Advertisement

ಅನ್ನದಾತರಿಗೆ ನೇರ ಮಾರುಕಟ್ಟೆ ಖಾತ್ರಿ

05:13 PM Mar 04, 2021 | Team Udayavani |

ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ)ಯಡಿ ಹಳ್ಳಿ ಜನರಿಗೆ ಉದ್ಯೋಗ ಕಲ್ಪಿಸುವುದು ಮಾತ್ರವಲ್ಲದೇ, ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಒದಗಿಸುವ ನೇರ ಮಾರುಕಟ್ಟೆಗೆ ಆಶ್ರಯವಾಗಿ ರೈತರು, ಸಣ್ಣ-ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಹಕರ ಮನ ಗೆಲ್ಲುವಲ್ಲೂ ಯಶಸ್ವಿಯಾಗಿದೆ.

Advertisement

ಆಗಿನ ಆಳಂದ ತಾಲೂಕು ಮತ್ತು ಈಗಿನ ಕಮಲಾಪುರ ತಾಲೂಕಿನ ವಿ.ಕೆ. ಸಲಗರ (ವಜೀದ್‌ ಖಾನ್‌ ಸಲಗರ) ಗ್ರಾಮದಲ್ಲಿ ಅನೇಕ ವರ್ಷಗಳಿಂದ ಪ್ರತಿ ಬುಧವಾರ ಸಂತೆ ನಡೆಯುತ್ತದೆ. ಈ ಸಂತೆಯಲ್ಲಿ ಸುತ್ತ-ಮುತ್ತಲಿನ 15ಕ್ಕೂ ಅಧಿಕ ಹಳ್ಳಿಗಳ ರೈತರು ತಾವು ಬೆಳೆದ ತರಕಾರಿಯನ್ನು ನೇರವಾಗಿ ತಂದು ಮಾರಾಟ ಮಾಡುತ್ತಾರೆ.

ಅನೇಕರು ದಿನಸಿ ಸಾಮಗ್ರಿಗಳನ್ನು ಮಾರಲು ಸಂತೆಯಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿ ಸಂತೆ ದಿನ ಬಿರು ಬಿಸಿಲಲ್ಲೇ ಮಾರಾಟಕ್ಕೆ ಕುಳಿತು ಬೆಂದು ಹೋಗುತ್ತಿದ್ದರು. ಆದರೀಗ ಇದೇ ಸಂತೆ ಸ್ಥಳದಲ್ಲಿ ಮನರೇಗಾ ಯೋಜನೆಯಡಿ 85 ಉದ್ದ ಮತ್ತು 65 ಅಗಲ ಚದರದಡಿಯಲ್ಲಿ ಶೆಡ್‌ ಮಾದರಿಯ ಸಂತೆ ಕಟ್ಟೆ ನಿರ್ಮಿಸಲಾಗಿದೆ. ಸುತ್ತಲೂ ಗೋಡೆ ಕಟ್ಟಿ ಒಳಾಂಗಣದಲ್ಲಿ 6ಗಿ6 ಅಡಿಯ “ಬಾಕ್ಸ್‌’ ಗುರುತು ಮಾಡಿ ಪ್ರತಿಯೊಬ್ಬರು ಕುಳಿತು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೀಗೆ 90 “ಬಾಕ್ಸ್‌’ಗಳನ್ನು ಮಾಡಲಾಗಿದ್ದು, ಪ್ರತಿ ಬುಧವಾರದ ಸಂತೆ ದಿನ ಸಂತೆ ಕಟ್ಟೆ ಭರ್ತಿಯಾಗಿರುತ್ತದೆ.

ತರಕಾರಿ ಮಾರಾಟಗಾರರು, ದಿನಸಿ ವ್ಯಾಪಾರಿಗಳು ನೆರಳಲ್ಲಿ ಕುಳಿತು ಖುಷಿಯಿಂದ ವ್ಯಾಪಾರ ಮಾಡುವುದು ಮತ್ತು ಗ್ರಾಹಕರು ಸಹ ಸಮಾಧಾನ, ನೆಮ್ಮದಿಯಿಂದ ಸುತ್ತಾಡಿ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿರುವ ದೃಶ್ಯ ಬುಧವಾರ ಕಂಡು ಬಂತು. ಬಿಸಿಲಿಗೆ ತರಕಾರಿ ಬಾಡಿಗೆ ಹೋಗಿ ಬೆಲೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಈ ಹಿಂದೆ ಕಲಬುರಗಿ ಮಾರುಕಟ್ಟೆಗೆ ಸಾಗಾಟ ಮಾಡುತ್ತಿದ್ದೆ. ಅಲ್ಲಿ ವ್ಯಾಪಾರಿಗಳು ಕೇಳಿದ ಬೆಲೆಗೆ ಕೊಟ್ಟು ಬರುತ್ತಿದೆ. ಆದರೆ, ಊರಲ್ಲೇ ಸುಸಜ್ಜಿತವಾದ ಸಂತೆ ನಿರ್ಮಾಣವಾಗಿದ್ದರಿಂದ ಕಲಬುರಗಿಗೆ ಹೋಗುವ ತಾಪತ್ರಯ ತಪ್ಪಿದೆ. ಮೇಲಾಗಿ ತರಕಾರಿ ಸಾಗಾಟಕ್ಕೆ ವಾಹನದ ವೆಚ್ಚ ಸಹ ಉಳಿತಾಯವಾಗುತ್ತಿದೆ ಎನ್ನುತ್ತಾರೆ ವಿ.ಕೆ. ಸಲಗರ ಗ್ರಾಮದ ರೈತ ತಾಜವುದ್ದೀನ್‌ ಬಳಿಗಾರ.

ನಾನು ಈರುಳ್ಳಿ, ಬೆಳ್ಳುಳ್ಳಿ ಸೇರಿ ಇತರ ತರಕಾರಿ ಮಾರಾಟ ಮಾಡಲು 20 ವರ್ಷಗಳಿಂದ ವಿ.ಕೆ. ಸಲಗರದ ಸಂತೆಗೆ ಬರುತ್ತೇನೆ. ಮಂಗಳವಾರ ನಮ್ಮೂರಿನ ಸಂತೆ ಮುಗಿಸಿ ಬುಧವಾರ ಇಲ್ಲಿಗೆ ಬರುತ್ತೇನೆ. ಇಷ್ಟು ವರ್ಷ ಸುಡು ಬಿಸಿಲಿಗೆ ಬಯಲಿಗೆ ಕೂತು ವ್ಯಾಪಾರ ಮಾಡುತ್ತಿದ್ದೆ. ಈಗ ಸಂತೆ ಕಟ್ಟೆ ನಿರ್ಮಾಣದಿಂದ ತಲೆಗೆ ನೆರಳು ಸಿಕ್ಕಂತೆ ಆಗಿದ್ದು, ತರಕಾರಿಗೂ ರಕ್ಷಣೆ ದೊರೆದಂತೆ ಆಗಿದೆ ಎಂದು ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ವ್ಯಾಪಾರಿ ಜಬೇರ್‌ ಭಗವಾನ್‌ ಹೇಳಿದರು.

Advertisement

ಈ ಹಿಂದೆ ತರಕಾರಿ ಮಾರಬೇಕಾದರೆ ನೆರಳಿಗಾಗಿ ಹುಡುಕಾಟ, ಪರದಾಟ ಮಾಡುವ ಪರಿಸ್ಥಿತಿ ಇತ್ತು. ಈಗ ಶಾಂತಿ, ಖುಷಿಯಿಂದ ಕುಳಿತು ಸಂಜೆಯವರೆಗೂ ದಣಿವೇ ಆಗದ ರೀತಿಯಲ್ಲಿ ಮಾರಾಟ ಮಾಡುತ್ತಿದ್ದೇನೆ ಎಂದು ರೈತ ಮಹಿಳೆ ಶಾಂತಾಬಾಯಿ ಸಂತೋಷ ಪಟ್ಟರು.

“ಲಾಕ್‌ಡೌನ್‌’ ಚಮತ್ಕಾರ: ಸಂತೆ ಕಟ್ಟೆ ನಿರ್ಮಾಣಕ್ಕೂ ಕೊರೊನಾದಿಂದ ಉಂಟಾದ ಲಾಕ್‌ ಡೌನ್‌ಗೂ ಸಂಬಂಧ ಇದೆ. ಜಿಲ್ಲೆಯಲ್ಲಿ ಲಾಕ್‌ ಡೌನ್‌ ಘೋಷಣೆಯಾಗಿ ಎಲ್ಲವೂ ಸ್ತಬ್ದವಾಗಿತ್ತು. ಅದೇ ಸಮಯದಲ್ಲಿ ಕೂಲಿಗಾರರಿಗೆ ಉದ್ಯೋಗ ಒದಗಿಸುವ ಮತ್ತು ತರಕಾರಿ ಮಾರಾಟಗಾರರಿಗೆ ನೆರಳಾಗುವ ಸಂತೆ ಕಟ್ಟೆ ನಿರ್ಮಾಣ ಕೈಗೂಡಿತ್ತು ಎನ್ನುತ್ತಾರೆ ಚಿಂಚನಸೂರ ಜಿಲ್ಲಾ ಪಂಚಾಯಿತಿ ಸದಸ್ಯ  ಶರಣಗೌಡ ಪಾಟೀಲ.

ವಿ.ಕೆ.ಸಲಗರ ಸಂತೆಯಲ್ಲಿ ಬೆಳಮಗಿ, ಕರಹರಿ, ಮುಳಗಾ, ಮರಡಿ, ಮಡಕಿ, ಲೇಂಗಟಿ, ಅಂಬಲಗಾ, ಬೆಟ್ಟ ಜೇವರ್ಗಿ ಹಾಗೂ ಪಕ್ಕದ ಬಸವಕಲ್ಯಾಣ ತಾಲೂಕಿನ ಮಂಠಾಳ, ಭೋಸಗಾ, ಕೋಹಿನೂರ, ಅಲಗೂಡ, ಅಟ್ಟೂರ, ಹರಕೂಡ, ವಡರಗಾ ಸೇರಿದಂತೆ ಇತರ ತಾಂಡಾಗಳ ರೈತರು ತಮ್ಮ ತರಕಾರಿ ಮತ್ತು ವ್ಯಾಪಾರಿಗಳು ದಿನಸಿ ಸಾಮಗ್ರಿಗಳನ್ನು ತಂದು ಮಾರಾಟದಲ್ಲಿ ತೊಡಗುತ್ತಾರೆ. ಬಿಸಿಲು ಮತ್ತು ಮಳೆಗೆ ತರಕಾರಿ ಮಾತ್ರವಲ್ಲಿ ದಿನಸಿ ವಸ್ತುಗಳ ಸಹ ಹಾಳಾಗಿ
ಹೋಗುತ್ತಿದ್ದವು. ಇದನ್ನು ಮನಗಂಡು ಲಾಕ್‌ಡೌನ್‌ ಸಮಯ ಸದುಪಯೋಗ ಪಡಿಸಿಕೊಂಡು ಮನರೇಗಾ ಯೋಜನೆಯಲ್ಲಿ 20 ಲಕ್ಷ ರೂ. (2.40 ಕೂಲಿಕಾರರ
ವೇತನ ಮತ್ತು 17.60ರೂ. ಕಟ್ಟೆ ಸಾಮಗ್ರಿ ವೆಚ್ಚ) ಗಳಲ್ಲಿ ಸಂತೆ ಕಟ್ಟೆ ನಿರ್ಮಾಣ ಮಾಡಲಾಗಿದೆ. ಕಳೆದ ಮಾರ್ಚ್‌ 18ರಂದು ಕಾಮಗಾರಿ ಆರಂಭವಾಗಿತ್ತು.
ಇದೇ ಜನವರಿ 26ರಂದು ಉದ್ಘಾಟಿಸಲಾಗಿದೆ. ಇದನ್ನು ನಿರ್ಮಿಸಲು ಮನರೇಗಾದಡಿ 880 ಮಾನವ ದಿನಗಳ ಸೃಜನೆಯಾಗಿದೆ ಎಂದು ಶರಣಗೌಡ ಪಾಟೀಲ ವಿವರಿಸಿದರು.

ಗ್ರಾಮ ಪಂಚಾಯಿತಿಗೂ ಲಾಭ
ಸಂತೆ ಕಟ್ಟೆ ಗ್ರಾಮ ಪಂಚಾಯಿತಿಗೂ ಆದಾಯ ಮೂಲವಾಗಿದೆ. ಸಂತೆ ಕಟ್ಟೆ ನಿರ್ಮಾಣದ ನಂತರ ಟೆಂಡರ್‌ ಕರೆದು ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ವಾರ ಸಂತೆ ಕಟ್ಟೆಯಲ್ಲಿ ಮಾರಾಟಕ್ಕೆ 10ರೂ. ತರಿಗೆ ಪಡೆಯಲಾಗುತ್ತದೆ. ಈ ಬಾರಿ 54 ಸಾವಿರ ರೂ. ಟೆಂಡರ್‌ ಆಗಿದೆ ಎಂದು ವಿ.ಕೆ. ಸಲಗರ ಗ್ರಾಪಂ ಬಿಲ್‌ ಕಲೆಕ್ಟರ್‌ ಶ್ರೀರಾಮ ರಾಮಶೆಟ್ಟಿ ಹೇಳಿದರು.

ಸಮುದಾಯಕ್ಕೂ ಉಪಯೋಗ
ಸಂತೆ ಕಟ್ಟೆಯನ್ನು ದೂರದೃಷ್ಟಿ ಮತ್ತು ಮುಂದಾಲೋಚನೆಯಿಂದ ನಿರ್ಮಾಣವಾಗಿದೆ. 85ಗಿ65 ಚದರದಡಿ ಶೆಡ್‌ನ‌ಲ್ಲಿ ಒಳಾಂಗಣದಲ್ಲಿ 10×12 ಅಡಿಯಷ್ಟು ವೇದಿಕೆ ಕಟ್ಟೆ ವ್ಯವಸ್ಥೆ ಇದೆ. ಎಡ ಮತ್ತು ಬಲಕ್ಕೆ ಕುಳಿತು ವ್ಯಾಪಾರ ತಲಾ ಆರು ಅಡಿ ಉದ್ದಕ್ಕೆ ಸಾಲಾದ ಕಟ್ಟೆ ಇದೆ. ಮಧ್ಯ ಭಾಗದಲ್ಲಿ ಕಟ್ಟೆ ಕಟ್ಟದೇ ಖಾಲಿ ಜಾಗ ಬಿಡಲಾಗಿದ್ದು, ಪ್ರತಿ ಆರು ಅಡಿಗೆ ಕೇವಲ ಬಣ್ಣದ ಬಾಕ್ಸ್‌ ಬಿಡಿಸಲಾಗಿದೆ. ಇದರಿಂದ ಸಂತೆ ದಿನ ಹೊರತಾಗಿ ಉಳಿದ ದಿನಗಳಲ್ಲಿ ಸಮುದಾಯಿಕವಾಗಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವ ರೀತಿಯಲ್ಲಿ ಸಂತೆ ಕಟ್ಟೆ ಇದೆ

ಗ್ರಾಮ ಪಂಚಾಯಿತಿಯಿಂದ ಒಂದು ಸಂತೆ ಕಟ್ಟೆ ನಿರ್ಮಾಣಕ್ಕೆ 10 ಲಕ್ಷ ರೂ.ವರೆಗೆ ಅವಕಾಶ ಇದೆ. ಆದರೆ, ವಿ.ಕೆ.ಸಲಗರ ಗ್ರಾಮದಲ್ಲಿ ವಿಶಾಲವಾದ ಸ್ಥಳ ಲಭ್ಯತೆ ಮತ್ತು ಸುತ್ತಲಿನ 15 ಹಳ್ಳಿಗಳ ರೈತರಿಗೆ ಅನುಕೂಲ ಆಗುತ್ತಿರುವುದಿಂದ ತಲಾ 10 ಲಕ್ಷ ರೂ. ವೆಚ್ಚದ ಎರಡು ಕಾಮಗಾರಿಗಳನ್ನು ತೆಗೆದುಕೊಂಡು ನಿರ್ಮಿಸಲಾಗಿದೆ. ಇದು ರಾಜ್ಯದಲ್ಲೇ ಮಾದರಿ ಸಂತೆ ಕಟ್ಟೆಯಾಗಿದೆ.
ಶರಣಗೌಡ ಪಾಟೀಲ,
ಜಿಪಂ ಸದಸ್ಯ, ಚಿಂಚನಸೂರ

ಈ ಮೊದಲು ನಾನು ತರಕಾರಿಯನ್ನು ಆಳಂದಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದೆ. ವಿ.ಕೆ. ಸಲಗರ ಸಂತೆ ಕಟ್ಟೆ ನಿರ್ಮಾಣದ ನಂತರ ಇಲ್ಲಿಗೆ ಬಂದು ವ್ಯಾಪಾರ ಮಾಡುತ್ತಿದ್ದೇನೆ. ನಮ್ಮೂರಿನಿಂದ ಆಳಂದಕ್ಕೆ ಹೋಗಲು ಪ್ರಯಾಣ ವೆಚ್ಚ 30ರೂ. ಖರ್ಚು ಮಾಡಬೇಕಿತ್ತು. ವಿ.ಕೆ.ಸಲಗರಕ್ಕೆ ಬರಲು ಕೇವಲ 15ರೂ. ವೆಚ್ಚ ತಗುಲುತ್ತಿದೆ. ತರಕಾರಿ ಮಾಡಿದ ಲಾಭಾಂಶ ಹೊರತಾಗಿ ಹೋಗಿ-ಬರುವ ಪ್ರಯಾಣ ವೆಚ್ಚ ಸೇರಿಯೇ 30ರೂ. ಉಳಿತಾಯವಾಗುತ್ತದೆ.
ಸುಲೇಬಾಯಿ, ರೈತ ಮಹಿಳೆ,
ಬೆಳಮಗಿ ತಾಂಡಾ

ವಿ.ಕೆ.ಸಲಗರ ಗ್ರಾಮದಲ್ಲಿ ಮನರೇಗಾ ಅಡಿ ನಿರ್ಮಾಣವಾದ ಸಂತೆ ಕಟ್ಟೆ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ಉಪಯೋಗವಾಗಿದೆ. ಜತೆಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಈ ಸಂತೆ ಕಟ್ಟೆಯೂ ಒಂದು ಆಸ್ತಿಯೂ ಆಗಿದೆ.
ದಿಲೀಷ್‌ ಸಸಿ, ಸಿಇಒ, ಜಿಪಂ

*ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next