Advertisement

ದರ ನಿಗದಿ ವಿವಾದದಿಂದ “ನೇರ ಭೂಸ್ವಾಧೀನ’ಕೈಬಿಟ್ಟ ಸರ್ಕಾರ

02:40 AM Jul 16, 2017 | Harsha Rao |

ಬೆಂಗಳೂರು: ಎತ್ತಿನಹೊಳೆ ಯೋಜನೆಗಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಕಾಲುವೆಗಳ ನಿರ್ಮಾಣ ಮತ್ತು ಏತ ನೀರಾವರಿ ಕಾಮಗಾರಿಗಳಿಗಾಗಿ ಖಾಸಗಿ ಭೂಮಿಯನ್ನು ಜಿಲ್ಲಾಧಿಕಾರಿ ಮೂಲಕ ನೇರವಾಗಿ ಖರೀದಿಸುವ
ಸರ್ಕಾರದ ನಿರ್ಧಾರ ವಿಫ‌ಲವಾಗಿದೆ. ಇದರ ಬೆನ್ನಲ್ಲೇ 2013ರ ಭೂಸ್ವಾಧೀನ ಕಾಯ್ದೆಯಡಿಯಲ್ಲೇ ಭೂಮಿ ಖರೀದಿಸಲು
ಸರ್ಕಾರ ತೀರ್ಮಾನಿಸಿದೆ.

Advertisement

ಈ ಹಿನ್ನೆಲೆಯಲ್ಲಿ 2013ರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್‌ನಿರ್ಮಾಣ ಕಾಯ್ದೆ ಕಲಂ-45 ಪ್ರಕಾರ ಹಾಸನ ಡೀಸಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಯೋಜನಾ ಸಮಿತಿ ರಚಿಸಿದ್ದು, ಈ ಸಮಿತಿ ಮೂಲಕವೇ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲಿದೆ.

2013ರ ಭೂಸ್ವಾಧೀನ ಕಾಯ್ದೆ ಅನ್ವಯ ಭೂಸ್ವಾಧೀನ ಸಂದರ್ಭದಲ್ಲಿ ಯೋಜನೆಗೆ ಮಾತ್ರವಲ್ಲದೆ, ಭೂಮಿ ಕಳೆದುಕೊಳ್ಳುವವರಿಗೆ ಪುನರ್ವಸತಿ ಕಲ್ಪಿಸಲು ಕೂಡ ಪ್ರತ್ಯೇಕವಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ.
ಭೂಮಿ ಕಳೆದುಕೊಳ್ಳುವ ರೈತರ ಜತೆಗೆ ಅವರ ಕುಟುಂಬದವರಿಗೂ ಪರಿಹಾರ ಕಲ್ಪಿಸಬೇಕಾಗುತ್ತದೆ. ಹೀಗಾಗಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿ ಯೋಜನೆ ಪೂರ್ಣಗೊಳ್ಳುವುದೂ ತಡವಾಗುತ್ತದೆ. ಅಲ್ಲದೆ, ಭೂಸ್ವಾಧೀನಕ್ಕೆ ಹೆಚ್ಚು ವೆಚ್ಚವಾಗುವುದರೊಂದಿಗೆ ಯೋಜನಾ ವೆಚ್ಚವೂ ಏರಿಕೆಯಾಗಲಿದೆ.

ಎತ್ತಿನಹೊಳೆ ಯೋಜನೆ ಆರಂಭವಾಗುವುದೇ ಹಾಸನ ಜಿಲ್ಲೆ ಸಕಲೇಶಪುರದಲ್ಲಿ. ಹೀಗಾಗಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಹರಿಸಬೇಕೆಂಬ ಉದ್ದೇಶದಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಮುಗಿಸಲು ಹಾಸನ ಜಿಲ್ಲೆಯಲ್ಲಿ ಯೋಜನೆಗೆ ಅಗತ್ಯವಿರುವ ಖಾಸಗಿ ಭೂಮಿಯನ್ನು ಮಾಲೀಕರಿಂದ ನೇರವಾಗಿ ಖರೀದಿಸಲು ಸರ್ಕಾರ ಈ ಹಿಂದೆ ತೀರ್ಮಾನಿಸಿತ್ತು. ಅದರ ಪ್ರಕಾರ ಭೂಮಿಯ ಮಾಲೀಕರೊಂದಿಗೆ ಮಾತುಕತೆ ನಡೆಸಿ ಅವರಿಗೆ ಒಪ್ಪಿಗೆಯಾಗುವಂತೆ ಭೂಮಿಗೆ ದರ ನಿಗದಿಪಡಿಸಿ ಖರೀದಿ ಪ್ರಕ್ರಿಯೆ ಕೈಗೊಳ್ಳಬೇಕಿತ್ತು.

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯಲ್ಲಿ ಹಂತ 1ರಡಿ ಉದ್ದೇಶಿತ ಕಾಮಗಾರಿಗೆ ಸಂಬಂಧಿಸಿದಂತೆ 448 ಎಕರೆ 32.5 ಗುಂಟೆ ಖಾಸಗಿ ಜಮೀನು ಮತ್ತು 91 ಎಕರೆ 0.06 ಗುಂಟೆ ಸರ್ಕಾರಿ ಜಮೀನು,
34 ಎಕರೆ 16 ಗುಂಟೆ ಅರಣ್ಯ ಜಮೀನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದೆ. ಈ ಪೈಕಿ ಬಹುತೇಕ ಸಕಲೇಶಪುರ ತಾಲೂಕು ವ್ಯಾಪ್ತಿಯಲ್ಲಿ ಬರುತ್ತದೆ. 574 ಎಕರೆ 14.5 ಗುಂಟೆ ಪೈಕಿ 91 ಎಕರೆ 0.06 ಗುಂಟೆ ಸರ್ಕಾರಿ ಜಮೀನು, 34
ಎಕರೆ 16 ಗುಂಟೆ ಅರಣ್ಯ ಜಮೀನು ಸ್ವಾಧೀನ ಪ್ರಕ್ರಿಯೆ ಮುಗಿಸಿ ಆ ಭಾಗದಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಳಿಸಲಾಗಿದೆ. 448 ಎಕರೆ 32.5 ಗುಂಟೆ ಖಾಸಗಿ ಜಮೀನು ಸ್ವಾಧೀನ ಸರ್ಕಾರಕ್ಕೆ ಸವಾಲಾಗಿದೆ. ಡೀಸಿ ಭೂಮಾಲೀಕರೊಂದಿಗೆ ಚರ್ಚಿಸಿ ದರ ನಿಗದಿಪಡಿಸಿದರಾದರೂ ಬಹುತೇಕರಿಗೆ ಒಪ್ಪಿಗೆಯಾಗಲಿಲ್ಲ. ಜಮೀನಿಗಿಂತ ಹೆಚ್ಚಿನ ದರವನ್ನು ಪಟ್ಟಣ, ನಗರ ಪ್ರದೇಶಗಳ ಪಕ್ಕದಲ್ಲಿರುವ ಒಣಭೂಮಿಗೆ ನಿಗದಿಪಡಿಸಿದ್ದ ಬಗ್ಗೆ ಭೂಮಾಲೀಕರು ಆಕ್ಷೇಪ ಎತ್ತಿ ತಮ್ಮ ಭೂಮಿ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ಇದರಿಂದ ನೇರ ಭೂಸ್ವಾಧೀನ ಪ್ರಕ್ರಿಯೆಯನ್ನೇ
ಕೈಬಿಡಬೇಕಾಯಿತು.

Advertisement

– ಪ್ರದೀಪ್‌ ಕುಮಾರ್‌ ಎಂ

Advertisement

Udayavani is now on Telegram. Click here to join our channel and stay updated with the latest news.

Next