Advertisement

ರೈಲ್ವೆ ಮೇಲ್ಸೇತುವೆ ಪೂರ್ಣಕ್ಕೆ ನಿರ್ದೇಶನ

01:37 PM Oct 02, 2019 | Suhan S |

ಕಲಬುರಗಿ: ಹಲವು ವರ್ಷಗಳಿಂದ ಪೂರ್ಣಗೊಳ್ಳದೇ ನನೆಗುದಿಗೆ ಬಿದ್ದಿರುವ ನಗರದ ಬಿದ್ದಾಪುರ ಕಾಲೋನಿಯ ಅಫ‌ಜಲಪುರ ರಸ್ತೆಯ ರೈಲ್ವೆ ಮೇಲ್ಸೇತುವೆ ಹಾಗೂ ಮದರ ತೆರೆಸಾ ಬಳಿಯ ಜೇವರ್ಗಿ ರಸ್ತೆಯ ರೈಲ್ವೆ ಕಾಮಗಾರಿಯನ್ನು ಯಾವುದೇ ಸಬೂಬು ಹೇಳದೇ ಬರುವ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣ ಮಾಡಬೇಕೆಂದು ಸಂಸದ ಡಾ| ಉಮೇಶ ಜಾಧವ ರೈಲ್ವೆ ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ 2019-20ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ ( ದಿಶಾ) ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಫ‌ಜಲಪುರ ರಸ್ತೆಯ ರೈಲ್ವೆ ಮೇಲ್ಸೆತುವೆ ಕಾಮಗಾರಿ 2015ರಲ್ಲಿಯೇ ಮುಗಿಯಬೇಕಿತ್ತು. ಇದಕ್ಕೆ ಎಲ್ಲರೂ ಜವಾಬ್ದಾರರಾಗಿದ್ದಿರಿ. ಈಗಲಾದರೂ ಕಾಮಗಾರಿ ಪೂರ್ಣಗೊಳಿಸುವತ್ತ ಮುಂದಾಗಿ ಎಂದು ತಾಕೀತು ಮಾಡಿದರು.

ಅಫ‌ಜಲಪುರ ರಸ್ತೆ ಮೇಲ್ಸೆತುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಆ ಭಾಗದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂಬುದು ತಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರಲ್ಲದೇ ಇನ್ಮುಂದೆ ಆಮೆಗತಿ ಕಾಮಗಾರಿ ಸಲ್ಲದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯ ಗಡಿ ಗ್ರಾಮ ಕುಲಾಲಿ ಸ್ಟೇಷನ್‌ ಬಳಿ ಮೇಲ್ಸೆತುವೆ ಹಾಗೂ ನೀಲೂರ ಬಳಿಯ ರೈಲ್ವೆ ಕೆಳ ಸೇತುವೆ ಕಾಮಗಾರಿ ಹಾಗೂ ಅದಕ್ಕೆ ಸಂಬಂಧಪಟ್ಟ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ತಮ್ಮೊಂದಿಗೆ ಇಲ್ಲಿಯ ವರೆಗೆ ಯಾಕೆ ಚರ್ಚೆ ಮಾಡಿಲ್ಲ ಎಂದು ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಿದರು. ರೈಲ್ವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸೊಲ್ಲಾಪುರ, ಸಿಕಂದ್ರಾಬಾದ್‌ ರೈಲ್ವೆ ವಿಭಾಗೀಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಮಗಾರಿಗಳ ವಾಸ್ತವ ವರದಿ ಪಡೆಯಿರಿ ಎಂದು ಜಿಲ್ಲಾಧಿಕಾರಿಗೆ ಸಂಸದರು ಸೂಚನೆ ನೀಡಿದರು.

ರೈಲ್ವೆ ಅಧಿಕಾರಿ ತರಾಟೆಗೆ: ಕಲಬುರಗಿ ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿ ಇಲ್ಲದೇ ಸಭೆಗೆ ಬಂದಿದ್ದ ರೈಲ್ವೆ ಅಧಿಕಾರಿ ಅಭಿದೇಶ ಅವರನ್ನು ಸಂಸದರು ಹಾಗೂ ಶಾಸಕ ಪ್ರಿಯಾಂಕ್‌ ಖರ್ಗೆ ತರಾಟೆಗೆ ತೆಗೆದುಕೊಂಡರು. ಬೇಕಾಬಿಟ್ಟಿಯಾಗಿ ಹಾಳೆಯೊಂದರಲ್ಲಿ ಅರ್ಧ ಅಳಿಸಿ, ಇನ್ನರ್ಧ ಏನೇನೂ ಬರೆದುಕೊಂಡು ಬಂದಿದ್ದೀರಿ? ನಾಚಿಕೆ ಆಗುವುದಿಲ್ಲವೇ? ಸಭೆ ಬಗ್ಗೆ ಗಂಭೀರತೆ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

Advertisement

ಶಾಲಾ ಕಾಂಪೌಂಡ್‌: ಉದ್ಯೋಗ ಖಾತ್ರಿ ಯೋಜನೆ ಅಡಿ ಶಾಲಾ ಕಾಂಪೌಂಡ್‌ಗಳನ್ನು ಕೈಗೊಳ್ಳಿ. ಶಾಲಾ ಕಾಂಪೌಂಡ್‌ಗಳು ಮಾದರಿ ಎನ್ನುವಂತೆ ನಿರ್ಮಾಣಗೊಳ್ಳಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಬೇಡಿ ಎಂದು ಸಂಸದ ಡಾ| ಉಮೇಶ ಜಾಧವ ಜಿಲ್ಲಾ ಪಂಚಾಯತ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡಿದ ಕೂಲಿಕಾರರಿಗೆ ಸಕಾಲಕ್ಕೆ ಕೂಲಿ ಸಿಗಬೇಕೆಂದರು.

ಸಿಆರ್‌ಎಫ್ ಸೇರಿದಂತೆ ಇತರ ಯೋಜನೆ ಅಡಿ ಕೇಂದ್ರದಿಂದ ಬಿಡುಗಡೆಯಾಗಬೇಕು. ಅದನ್ನು ಬಿಡುಗಡೆ ಮಾಡಬೇಕೆಂದು ಶಾಸಕ ಖರ್ಗೆ ಸಭೆ ಗಮನ ಸೆಳೆದರು. ಹಡಗಿಲ್‌ ಹಾರೂತಿಯಿಂದ ಸಾವಳಗಿ ನಡುವಿನ ರಸ್ತೆ ಖಾಸಗಿ ಜಮೀನ್ದಾರರೊಬ್ಬರು ನ್ಯಾಯಾಲಯಕ್ಕೆ ಹೋಗಿದ್ದರಿಂದ ರಸ್ತೆಯೇ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಶಾಸಕರಾದ ಎಂ.ವೈ.ಪಾಟೀಲ, ಸುಭಾಷ ಆರ್‌. ಗುತ್ತೇದಾರ, ಡಾ| ಅವಿನಾಶ ಜಾಧವ, ಖನಿಜ್‌ ಫಾತಿಮಾ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾಧಿಕಾರಿ ಬಿ. ಶರತ್‌, ಜಿಲ್ಲಾ ಪಂಚಾಯತ್‌ ಸಿಇಒ ಡಾ| ಪಿ. ರಾಜಾ, ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next