ಬೆಂಗಳೂರು: ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಗೋಶಾಲೆ ಹಾಗೂ ಜಾನುವಾರು ಶಿಬಿರಗಳ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಲು ಪಶುಸಂಗೋಪನೆ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿಗೆ ಖುದ್ದು ಹಾಜರಾಗುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತಂತೆ ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ನಿವಾಸಿ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯ ಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ರಾಜ್ಯದಲ್ಲಿ ತೆರೆಯಲಾಗಿರುವ ಗೋಶಾಲೆಗಳು, ಜಾನುವಾರು ಶಿಬಿರಗಳು ಮತ್ತು ಅಲ್ಲಿರುವ ಮೇವು ದಾಸ್ತಾನು ಕುರಿತು ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದರು.
ಆದರೆ, ಸರ್ಕಾರದ ಪ್ರಮಾಣಪತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಇದರಲ್ಲಿ ಹೇಳಲಾಗಿರುವ ಅಂಶಗಳು ತೃಪ್ತಿಕರವಾಗಿಲ್ಲ. ಆದ್ದರಿಂದ ಈ ಬಗ್ಗೆ ಸಮಗ್ರವಾದ ಮಾಹಿತಿ ನೀಡಲು ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ಪಶುಸಂಗೋಪನೆ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯ ದರ್ಶಿಗೆ ನಿರ್ದೇಶನ ನೀಡಿ ವಿಚಾರಣೆ ಯನ್ನು ಜುಲೈ 12ಕ್ಕೆ ಮುಂದೂಡಿತು.
ಅಲ್ಲದೇ ಗೋಶಾಲೆಗಳು ಮತ್ತು ಜಾನುವಾರು ಶಿಬಿರಗಳನ್ನು ತೆರೆಯಲು ಮತ್ತು ನಿರ್ವಹಿಸಲು ಸರ್ಕಾರ ಯಾವ ಮಾನದಂಡಗಳನ್ನು ಅನುಸರಿಸುತ್ತದೆ. ಗೋಶಾಲೆಗಳಲ್ಲಿರುವ ಜಾನುವಾರುಗಳಿಗೆ ದಿನಕ್ಕೆ ಎಷ್ಟು ಪ್ರಮಾಣದ ಮೇವು ಕೊಡಬೇಕು. ಜಾನುವಾರು ಶಿಬಿರಗಳನ್ನು ಸ್ಥಾಪಿಸಲು ಇರುವ ಮಾರ್ಗಸೂಚಿ ಗಳೇನು? ಸದ್ಯ ತೆರೆಯಲಾಗಿರುವ ಗೋಶಾಲೆಗಳು, ಜಾನುವಾರು ಶಿಬಿರ ಗಳೆಷ್ಟು, ಅವುಗಳಲ್ಲಿ ಎಷ್ಟು ಜಾನುವಾರು ಗಳಿವೆ, ಎಷ್ಟು ಮೇವು ದಾಸ್ತಾನು ಮಾಡ ಲಾಗಿದೆ ಎಂಬ ಕುರಿತು ವಿವರವಾದ ಮಾಹಿತಿ ನೀಡುವಂತೆ ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿತು.