನಡ ಮೇಷ್ಟ್ರು’ ಎಂಬ ಚಿತ್ರ ಮಾಡಿ ಮುಗಿಸಿದ್ದಾರೆ. ಈಗ ಆ ಚಿತ್ರ ಬಿಡುಗಡೆ ತಯಾರಿ ನಡೆಸುತ್ತಿದೆ.
 
ಅಂದಹಾಗೆ, “ಕನ್ನಡ ಮೇಷ್ಟ್ರು’ ಎಂಬ ಶೀರ್ಷಿಕೆಯನ್ನಿಟ್ಟು ಅದಾಗಲೇ ಚಿತ್ರೀಕರಣ ಮಾಡಲಾಗಿದೆ. ಈಗ  ಗೀತರಚನೆಕಾರ ಕವಿರಾಜ್‌ ಕೂಡ “ಕಾಳಿದಾಸ ಕನ್ನಡ ಮೇಷ್ಟ್ರು’ ಎಂಬ ಚಿತ್ರ ಶುರು ಮಾಡುತ್ತಿದ್ದಾರೆ. ಎರಡು ಚಿತ್ರಕ್ಕೂ “ಕನ್ನಡ ಮೇಷ್ಟ್ರು’ ಎಂಬ ಶೀರ್ಷಿಕೆಯೇ ಇದೆ. ಇಲ್ಲೊಂದಷ್ಟು ಗೊಂದಲಗಳೂ ಇವೆ. ಆದರೂ ಫಿಲ್ಮ್ ಚೇಂಬರ್‌ನಿಂದ ಇಬ್ಬರು ನಿರ್ದೇಶಕರ ಚಿತ್ರಗಳಿಗೂ ಶೀರ್ಷಿಕೆ ಅಸ್ತು ಎನ್ನಲಾಗಿದೆ. ಸದ್ಯಕ್ಕಿರುವ ಶೀರ್ಷಿಕೆ ಗೊಂದಲ ಅವರೇ ಬಗೆಹರಿಸಬೇಕು.

Advertisement

ಇನ್ನು, ಎಸ್‌.ಮಹೇಂದರ್‌ ಅವರಿಗೆ “ಕನ್ನಡ ಮೇಷ್ಟ್ರು’ 39 ನೇ ನಿರ್ದೇಶನದ ಚಿತ್ರ ಎಂಬುದು ವಿಶೇಷ. ಸಿನಿಮಾ ಕುರಿತು ಹೇಳಿಕೊಳ್ಳುವ ಮಹೇಂದರ್‌, “ಇದೊಂದು ಕನ್ನಡ ಹೋರಾಟಗಾರ, ಸಾಹಿತಿಯೊಬ್ಬರ ಕುರಿತಾದ ಕಥೆ. ಹಾಗೆ ನೋಡಿದರೆ, ಹೋರಾಟಗಾರರೊಬ್ಬರ ಬಯೋಪಿಕ್‌ ಅಂದರೂ ಅಡ್ಡಿಯಿಲ್ಲ. ಇದುವರೆಗಿನ ನನ್ನ ನಿರ್ದೇಶನದ ಚಿತ್ರಗಳಿಗೆ ಹೋಲಿಸಿದರೆ, “ಕನ್ನಡ ಮೇಷ್ಟ್ರು’ ಒಂದು ಹೊಸತನ ಇರುವ, ತುಂಬಾನೇ ಸೂಕ್ಷ್ಮತೆ ಇರುವಂತಹ ಚಿತ್ರ ಆಗಲಿದೆ. ಸೂಕ್ಷ್ಮತೆಯ ಅಂಶಗಳೊಂದಿಗೆ ಕಮರ್ಷಿಯಲ್‌ ಅಂಶಗಳೂ ಚಿತ್ರದಲ್ಲಿವೆ. ಕನ್ನಡ ಚಿತ್ರರಂಗದಲ್ಲಿ ಬೇರೆ ತರಹದಲ್ಲೇ ಮೂಡಿಬಂದಿರುವ ಸಿನಿಮಾ ಇದಾಗಿದ್ದು, ಕನ್ನಡ ಸ್ಥಿತಿಗತಿ, ಕನ್ನಡಿಗರ ಮನಸ್ಥಿತಿ, ಹೋರಾಟಗಾರ, ಕನ್ನಡ ಪ್ರೇಮಿಯ ಕಥೆ ಇಲ್ಲಿದೆ’ ಎಂಬುದು ಮಹೇಂದರ್‌ ಮಾತು.

ಇನ್ನು ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತವಿದೆ. ಚಿತ್ರದಲ್ಲಿ ನಾಲ್ಕು ಹಾಡುಳಿದ್ದು, ಎಲ್ಲಾ ಹಾಡುಗಳನ್ನೂ ಅವರೇ ರಚಿಸಿದ್ದಾರೆ. ಇನ್ನು, ಟೋಟಲ್‌ ಕನ್ನಡ ಸಂಸ್ಥೆ ಈ ಚಿತ್ರವನ್ನ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಕೀರ್ತಿ ಭಾನು, ಅರವಿಂದ್‌, ಸಂಗೀತ, ರಾಘವ್‌, ರವಿಭಟ್‌, ರೇಣುಕ್‌, ಶ್ರೀನಿವಾಸ್‌ ಪ್ರಭು, ಪೃಥ್ವಿರಾಜ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ರಮೇಶ್‌ ಬಾಬು ಅವರು ಛಾಯಾಗ್ರಹಣ ಮಾಡಿದ್ದಾರೆ.

ಬಹುತೇಕ ತೀರ್ಥಹಳ್ಳಿ ಸುತ್ತಮುತ್ತ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಜಗ್ಗೇಶ್‌  ಅಭಿನಯದ ಚಿತ್ರಕ್ಕೂ “ಕಾಳಿದಾಸ ಕನ್ನಡ ಮೇಷ್ಟ್ರು’ ಎಂಬ ಶೀರ್ಷಿಕೆ ಕುರಿತು ಮಾತನಾಡುವ ಮಹೇಂದರ್‌, “ನಾವು ಕಳೆದ ಒಂದುವರೆ ವರ್ಷದ ಹಿಂದೆಯೇ “ಕನ್ನಡ ಮೇಷ್ಟ್ರು’
ಶೀರ್ಷಿಕೆ ನೋಂದಣಿ ಮಾಡಿಸಿ, ಈಗಾಗಲೇ ಚಿತ್ರೀಕರಣವನ್ನೂ ಮಾಡಿ ಮುಗಿಸಿದ್ದೇವೆ. ಆದರೆ, “ಕಾಳಿದಾಸ ಕನ್ನಡ ಮೇಷ್ಟ್ರು’ ಕೂಡ ನಮ್ಮ ಶೀರ್ಷಿಕೆಗೆ ಹೋಲಿಕೆಯಾಗಿದೆ. ಹಿಂದೆ ಮುಂದೆ ಒಂದು ಪದ ಸೇರಿಸಿದರೆ, ಶೀರ್ಷಿಕೆ ಕೊಡುವ ವಾಡಿಕೆ ಜಾಸ್ತಿಯಾಗಿದೆ. ಈ ಬಗ್ಗೆ ಫಿಲ್ಮ್ ಛೇಂಬರ್
ಗಮನಹರಿಸಬೇಕಷ್ಟೇ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next