ಬೆಂಗಳೂರು: ಆಶಾ ಕಾರ್ಯಕರ್ತೆಯರು ಸೆಪ್ಟೆಂಬರ್ 7ರಿಂದ ಅನಿರ್ಧಿಷ್ಟ ಧರಣಿಗೆ ಮುಂದಾಗಿರುವ ಬೆನ್ನಲ್ಲೇ, ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇಲಾಖೆ, ಆಶಾ ಕಾರ್ಯಕರ್ತೆಯರಿಗೆ 34 ವಿವಿಧ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಅದರೊಂದಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ಒಂದು ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದೆ.
ಇದರಿಂದ ಕನಿಷ್ಠ 5 ರಿಂದ 6 ಸಾವಿರ ರೂ. ಸಂಪಾದನೆ ಗಳಿಸಬಹುದಾಗಿದೆ. ಎಂಸಿಟಿಎಸ್ ತಂತ್ರಾಂಶದ ಮೂಲಕ
ಗರ್ಭಿಣಿಯರನ್ನು ಟ್ರ್ಯಾಕಿಂಗ್ ಮಾಡಲು 1,050 ಹಾಗೂ ಹೆಚ್ಚಿನ ಅಪಾಯವಿರುವ ಗರ್ಭಿಣಿಯರನ್ನು ಗುರುತಿಸಲು ಹೆಚ್ಚುವರಿಯಾಗಿ 500 ರೂ. ಪ್ರೋತ್ಸಾಹ ಧನ ನೀಡಲು ಸರ್ಕಾರ ಸೂಚಿಸಿದೆ. ರಾಜ್ಯದ 37,000 ಆಶಾ ಕಾರ್ಯಕರ್ತೆಯರಿಗೆ ಜುಲೈನಲ್ಲಿ 18 ಕೋಟಿ ರೂ., ಆಗಸ್ಟ್ ತಿಂಗಳಲ್ಲಿ 9 ಕೋಟಿ ರೂ.ಗಳನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗಿದೆ.
ಎಂಸಿಟಿಎಸ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಪಾವತಿಯಾಗುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.