Advertisement

ತ್ವರಿತವಾಗಿ ಕಾಮಗಾರಿ ಪ್ರಾರಂಭಕ್ಕೆ ನಿರ್ದೇಶನ

11:36 AM May 06, 2020 | mahesh |

ಬೆಂಗಳೂರು: ಬಿಬಿಎಂಪಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ಸಾಧ್ಯವಾದಷ್ಟು ಯಂತ್ರಗಳನ್ನು ಹೆಚ್ಚು ಬಳಸಿಕೊಂಡು ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಕಾಮಗಾರಿ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರ ಆರೋಗ್ಯ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ತ್ವರಿತವಾಗಿ ಕಾಮಗಾರಿ ಆರಂಭಿಸುವುದಕ್ಕೆ ನಗರದ ಬಿಲ್ಡರ್ ಹಾಗೂ ಗುತ್ತಿಗೆದಾರರು ನಿರ್ದೇಶಿಸಲಾಗಿದೆ ಎಂದರು.

Advertisement

ಈ ಸಂಬಂಧ ಮಂಗಳವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಇದಕ್ಕೂ ಮುನ್ನಾ ಬಿಲ್ಡರ್‌, ಗುತ್ತಿಗೆ ದಾರರ ಜತೆ ಸಭೆ ನಡೆಸಲಾಗಿದೆ ಎಂದು ಹೇಳಿದರು. ನಗರದಲ್ಲಿ ಲಾಕ್‌ಡೌನ್‌ನಿಂದ ಅರ್ಧಕ್ಕೆ ಸ್ಥಗಿತವಾಗಿರುವ ರಸ್ತೆ ವಿಭಾಗ, ಯೋಜನಾ ವಿಭಾಗ, ಕೆರೆ, ರಾಜಕಾಲುವೆ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನು ಪಾಲಿಕೆಯಿಂದ ಹೊಸದಾಗಿ ಅನುಮೋದನೆ ನೀಡಿದ ಕಾಮಗಾರಿ ಆರಂಭಿಸುವುದಕ್ಕೆ ಅವಕಾಶ ನೀಡಲಾಗಿದೆ ಎಂದರು.

ಸಭೆಯಲ್ಲಿ ಕಾಮಗಾರಿ ಪ್ರದೇಶಗಳಲ್ಲಿ ಗುತ್ತಿಗೆದಾರರಿಗೆ ಕೆಲವು ನಿರ್ದಿಷ್ಟ ಸೂಚನೆ ನೀಡಲಾಗಿದೆ. ಇದರಂತೆ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಬೇಕು. ಕಾಮಗಾರಿ ಸ್ಥಳದಲ್ಲಿನ ಕೂಲಿ ಕಾರ್ಮಿಕರು ಬೇರೆಡೆ ಹೋಗದಂತೆ ಎಚ್ಚರಿಕೆ ವಹಿಸಬೇಕು, ಅವರಿಗೆ ಬೇಕಾದ ದಿನಸಿ, ಆಹಾರ, ವಸತಿ ಹಾಗೂ ಆರೋಗ್ಯ ತಪಾಸಣೆ ವ್ಯವಸ್ಥೆಯನ್ನು ಕಾಮಗಾರಿ ಸ್ಥಳದಲ್ಲೇ ನೀಡುವಂತೆ  ನೋಡಿಕೊಳ್ಳಲು ಸಿಎಂ ನಿರ್ದೇಶಿ ಸಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂಬಂಧ ಪ್ರತಿಕ್ರಿಯಿಸಿದ ಬಿಬಿಎಂಪಿಯ ರಸ್ತೆ ಮೂಲಭೂತ ಸೌಕರ್ಯ ಮುಖ್ಯ ಎಂಜಿನಿಯರ್‌ ಎಸ್‌. ಸೋಮಶೇಖರ್‌ ಅವರು, ಯಲಹಂಕದಲ್ಲಿ ಎರಡು ಮೇಲ್ಸೇತುವೆ ಕಾಮಗಾರಿ (ರಾಷ್ಟ್ರೋತ್ಥಾನ ಸಿಗ್ನಲ್‌), ವರ್ತೂರು ಬ್ರಿಡ್ಜ್ ಕೆಲಸ, ರಸ್ತೆ ಅಭಿವೃದ್ಧಿ, ರಸ್ತೆ ವಿಭಜಕ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಅವರ
ಬಳಿ ಇರುವ ಕಾರ್ಮಿಕರ ಅನುಗುಣವಾಗಿ ಕೆಲಸ ಪ್ರಾರಂಭಿಸಿದ್ದಾರೆ. ಲಾಕ್‌ಡೌನ್‌ನಿಂದ ನಿಲ್ಲಿಸಲಾಗಿರುವ ಕಾಮಗಾರಿಗಳನ್ನು ಪುನಃ ಪ್ರಾರಂಭಿಸಲಾಗಿದೆ ಎಂದು ಮಾಹಿತಿ
ನೀಡಿದರು.

ಕಾರ್ಮಿಕರ ಕೊರತೆ: ಬಿಬಿಎಂಪಿ ವ್ಯಾಪ್ತಿಯ ಹಸಿರು ವಲಯದಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸುವುದಕ್ಕೆ ಸರ್ಕಾರ ಹಾಗೂ ಬಿಬಿಎಂಪಿ ಅನುಮತಿ ನೀಡಿದೆಯಾದರೂ, ಕಾಮಗಾರಿಗಳನ್ನು ಪ್ರಾರಂಭಿಸುವುದಕ್ಕೆ ಕಾರ್ಮಿಕರು ಹಾಗೂ ಸರಕುಗಳ ಕೊರತೆ ಇದೆ. ಸಹಜವಾಗಿ ಕಾಮಗಾರಿಗಳು ಪ್ರಾರಂಭವಾಗಬೇಕಾದರೂ ಕನಿಷ್ಠ ಎರಡು ತಿಂಗಳು ಬೇಕಾಗಬಹುದು ಎಂದು ಹೆಸರು
ಹೇಳಲಿಚ್ಛಿಸದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಮಿಕರು ಊರಿಗೆ ತೆರಳಿದ್ದು, ಅಲ್ಲದೆ, ಸಿಮೆಂಟ್‌, ಮರಳು, ಜಲ್ಲಿಕಲ್ಲು ಸೇರಿದಂತೆ ಅಗತ್ಯ ಸರಕುಗಳನ್ನು ಹೊಂದಿಸಿಕೊಳ್ಳುವುದಕ್ಕೆ ಕನಿಷ್ಠ 15ದಿನಗಳು ಬೇಕಾಗಬಹುದು. ಹೀಗಾಗಿ, ಕಾಮಗಾರಿಗಳ ಪ್ರಾರಂಭಕ್ಕೂ ತಡವಾಗಲಿದೆ ಎಂದರು.

Advertisement

ಆಯುಕ್ತರಿಗೆ ಕ್ಲಾಸ್‌!
ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವರಿಗೆ ದಂಡ ವಿಧಿಸುವ ಆದೇಶ ಮಾಡಿ ತಾವೇ ಮಾಸ್ಕ್ ಹಾಕಿಕೊಂಡಿಲ್ಲ ಹಾಗೂ ಪ್ಲಾಸ್ಟಿಕ್‌ ಬಾಟಲ್‌ ಬಳಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರನ್ನು ಟೀಕಿಸಲಾಗಿದೆ. ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಬಿಲ್ಡರ್‌ಗಳ ಮತ್ತು ಗುತ್ತಿಗೆದಾರರ ಸಭೆ ನಡೆಸಿದ್ದ ಚಿತ್ರವನ್ನು ಆಯುಕ್ತರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಜನರು ಕಾನೂನು ಸಾರ್ವಜನಿಕರಿಗೆ ಮಾತ್ರ ಅನ್ವಯಿಸುತ್ತದೆಯೇ, ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ಇದು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮೇ 17ರವರೆಗೆ ದಾಸೋಹ ವ್ಯವಸ್ಥೆ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ವಲಸೆ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ದಾಸೋಹ ಸಹಾಯವಾಣಿ ಮೂಲಕ ನೀಡುತ್ತಿರುವ ಆಹಾರವನ್ನು ಮೇ 17ರವರೆಗೆ ಮುಂದುವರಿಸಲಾಗುವುದು ಎಂದು ಬಿ.ಎಚ್‌.ಅನಿಲ್‌ ಕುಮಾರ್‌ ಹೇಳಿದರು. ಕಾರ್ಮಿಕ ಇಲಾಖೆಯ ದಾಸೋಹ ಸಹಾಯವಾಣಿ ಮೂಲಕ ನೀಡುತ್ತಿರುವ ಉಚಿತ ಊಟವನ್ನು ಮೇ 4ರಿಂದ ನಿಲ್ಲಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಯಾ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಸಿದಟಛಿಪಡಿಸಿದ ಉಚಿತ ಊಟ ಸರಬರಾಜು ಮಾಡುವ ಬಗ್ಗೆ ಕ್ರಮ ವಹಿಸಬೇಕು ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಆದೇಶಿಸಿದ್ದರು. ಆದರೆ, ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕ ಇಲಾಖೆಯಿಂದಲೇ ಊಟ
ಮುಂದುವರಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಕಾರ್ಡ್‌ ರೋಡ್‌ ಕಾಮಗಾರಿ ಸೋಮವಾರದಿಂದ ಪ್ರಾರಂಭವಾಗಲಿದೆ. ಇನ್ನು ವೈಟ್‌ಟಾಪಿಂಗ್‌ ಕಾಮಗಾರಿಗೆ ಸಿಮೆಂಟ್‌ ಪೂರೈಕೆ ಮಾಡುವಂತೆ ಖಾಸಗಿ ಸಂಸ್ಥೆಗೆ ಮನವಿ ಮಾಡಲಾಗಿದೆ. ಟೆಂಡರ್‌ ಶ್ಯೂರ್‌ ರೋಡ್‌ಗಳು ಹಾಗೂ ಅಂಡರ್‌ಪಾಸ್‌ ಕಾಮಗಾರಿಗಳನ್ನು ಪ್ರಾರಂಭಿಸುವುದಕ್ಕೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.
● ಎನ್‌.ರಮೇಶ್‌, ಮುಖ್ಯ ಎಂಜಿನಿಯರ್‌, (ಯೋಜನೆ)

Advertisement

Udayavani is now on Telegram. Click here to join our channel and stay updated with the latest news.

Next