ತುಮಕೂರು: ಚಿಕ್ಕನಾಯಕನಹಳ್ಳಿಯಲ್ಲಿ ಅಭಿವೃದ್ಧಿ ಪದದ ಕಾಗುಣಿತ ಗೊತ್ತಿಲ್ಲದ ವ್ಯಕ್ತಿ ನನ್ನ ಎದುರಾಳಿಯಾಗಿದ್ದಾರೆ. ಹಾಗಾಗಿ ನನ್ನೆದುರು ನೀವೇ ಸ್ಪರ್ಧಿಸಿ ಎಂದು ನಾನು ಸಿದ್ದರಾಮಯ್ಯನವರನ್ನು ಕೇಳುತ್ತಿದ್ದೇನೆ. ಆಗ ಸಮಬಲದ ಹೋರಾಟ ನಡೆಯುತ್ತದೆ. ಇಬ್ಬರೂ ಸೆಣಸಾಡಲು ಗೌರವ ಇರುತ್ತದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಸ್ತಿ ಆಡಲು ಎದುರಾಳಿ ಎಲ್ಲ ರೀತಿಯಿಂದಲೂ ಸಮರ್ಥ ಇರಬೇಕು. ಸಿದ್ದರಾಮಯ್ಯ ಬಂದರೆ ಇಬ್ಬರೂ ಕುಸ್ತಿ ಆಡಬಹುದು. ಏನೂ ಗೊತ್ತಿಲ್ಲದವರ ಜತೆ ನಾನು ಸ್ಪರ್ಧಿಸಲು ನಿಂತಿದ್ದು ಯಾವ ಜನ್ಮದ ಪಾಪವೋ? ಇಂತಹ ಕೆಟ್ಟ ಸ್ಥಿತಿ ನನಗೆ ಬರಬಾರದಿತ್ತು ಎಂದರು.
ದೇವೇಗೌಡರು ತುಮಕೂರಿಗೆ ಹೇಮಾವತಿ ನೀರು ಕೊಡದೇ ಮೋಸ ಮಾಡಿದರು. ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಹೇಳಿಕೆಯ ಹಳೆಯ ಪೇಪರ್ ಕಟಿಂಗ್ ತೋರಿಸಿದ್ದೆ. ಹಾಗಾಗಿಯೇ ಜಿಲ್ಲೆಯ ಜನರು ದೇವೇಗೌಡರನ್ನು ಸೋಲಿಸಿದರು ಎಂದು ಹೇಳಿದರು.
ಸಚಿವ ಮಾಧುಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನಾನು ತುಮಕೂರಿನಲ್ಲಿ ಪ್ರಚಾರ ಮಾಡಿದ್ದು ಅವರಲ್ಲಿ ಭಯ ಮೂಡಿಸಿದೆ. ಅಪ್ಪ-ಮಕ್ಕಳು-ಮೊಮ್ಮಕ್ಕಳು, ಮನೆಯಲ್ಲಿರುವ ಹೆಣ್ಣು ಮಕ್ಕಳ ಹೆಸರನ್ನೂ ಅವರು ಎಳೆದು ತಂದಿದ್ದಾರೆ. ದೋಚುತ್ತಿದ್ದಾರೆ ಎಂಬ ಪದ ಬಳಸಿದ್ದಾರೆ. ಯಾರನ್ನು ದೋಚಿದ್ದಾರೆ ಎಂಬುದನ್ನು ಅವರು ಹೇಳಬೇಕು.
ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ನಾವು ಕಾಂಗ್ರೆಸ್‌ನವರ ರೀತಿ ಅಗ್ರೆಸಿವ್ ಆಗಿ ಮಾತನಾಡುತ್ತಿಲ್ಲ. ನಾವು ಗಟ್ಟಿ ಧ್ವನಿಯಲ್ಲಿ ನಮ್ಮ ಸಾಧನೆಯನ್ನು ಹೇಳಿಕೊಳ್ಳಬೇಕಾಗಿದೆ. ಆಗ ಅವರು ಬಾಯಿ ಮುಚ್ಚಿಕೊಳ್ಳುತ್ತಾರೆ. ವಿರೋಧಿಗಳನ್ನು ಆಡಲು ಬಿಟ್ಟರೆ ಅವರು ಆಡುತ್ತಲೇ ಇರುತ್ತಾರೆ.
-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ