Advertisement

ಗಂಗಾವತಿಯಲ್ಲಿ ನೇರ ಹಣಾಹಣಿ

03:24 PM Apr 28, 2019 | Suhan S |

ಕೊಪ್ಪಳ: ಭತ್ತದ ನಾಡು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಗೆ ಮತದಾರ ಜೈ ಎಂದಿದ್ದಾನೆ ಎನ್ನುವುದು ಬಾರಿ ಕುತೂಹಲ ಮೂಡಿಸಿದ್ದು, ಕಾಂಗ್ರೆಸ್‌-ಬಿಜೆಪಿ ನಡುವೆ ಬಾರಿ ಪೈಪೋಟಿ ನಡೆದಿರುವ ಸಾಧ್ಯತೆಯಿದೆ. ಕಳೆದ ಬಾರಿ ಕಾಂಗ್ರೆಸ್‌ಗೆ ಮುನ್ನಡೆ ಕೊಟ್ಟ ಈ ಕ್ಷೇತ್ರದ ಮತದಾರ ಈ ಬಾರಿ ಮೋದಿ ಅಲೆಯಾಟದಲ್ಲೂ ಹೊಯ್ದಾಟದಲ್ಲೇ ಮತ ನೀಡಿದ್ದಾನೆ.

Advertisement

ಹೌದು. ಗಂಗಾವತಿ ವಿಧಾನಸಭಾ ಕ್ಷೇತ್ರದ ಈ ಹಿಂದಿನ ಇತಿಹಾಸ ಅವಲೋಕನ ಮಾಡಿದರೆ ಕಾಂಗ್ರೆಸ್‌ನ ಭದ್ರಕೋಟೆ ಎಂದೆನಿಸಿದ್ದರೂ ಇಲ್ಲಿನ ಮತದಾರ ಇಕ್ಬಾಲ್ ಅನ್ಸಾರಿ ಅವಧಿಯಲ್ಲಿ ದಳದತ್ತ ವಾಲಿದ್ದನ್ನು ಮರೆಯುವಂತಿಲ್ಲ. ಇದರ ಮಧ್ಯೆ ಕೈ ಬಲಪಡಿಸಲು ಅನ್ಸಾರಿ ಸೇರಿದಂತೆ ಇತರೆ ನಾಯಕರು ಹಗಲಿರುಳು ಶ್ರಮಿಸಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿಯೂ ಮತದಾರರು ಕೈ ಜಪ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಇನ್ನೂ 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಅವಲೋಕಿಸಿದರೆ, ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಗೆ 53,460 ಮತಗಳು ಬಂದಿದ್ದವು. ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಸವರಾಜ ಹಿಟ್ನಾಳಗೆ 63,715 ಮತ ಬಂದಿದ್ದವು. ಇದರಲ್ಲಿ 10,255 ಮತಗಳ ಅಂತರದಲ್ಲಿ ಹಿಟ್ನಾಳ್‌ಗೆ ಲೀಡ್‌ ಕೊಡುವ ಮೂಲಕ ಕಾಂಗ್ರೆಸ್‌ಗೆ ಬಲ ನೀಡಿದ್ದ ಮತದಾರ ಈ ಬಾರಿ ರಾಜಶೇಖರ ಹಿಟ್ನಾಳ್‌ರತ್ತ ವಾಲಿದ್ದಾನೆ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೂ ಮೋದಿ ಅವರ ಗಂಗಾವತಿ ಸಮಾವೇಶವು ಯುವ ಸಮೂಹದ ಮತಗಳನ್ನು ಕ್ರೋಡಿಕರಿಸಿದ್ದು, ಯುವಕರು ಕಮಲದತ್ತ ವಾಲಿದ್ದಾರೆ ಎನ್ನುವ ಚರ್ಚೆಗಳು ನಡೆದಿವೆ.

ಇನ್ನೂ ಈ ಕ್ಷೇತ್ರದಲ್ಲಿ ಲಿಂಗಾಯತರು, ಮುಸ್ಲಿಂರು ಸೇರಿ ಕುರುಬ ಸಮುದಾಯದ ಮತಗಳು ನಿರ್ಣಾಯಕ ಸ್ಥಾನದಲ್ಲಿವೆ. ಲಿಂಗಾಯತ ಪ್ರಾಬಲ್ಯವಿರುವ ಈ ಕ್ಷೇತ್ರವೇ ಕಳೆದ ಭಾರಿ ಬಿಜೆಪಿಯ ಕರಡಿಗೆ ಮೈನಸ್‌ ಕೊಟ್ಟಿತ್ತು. ಮೈನಸ್‌ ಹೋಗಲಾಡಿಸಲು ಈ ಬಾರಿ ಸಂಘ ಪರಿವಾರ ಆಂತರಿಕವಾಗಿ ಭರ್ಜರಿ ಕೆಲಸ ಮಾಡಿದೆ ಎಂದೆನ್ನಲಾಗುತ್ತಿದೆ. ಈ ಕ್ಷೇತ್ರ ಪ್ರಸ್ತುತ ಬಿಜೆಪಿ ವಶದಲ್ಲಿದೆ. ಶಾಸಕ ಪರಣ್ಣ ಮುನವಳ್ಳಿ ತಮ್ಮ ಪಡೆ ಕಟ್ಟಿಕೊಂಡು ಎಲ್ಲೆಡೆ ಪ್ರಚಾರ ನಡೆಸಿ ಮತ ಸೆಳೆಯುವಲ್ಲಿ ಪ್ರಯತ್ನಿಸಿದ್ದಾರೆ.

ಇನ್ನೂ ಕಾಂಗ್ರೆಸ್‌ ನಾಯಕ ಇಕ್ಬಾಲ್ ಅನ್ಸಾರಿಗೆ ಲೋಕಸಭಾ ಚುನಾವಣೆ ಪ್ರತಿಷ್ಠೆಯಾಗಿದ್ದರಿಂದ ಹಗಲು-ರಾತ್ರಿ ಎನ್ನದೆ ಪ್ರಚಾರ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಕೊಟ್ಟ ಹಳ್ಳಿಗಳ ಮೇಲೆ ನಿಗಾ ಇಟ್ಟಿರುವ ಅನ್ಸಾರಿ ತಮಗಾದ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಇದನ್ನೊಂದು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡು ಪ್ರಚಾರ ನಡೆಸಿದ್ದಾರೆ. ಅಲ್ಲದೇ, ಇರಕಲ್ಗಡಾ ಭಾಗ ಕುರುಬ ಹಾಗೂ ಎಸ್‌ಟಿ ಸಮುದಾಯ ಇರುವುದರಿಂದ ಕೈಗೆ ವರದಾನವಾಗಲಿದೆ ಎನ್ನುವ ರಾಜಕೀಯ ಲೆಕ್ಕಾಚಾರ ಕೇಳಿ ಬಂದಿದೆ.

Advertisement

ಇನ್ನೂ ಕಾಂಗ್ರೆಸ್‌ನಿಂದ ಸಿಡಿದೆದ್ದು, ಅನ್ಸಾರಿ ವಿರುದ್ಧ ಕೆಂಡಕಾರಿದ್ದ ಎಚ್.ಆರ್‌. ಶ್ರೀನಾಥ ಮತ್ತು ಅವರ ಪಡೆ ರಾಜ್ಯದಲ್ಲಿನ ಮೈತ್ರಿಯಿಂದಾಗಿ ಕ್ಷೇತ್ರದಲ್ಲಿ ಮತ್ತೆ ಕೈಗೆ ಬೆಂಬಲಿಸುವಂತ ಸಂದಿಗ್ಧ ಸ್ಥಿತಿಯನ್ನ ಅನುಭವಿಸಿ ಕೊನೆಗೆ ಕೈಗೆ ಜೈ ಎಂದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರಂತೂ ಮಾಜಿ ಸಂಸದ ಎಚ್.ಜಿ. ರಾಮುಲು ಬೆನ್ನು ಬಿದ್ದು ಅವರ ಮಾರ್ಗದರ್ಶನದಲ್ಲಿಯೇ ಪ್ರಚಾರದ ಕಾರ್ಯ ಹೆಣೆದು ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವ ಮಾತು ಕೇಳಿ ಬಂದರೂ ಆಂತರಿಕವಾಗಿ ಪ್ರಬಲ ಸಮುದಾಯ ಈ ಬಾರಿ ಹೊಯ್ದಾಟದಲ್ಲೇ ಮತದಾನ ಮಾಡಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಕಮಲದಾಟ ನಡೆದಿದೆ ಎನ್ನುತ್ತಿದ್ದರೂ ಮತದಾರ ಕೈಗೆ ಜೈ ಎಂದಿದ್ದಾನೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇಬ್ಬರ ನಡುವೆ ನೇರಾನೇರ ಹಣಾಹಣಿ ನಡೆದಿದೆ. ಯಾರತ್ತ ಮತದಾರ ತನ್ನ ಒಲವು ತೋರಿದ್ದಾನೆ ಎನ್ನುವುದನ್ನು ಕಾದು ನೋಡಬೇಕಿದೆ.

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next