ಮಂಗಳೂರು: ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ಸಂಚಾರ ನಡೆಸುವ ಇನ್ನೊಂದು ವಿಮಾನ ಸೇವೆ ಅ.27ರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರಂಭಗೊಳ್ಳಲಿದ್ದು, ಈ ಮೂಲಕ ಹೊಸದಿಲ್ಲಿಗೆ ನೇರ ವಿಮಾನ ಸೇವೆಗೆ ಮರುಜೀವ ಸಿಕ್ಕಂತಾಗಿದೆ.
ಈ ನಡುವೆ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಮಂಗಳೂರು-ಹೊಸದಿಲ್ಲಿ ನಡುವಿನ ಸ್ಪೈಸ್‌ಜೆಟ್ ವಿಮಾನ ಸಂಚಾರವೂ ಶುಕ್ರವಾರದಿಂದ ಆರಂಭಗೊಂಡಿದೆ. ಮಂಗಳೂರು-ಹೊಸದಿಲ್ಲಿಯ ಮಧ್ಯೆ ನೂತನ 180 ಆಸನಗಳಿರುವ ಇಂಡಿಗೋ ವಿಮಾನ ಸೇವೆ ಅ.27ರಿಂದ ಆರಂಭಗೊಳ್ಳಲಿದೆ. ಹೊಸದಿಲ್ಲಿಯಿಂದ ಮಧ್ಯಾಹ್ನ 2.05ಕ್ಕೆ ಹೊರಡುವ ವಿಮಾನವು ಸಂಜೆ 4.55ಕ್ಕೆ ಮಂಗಳೂರಿಗೆ ತಲುಪಲಿದೆ. ಮಂಗಳೂರಿನಿಂದ ಸಂಜೆ 5.30ಕ್ಕೆ ಹೊರಡುವ ವಿಮಾನವು ರಾತ್ರಿ 8.10ಕ್ಕೆ ಹೊಸದಿಲ್ಲಿ ತಲುಪಲಿದೆ. ಅದೇ ವಿಮಾನ ಮತ್ತೆ ಮರುದಿನ ಹೊಸದಿಲ್ಲಿಯಿಂದ ಮಂಗಳೂರಿಗೆ ಆಗಮಿಸಲಿದೆ.
ಈ ಮಧ್ಯೆ, ಕಳೆದ 10 ದಿನಗಳಿಂದ ಮಂಗಳೂರು-ಹೊಸದಿಲ್ಲಿ ಮಧ್ಯೆ ಸ್ಥಗಿತಗೊಂಡಿರುವ ಸ್ಪೈಸ್‌ಜೆಟ್ ವಿಮಾನ ಸೇವೆಯು ಶುಕ್ರವಾರದಿಂದ ಮರು ಚಾಲನೆ ಪಡೆದಿದೆ. ಆದರೆ ವಿಮಾನ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 5.55ಕ್ಕೆ ಮಂಗಳೂರಿನಿಂದ ಹೊರಡುವ ವಿಮಾನವು 8.55ಕ್ಕೆ ಹೊಸದಿಲ್ಲಿ ಹಾಗೂ ರಾತ್ರಿ 8.30ಕ್ಕೆ ಹೊಸದಿಲ್ಲಿಯಿಂದ ಹೊರಡುವ ವಿಮಾನವು ರಾತ್ರಿ 11.15ಕ್ಕೆ ಮಂಗಳೂರಿಗೆ ಆಗಮಿಸಲಿದೆ. ಅದೇ ವಿಮಾನ ಮತ್ತೆ ಮರುದಿನ ಮಂಗಳೂರಿನಿಂದ ಪ್ರಯಾಣಿಸಲಿದೆ.
ಹೊಸದಿಲ್ಲಿಗೆ ಮಂಗಳೂರಿನಿಂದ ಒಂದು ಜೆಟ್ ಏರ್‌ವೇಸ್ ಹಲವು ತಿಂಗಳ ಹಿಂದೆ ಸಂಚಾರ ನಡೆಸುತ್ತಿತ್ತು. ಆದರೆ, ಕಾರಣಾಂತರದಿಂದ ಆ ವಿಮಾನ ಸೇವೆ ಸ್ಥಗಿತಗೊಂಡಿತ್ತು. ಪರಿಣಾಮವಾಗಿ ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ವಿಮಾನ ಸೇವೆಯೇ ಇರಲಿಲ್ಲ. ಒಂದುವೇಳೆ ದಿಲ್ಲಿಗೆ ಹೋಗಬೇಕಾದರೆ ಬೆಂಗಳೂರು ಅಥವಾ ಮುಂಬಯಿಗೆ ಹೋಗಿ ದಿಲ್ಲಿಗೆ ತೆರಳಬೇಕಾಗಿತ್ತು. ಹೀಗಾಗಿ, ಹೊಸದಿಲ್ಲಿಗೆ ನೇರವಿಮಾನ ಸೇವೆ ಮರು ಆರಂಭಿಸುವ ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿದ್ದರು. ಇದರಂತೆ ಸ್ಪೈಸ್‌ಜೆಟ್ ಹೊಸ ವಿಮಾನ ಸೇವೆ ಆ.4ರಿಂದ ಆರಂಭಗೊಂಡಿತ್ತು. ಆದರೆ, ಪ್ರಯಾಣಿಕರ ಕೊರತೆ ಹಾಗೂ ನಿರ್ವಹಣೆಯ ನೆಪವೊಡ್ಡಿ ಆ ವಿಮಾನ ಸೇವೆ ಕಳೆದ 10 ದಿನಗಳಿಂದ ಬಂದ್ ಆಗಿತ್ತು. ಇದೀಗ ಮತ್ತೆ ಈ ವಿಮಾನ ಸಂಚಾರ ಆರಂಭಿಸಿದೆ.
ಸದ್ಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್, ಇಂಡಿಗೋ, ಏರ್ ಇಂಡಿಯಾ ವಿಮಾನಯಾನ ಸೇವೆಗಳು ಮಂಗಳೂರಿನಿಂದ ಮುಂಬಯಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ದುಬೈ, ದೋಹಾ, ಕತಾರ್, ಶಾರ್ಜಾ, ಬೆಹರೈನ್, ಕುವೈಟ್, ಮಸ್ಕತ್‌ಗೆ ಸೇವೆ ನೀಡುತ್ತಿದೆ.
ನೇರ ವಿಮಾನ ಸೇವೆ
ಮಂಗಳೂರು-ಹೊಸದಿಲ್ಲಿ ಮಧ್ಯೆ ಇಂಡಿಗೋದಿಂದ ನೇರ ವಿಮಾನ ಸೇವೆ ಅ.27ರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರಂಭವಾಗಲಿದೆ. ಈ ಮೂಲಕ ಮಂಗಳೂರಿನಿಂದ ದೇಶದ ರಾಜಧಾನಿಗೆ ಪ್ರಯಾಣಿಸುವವರಿಗೆ ನೇರ ವಿಮಾನ ಸೇವೆ ಲಭ್ಯವಾದಂತಾಗಿದೆ.
ಅರ್ಚನಾ, ಪ್ರಾದೇಶಿಕ ವ್ಯವಸ್ಥಾಪಕರು, ಇಂಡಿಗೋ ವಿಮಾನ ಸಂಸ್ಥೆ-ಮಂಗಳೂರು