ಕನ್ನಡದಲ್ಲಿ 135 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಯತಿರಾಜ್, ಇದೇ ಮೊದಲ ಬಾರಿಗೆ ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಯತಿರಾಜ್ ಈ ಹಿಂದೆಯೇ ನಿರ್ದೇಶಕರಾಗಬೇಕಿತ್ತು. ಹಲವು ಸಲ ನಿರ್ದೇಶನಕ್ಕೆ ಅಣಿಯಾಗಿದ್ದ ಅವರು, ಸಿನಿಮಾಗಳಲ್ಲಿ ನಟಿಸುತ್ತಲೇ ನಿರ್ದೇಶನವನ್ನು ಮುಂದೂಡುತ್ತ ಬಂದಿದ್ದರು. ಆದರೆ, ಆ ಸಮಯ ಈಗ ಬಂದಿದೆ. ಈಗಾಗಲೇ ನೆನಪಿರಲಿ ಪ್ರೇಮ್ ಅಭಿನಯದ “ಫೇರ್ ಅಂಡ್ ಲವ್ಲಿ’ ಚಿತ್ರಕ್ಕೆ ಯತಿರಾಜ್ ಕಥೆ ಬರೆದಿದ್ದರು.
ಈಗ ಹೊಸದೊಂದು ಕಥೆ ಬರೆದು ಅದಕ್ಕೆ ಚಿತ್ರಕಥೆಯನ್ನೂ ಮಾಡಿಕೊಂಡು ಅವರೇ ಆ ಚಿತ್ರವನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದಾರೆ. ಅಂದಹಾಗೆ, ಯತಿರಾಜ್ ನಿರ್ದೇಶನದ ಚಿತ್ರಕ್ಕೆ “ಪೂರ್ಣ ಸತ್ಯ’ ಎಂದು ಹೆಸರಿಡಲಾಗಿದೆ. “ದಿ ಮಿರರ್’ ಎಂಬ ಅಡಿಬರಹವೂ ಶೀರ್ಷಿಕೆಗೆ ಇದೆ. ಇಲ್ಲಿ ಯತಿರಾಜ್ ನಿರ್ದೇಶನದ ಜತೆಯಲ್ಲಿ ಲೀಡ್ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ನಟ, ನಿರ್ದೇಶಕ ಎಂ.ಡಿ.ಕೌಶಿಕ್ ಅವರಿಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಸದ್ಯಕ್ಕೆ ಇವರಿಬ್ಬರು ನಟಿಸುತ್ತಿರುವುದಷ್ಟೇ ಪಕ್ಕಾ, ಉಳಿದಂತೆ ನಾಯಕಿ ಸೇರಿದಂತೆ ಇತರೆ ಕಲಾವಿದರ ಹುಡುಕಾಟ ನಡೆಯುತ್ತಿದೆ. ಯತಿರಾಜ್ ಅವರ ಚೊಚ್ಚಲ ಚಿತ್ರ “ಪೂರ್ಣಸತ್ಯ’ ಸಮಾಗಮ ಕ್ರಿಯೇಷನ್ಸ್ ಬ್ಯಾನರ್‌ನಡಿ ತಯರಾಗುತ್ತಿದೆ. “ಇದೊಂದು ಹೊಸಬಗೆಯ ಚಿತ್ರವಾಗಿದ್ದು, ರೆಗ್ಯುಲರ್ ಪ್ಯಾಟ್ರನ್ ಸಿನಿಮಾಗಳಿಗಿಂತಲೂ ಹೊಸತನದಿಂದ ಕೂಡಿರುತ್ತೆ. ಇನ್ನು “ಪೂರ್ಣ ಸತ್ಯ’ ಕಥೆ ಬಗ್ಗೆ ಹೇಳುವುದಾದರೆ, ಇಲ್ಲಿ ಮೂರು ಪ್ರಮುಖ ಪಾತ್ರಗಳೇ ಹೈಲೈಟ್.
ನಮ್ಮನ್ನು ನಾವು ನೋಡಿಕೊಳ್ಳುವ ಪ್ರಯತ್ನ ಇಲ್ಲಿದೆ. ಅವರು ಸರಿ ಇಲ್ಲ, ಇವರು ಸರಿ ಇದ್ದಾರೆ, ನಾವೇ ಶ್ರೇಷ್ಠ ಅಂತ ಅಂದುಕೊಳ್ಳುತ್ತೇವೆ. ನಮ್ಮ ಅನುಕೂಲಕ್ಕೆ ತಕ್ಕಂತೆಯೇ ನಾವು ಬದಲಾಗುತ್ತೀವಿ. ಆಸ್ಪತ್ರೆಗೆ ಹೋದರೆ, ಬದುಕಿನ ಬಗ್ಗೆ ಕಾಳಜಿ ಬರುತ್ತೆ, ಸ್ಮಶಾನ ಕಡೆ ಹೋದರೆ, ಬದುಕು ಇಷ್ಟೇನಾ ಎಂಬ ವೈರಾಗ್ಯ ಬರುತ್ತೆ, ವಾಸ್ತವತೆಯ ಮಗ್ಗಲು ಬದಲಿಸಿದಾಗ ಮಾತ್ರ ಸತ್ಯದ ಅರಿವಾಗುತ್ತೆ. ಇವೆಲ್ಲವೂ ಈ ಚಿತ್ರದಲ್ಲಿರುತ್ತೆ. ಈ ವಿಷಯ ಇಟ್ಟುಕೊಂಡು ಹೊಸದೇನನ್ನೋ ಹೇಳುವ ಪ್ರಯತ್ನ ಮಾಡುತ್ತೇನೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಯತಿರಾಜ್.
ಚಿತ್ರಕ್ಕೆ ಯತಿರಾಜ ಜೊತೆಗೆ ಶ್ರೀಕಾಂತ್ ಎಂಬುವವರು ಮಾತುಗಳನ್ನು ಪೋಣಿಸುತ್ತಿದ್ದಾರೆ. ಅರುಣ್ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿ.ಎಲ್.ಬಾಬು ಕ್ಯಾಮೆರಾ ಹಿಡಿದರೆ, ಮಾರುತಿ ಮೀರಜ್‌ಕರ್ ಎರಡು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ತೀರ್ಥಹಳ್ಳಿ, ಸಕಲೇಶಪುರ ಸುತ್ತಮುತ್ತ ಸುಮಾರು 25 ದಿನಗಳ ಕಾಲ ಚಿತ್ರೀಕರಿಸುವ ಯೋಜನೆ ನಿರ್ದೇಶಕರಿಗಿದೆ. ಸೆಪ್ಟೆಂಬರ್‌ನಲ್ಲಿ “ಪೂರ್ಣಸತ್ಯ’ ಶುರುವಾಗಲಿದೆ.