Advertisement

ರೈತರ ನೂರಾರು ಟನ್‌ ಹಣ್ಣು ತರಕಾರಿಗೆ ನೇರ ಮಾರುಕಟ್ಟೆ

07:48 AM Apr 29, 2020 | mahesh |

ಬೆಂಗಳೂರು: ರೈತರು ಬೆಳೆದ ಹಣ್ಣು, ತರಕಾರಿಗಳನ್ನು ನೇರ ಮಾರುಕಟ್ಟೆ ಮೂಲಕ ಮಾರಾಟಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಗ್ರಿವಾರ್‌ ಘಟಕ ವ್ಯವಸ್ಥೆ ಮಾಡುತ್ತಿದ್ದು, ನೂರಾರು ಟನ್‌ ಹಣ್ಣು, ತರಕಾರಿಗಳನ್ನು ಈವರೆಗೆ ಮಾರಾಟ ಮಾಡಲಾಗಿದೆ.

Advertisement

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಚಾಮರಾಜ ನಗರ ಹಾಗೂ ರಾಮನಗರದಲ್ಲಿ ರೈತರಿಗೆ ಸಹಕಾರಿಯಾಗುವಂತೆ ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯ ಮೂಲಕವಾಗಿ ಕೃಷಿ ಇಲಾಖೆ, ಹಾಪ್‌ ಕಾಮ್ಸ್, ರೈತರ ಸಂಘಟನೆ ಮೂಲಕ ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಇದಕ್ಕಾಗಿಯೇ ಕೆಲವೊಂದು ಪ್ರದೇಶ, ಅಪಾರ್ಟ್‌ಮೆಂಟ್‌ ಇತ್ಯಾದಿಗಳನ್ನು ಗುರುತಿಸಿದ್ದೇವೆ ಎಂದು ಅಗ್ರಿವಾರ್‌ ನೋಡಲ್‌ ಅಧಿಕಾರಿ ಡಾ.ಎನ್‌.
ಎಸ್‌.ಶಿವಲಿಂಗೇಗೌಡ ಮಾಹಿತಿ ನೀಡಿದರು.

ಈವರೆಗೂ ಅಗ್ರಿವಾರ್‌ ಘಟಕ ಮತ್ತು ಬೆಂಗಳೂರು ವಿವಿ ವ್ಯಾಪ್ತಿಯ ಹತ್ತು ಜಿಲ್ಲಾವಾರ ಸಮನ್ವಯ ಸಮಿತಿಗಳಿಂದ ರೈತರು ಬೆಳೆದ ನೂರಾರು ಟನ್‌ ಹಣ್ಣು ತರಕಾರಿ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರ ನೀಡಿದರು. ಇದರ ಜತೆಗೆ ರೈತರಿಗೆ ಸದ್ಯ ಅಗತ್ಯವಿರುವ ಬಿತ್ತನೆ ಬೀಜದ ಮಾಹಿತಿ, ಗೊಬ್ಬರದ ಮಾಹಿತಿ ಸಹಿತವಾಗಿ ತಾಂತ್ರಿಕ ಮಾಹಿತಿಯನ್ನು ಒದಗಿ ಸುತ್ತಿದ್ದೇವೆ. ನೂರಾರು ಟನ್‌ಗಳಷ್ಟು ಹಣ್ಣು, ತರಕಾರಿ ಮಾರಾಟ ಮಾಡಲಾಗಿದೆ ಎಂದರು.

ಹಣ್ಣು ತರಕಾರಿ ರಫ್ತು: ನಾರಾಯಣಗೌಡ
ಬೆಂಗಳೂರು: ಹೊರ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ಹಣ್ಣು, ತರಕಾರಿ ರಫ್ತು ಪ್ರಾರಂಭ ವಾಗಿದೆ ಎಂದು ತೋಟಗಾರಿಕೆ ಸಚಿವ ನಾರಾಯಣಗೌಡ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆ ವಿಮಾನ ಸೇವಾ ಸಂಸ್ಥೆಗಳ ಜತೆ ಮಾತುಕತೆ ನಡೆಸಿದ ನಂತರ ಮಾತ ನಾಡಿದ ಅವರು, ಕಳೆದ ಒಂದು ವಾರದಿಂದ ಕೈಗೊಂಡ ಹಲವು ಕ್ರಮಗಳಿಂದ ಒಂದಷ್ಟು ಪ್ರಮಾಣದಲ್ಲಿ ಹೊರ ರಾಜ್ಯಗಳಿಗೆ ಹಣ್ಣು, ತರಕಾರಿ ಸಾಗಾಟವಾಗುತ್ತಿದೆ. ಪಕ್ಕದ ರಾಜ್ಯದ ಸಂಸ್ಕರಣಾ ಘಟಕಕ್ಕೂ ಟೊಮೆಟೋ, ಮಾವು ಸರಬರಾಜಾಗುತ್ತಿದೆ.

ಡಿಸ್ಟಿಲರಿ, ವೈನರಿ ಸೇರಿದಂತೆ ಸಾಧ್ಯವಿರುವ ಕಡೆಗಳಿಗೆ ಹಣ್ಣುಗಳನ್ನ ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿದೇಶಕ್ಕೆ ಹಣ್ಣು, ತರಕಾರಿ ರಫ್ತು ಮಾಡಲಾಗುತ್ತಿದೆಯಾದರೂ ದೊಡ್ಡ ಪ್ರಮಾಣದಲ್ಲಿ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಫಾರ್ವಡ್‌ ಏಜೆನ್ಸಿ, ಕಾರ್ಗೊ ಹ್ಯಾಂಡ್ಲರ್‌ ಜೊತೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ರಫ್ತುಗೆ ಇರುವ ಸಮಸ್ಯೆ ಬಗ್ಗೆ ಹೇಳಿದ್ದು, ಮುಖ್ಯಮಂತ್ರಿಯವರ ಮೂಲಕ ಕೇಂದ್ರ ಸರ್ಕಾರದ ಜೊತೆ ಶೀಘ್ರವೇ ಮಾತುಕತೆ ನಡೆಸುವ ಭರವಸೆ ನೀಡಿದ್ದೇನೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನವರು ಮೊದಲು ತಿಂಗಳವರೆಗೆ ಕ್ರೆಡಿಟ್‌ ನೀಡಿ ಹಣ್ಣು ತರಕಾರಿ ರಫ್ತು ಮಾಡ್ತಿದ್ರು. ಈಗ ಕ್ರೆಡಿಟ್‌ ನೀಡುತ್ತಿಲ್ಲ. ಜೊತೆಗೆ ದರ ಕೂಡ ಏರಿಕೆ ಮಾಡಿದ್ದಾರೆ. ಇದರಿಂದ ರಾಜ್ಯದ ಹಣ್ಣು, ತರಕಾರಿ ರಫ್ತು ಕಠಿಣವಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next