Advertisement

ಅನುದಾನ ಸಮರ್ಪಕ ಬಳಕೆಗೆ ನಿರ್ದೇಶನ

03:29 PM Apr 05, 2022 | Team Udayavani |

ಗದಗ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಹೊಣೆ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಜಿನಪ್ಪ ಗುಂಡೆ ನಿರ್ದೇಶನ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸಿದ್ದು, ಸಾಮಾಜಿಕ ಅಭಿವೃದ್ಧಿಯಡಿ ಇನ್ನೂ ಹೆಚ್ಚಿನ ರೈತರಿಗೆ ನೀರು, ಬಿತ್ತನೆ ಬೀಜ ಹಾಗೂ ಕೊಳವೆ ಬಾವಿಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಎಫ್‌ .ಯೂ. ಪೂಜಾರ ಮಾತನಾಡಿ, 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 1,53,400 ಅಲ್ಪಸಂಖ್ಯಾತರಿದ್ದಾರೆ. 2021-22ನೇ ಸಾಲಿನಲ್ಲಿ ರಾಜ್ಯ ವಲಯಕ್ಕೆ ಕ್ರೈಸ್ತ ಸಮುದಾಯ ಭವನ, ಮದರಸ ಆಧುನೀಕರಣ, ವಿದ್ಯಾಸಿರಿ, ಮೊರಾರ್ಜಿ ವಸತಿ ಶಾಲೆಗಳ ನಿರ್ವಹಣೆ ವೆಚ್ಚ, ಕಾನೂನು ಪದವೀಧರರಿಗೆ ತರಬೇತಿ ಸೇರಿದಂತೆ 1.84 ಕೋಟಿ ರೂ. ಖರ್ಚು ಮಾಡಲಾಗಿದ್ದು, ಜಿಲ್ಲೆಯಲ್ಲಿ 6 ಮೌಲಾನಾ ಆಝಾದ್‌ ಶಾಲೆಗಳು, 3 ಮೊರಾರ್ಜಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ. ಮಾತನಾಡಿ, 2021-22ನೇ ಸಾಲಿನಲ್ಲಿ ಅಲ್ಪಸಂಖ್ಯಾತರಿಗೆ ನಿಗದಿಪಡಿಸಲಾದ ಗುರಿಯಲ್ಲಿ ಬೀಜ ವಿತರಣೆಯಲ್ಲಿ ಶೇ. 97, ಮಣ್ಣಿನ ಸತ್ವ ಹೆಚ್ಚಿಸುವಿಕೆ ಶೇ.95, ರಾಷ್ಟ್ರೀಯ ಆಹಾರ ಭಧ್ರತಾ ಮಿಷನ್‌ ಯೋಜನೆಯಡಿ ಶೇ.98 ಹಾಗೂ ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಶೇ. 96ರಷ್ಟು ಪ್ರಗತಿ ಸಾಧಿಸಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ 15-17 ವಯೋಮಾನದ ಮಕ್ಕಳಿಗೆ ಮೊದಲನೇ ಡೋಸ್‌ ಶೇ.104, ಎರಡನೇ ಡೋಸ್‌ ಶೇ.95ರಷ್ಟು ನೀಡಲಾಗಿದ್ದು, 12-14 ವರ್ಷದೊಳಗಿನ ಮಕ್ಕಳಿಗೆ ಲಸಿಕಾಕರಣ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಜಗದೀಶ ನುಚ್ಚಿನ ತಿಳಿಸಿದರು.

Advertisement

ಅದಕ್ಕೆ ಪ್ರತಿಕ್ರಿಯಿಸಿದ ಧನ್ಯಕುಮಾರ ಗುಂಡೆ, ಕೋವಿಡ್‌ ಸೋಂಕು ನಿಯಂತ್ರಣ ಹಾಗೂ ಲಸಿಕಾಕರಣದಲ್ಲಿ ಜಿಲ್ಲೆಯು ಉತ್ತಮ ಪ್ರಗತಿ ಸಾಧಿಸಿದ್ದು, ಅಭಿನಂದನಾರ್ಹ ಎಂದರು. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಜಾರಿಯಲ್ಲಿರುವ ಶ್ರಮಶಕ್ತಿ ಸಾಲ ಯೋಜನೆ, ಮೈಕ್ರೋ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಟ್ಯಾಕ್ಸಿ, ಪ್ಯಾಸೆಂಜರ್‌ ಆಟೋರಿಕ್ಷಾ ಖರೀದಿ ಸಹಾಯಧನ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೆಲವು ಯೋಜನೆಗಳಡಿ ಫಲಾನುಭವಿಗಳ ಬೇಡಿಕೆ ಹೆಚ್ಚಿದ್ದು, ಅದಕ್ಕನುಗುಣವಾಗಿ ಗುರಿಯೂ ಹೆಚ್ಚಿಸಬೇಕು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಆಯೋಗದ ಮೂಲಕ ಮನವಿ ಮಾಡಿದರು.

ಕೇಂದ್ರ ವಲಯ ಯೋಜನೆಯಡಿ ಅಲ್ಪಸಂಖ್ಯಾತರಿಗೆ ನಿಗದಿಪಡಿಸಿದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಶೇ.104, ರಾಷ್ಟ್ರೀಯ ತೋಟಗಾರಿಕೆ ಮಿಷನ ಯೋಜನೆಯಡಿ ಶೇ.100 ರಷ್ಟು ಆರ್ಥಿಕ ಸಾಧನೆಯಾಗಿದ್ದು, ರಾಜ್ಯ ವಲಯ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣಕ್ಕಾಗಿ ಶೇ.100 ರಷ್ಟು ಸಾಧನೆಯಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು, ಜಿ.ಪಂ. ಸಿಇಒ ಭರತ ಎಸ್‌., ಎಸ್ಪಿ ಶಿವಪ್ರಕಾಶ ದೇವರಾಜ್‌, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next