Advertisement

ತಲೆಬಿಸಿ ಯಾಕೆ; ಪ್ರತ್ಯಕ್ಷ-ಪರೋಕ್ಷ ಶೇರು ಹೂಡಿಕೆ ತಿಳಿದುಕೊಳ್ಳಿ

12:38 PM Apr 30, 2018 | udayavani editorial |

ಎಲ್ಲ  ಹೂಡಿಕೆಗಳ ಪೈಕಿ ಶೇರು ಹೂಡಿಕೆಯೇ ಅತ್ಯಧಿಕ ಇಳುವರಿಯ ಮಾಧ್ಯಮ ಎನ್ನುವುದು ಸಾರ್ವಕಾಲಿಕ ಸತ್ಯ.

Advertisement

ಆದರೂ ಇದನ್ನು ನಂಬುವುದು ನಮ್ಮ ನಿಮ್ಮಂತಹ ಸಾಮಾನ್ಯರಿಗೆ ಬಲು ಕಷ್ಟ. ಸಾಮಾನ್ಯರ ದೃಷ್ಟಿಯಲ್ಲಿ ಬ್ಯಾಂಕುಗಳ ನಿರಖು  ಠೇವಣಿಯೇ ಅತ್ಯಾಕರ್ಷಕ, ಸುಭದ್ರ. ಒಮ್ಮೆ ಇರಿಸುವ ಠೇವಣಿ ಅದು ಮಾಗುವ ತನಕ ನಿಶ್ಚಿತ ಬಡ್ಡಿಗೆ ಮೋಸವಿಲ್ಲ. ಅಸಲಿಗೂ ಮೋಸವಿಲ್ಲ. ಈ ನಡುವಿನ ಅವಧಿಯಲ್ಲಿ ಯಾವುದೇ ತಲೆಬಿಸಿ ಇರುವುದಿಲ್ಲ. 

ಶೇರು ಮಾರುಕಟ್ಟೆಯ ಏರಿಳಿತಗಳ ತಲೆ ಬಿಸಿ ಯಾರಿಗೆ ಬೇಕು; ಶೇರಿಗೆ  ಹಾಕುವ ಹಣ ಸಮುದ್ರಕ್ಕೆ ಎಸೆದಂತೆ ಎಂದು ಭಾವಿಸುವವರೇ ಹೆಚ್ಚು. ಇದಕ್ಕೆ ಮುಖ್ಯ ಕಾರಣ ತಿಳಿವಳಿಕೆಯ ಕೊರತೆ. ಶೇರು ಹೂಡಿಕೆಯ ಮಾತು ಹಾಗಿರಲಿ; ಶೇರು ಮಾಧ್ಯಮದ ಕುರಿತ ಜ್ಞಾನವನ್ನು ಸಂಪಾದಿಸುವುದೇ ಕಷ್ಟಕರ ಎಂಬ ಭಾವನೆ ನಮ್ಮಲ್ಲಿ ಹೆಚ್ಚಿನವರಿಗೆ ಇರುವಾಗ ಶೇರು ಹೂಡಿಕೆಗೆ ಮುಂದಾಗುವುದಕ್ಕೆ ನಾವು ಹಿಂಜರಿಯುವುದು ಸಹಜವೇ ಆಗಿರುತ್ತದೆ. 

ಶೇರುಗಳಲ್ಲಿ  ನಾವು ನೇರವಾಗಿ ಹಣ ಹೂಡಬಹುದು; ಆದರೆ ಆ ತಲೆಬಿಸಿಯ ಉಸಾಬರಿ ಬೇಡವೇ ಬೇಡ ಎಂದಾದರೆ ನಾವು ಮ್ಯೂಚುವಲ್ ಫ‌ಂಡ್ ಮೂಲಕ ಶೇರುಗಳಲ್ಲಿ ಹಣ ಹೂಡಿಕೆಯನ್ನು ಮಾಡಬಹುದು. ಅನೇಕಾನೇಕ ಹಣಕಾಸು ಕಂಪೆನಿಗಳ ಮ್ಯಾಚುವಲ್ ಫ‌ಂಡ್‌ ಗಳಲ್ಲಿ  ಅನೇಕಾನೇಕ ಸ್ಕೀಮುಗಳು ಇರುತ್ತವೆ. ಪ್ರತೀ ತಿಂಗಳು ನಿರ್ದಿಷ್ಟ ಮೊತ್ತವನ್ನು ಸಿಪ್ (Systematic Investment Plan = SIP) ಕ್ರಮದ ಮೂಲಕ ತೊಡಗಿಸುವುದು ಅತ್ಯಂತ ಕ್ಷೇಮಕರ ಎನ್ನುವುದರಲ್ಲಿ ಎರಡು ಮಾತಿಲ್ಲ. 

ಮ್ಯೂಚುವಲ್ ಫ‌ಂಡ್‌ ಗಳಲ್ಲಿ  ಜನರು ಹೂಡುವ ಹಣವನ್ನು ಕಲೆಹಾಕಿ ಫ‌ಂಡ್ ಮ್ಯಾನೇಜರ್‌ ಗಳು ಶೇರು ಮಾರುಕಟ್ಟೆಯ ಸಂಶೋಧನಾತ್ಮಕ ಅಧ್ಯಯನ ಕೈಗೊಂಡು ಜನರ ಹಣವನ್ನು ತರ್ಕಬದ್ಧವಾಗಿ ಆಯ್ದ, ದೀರ್ಘ‌ಕಾಲದಲ್ಲಿ ಉತ್ತಮ ಆರ್ಥಿಕ ಭವಿಷ್ಯವನ್ನು ಹೊಂದಿರುವ ವಿವಿಧ ಕಂಪೆನಿಗಳ ಶೇರುಗಳಲ್ಲಿ ತೊಡಗಿಸುತ್ತಾರೆ.

Advertisement

ಫ‌ಂಡ್ ಮ್ಯಾನೇಜರ್‌ ಗಳು ತಾರ್ಕಿಕ ನೆಲೆಯಲ್ಲಿ ತಮ್ಮೆಲ್ಲ ಕುಟಿಲತೆಗಳನ್ನು ಆಧರಿಸಿಕೊಂಡು ಆ ಕಂಪೆನಿಗಳ ಮಾರುಕಟ್ಟೆ ಏರಿಳಿತಗಳ ಫಾಯಿದೆಯನ್ನು ಪಡೆಯುತ್ತಾರೆ. ಕಂಪೆನಿಗಳು ಕೊಡುವ ಡಿವಿಡೆಂಡ್, ಬಾಂಡ್‌ ಗಳ  ಮೇಲಿನ ಬಡ್ಡಿ, ಇತ್ಯಾದಿ ಸೇರಿದಂತೆ ಹೂಡಿಕೆ ಆದಾಯಗಳನ್ನು ಹೆಚ್ಚಿಸುವ ಮಾರ್ಗೋಪಾಯಗಳನ್ನು ಅನುಸರಿಸುತ್ತಲೇ ಇರುತ್ತಾರೆ. 

ಒಂದೊಮ್ಮೆ ನಾವೇ ಖುದ್ದಾಗಿ ಶೇರುಗಳಲ್ಲಿ ಹಣ ತೊಡಗಿಸುವುದಾದರೆ ಶೇರು ಮಾರುಕಟ್ಟೆಯಲ್ಲಿನ ವಹಿವಾಟಿಗೆ ಸಂಬಂಧಿಸಿದ ಪದಗಳನ್ನು ಮೊದಲಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ : ಸ್ಟಾಕ್ಸ್, ಬಾಂಡ್ಸ್, ಬದ್ಲಾ, ಅಂಧಾ ಬದ್ಲಾ, ಈಲ್ಡ್, PE (price to earning) ratio, ಇತ್ಯಾದಿ. ಶೇರು ಹೂಡಿಕೆಯಲ್ಲಿ  ಹೊಸದಾಗಿ ತೊಡಗುವ ಯಾರಿಗೆ ಆದರೂ ಈ ಪದಗಳು ಖಂಡಿತವಾಗಿ ಲ್ಯಾಟಿನ್ ರೂಪದಲ್ಲಿ ಧ್ವನಿಸುವುದು ಸಹಜ. ಆದರೆ ಕ್ರಮೇಣ ಇವೆಲ್ಲ ಅರ್ಥವಾಗಲು ಹಲವು ವರ್ಷಗಳೇ ತಗಲಬಹುದು. ಯಾವುದೇ ಜ್ಞಾನ ಶಾಖೆಯಲ್ಲಿ ಎಲ್ಲರೂ ಎಲ್ಲವನ್ನೂ ತಿಳಿಯುವುದು ಅಸಾಧ್ಯ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. 

ನಾವೇ ಖುದ್ದಾಗಿ ಶೇರುಗಳಲ್ಲಿ ಹಣತೊಡಗಿಸುವಾಗ ಹೂಡಿಕೆಯ ಅಂತಿಮ ನಿರ್ಧಾರ ನಮ್ಮದೇ ಆಗಿರುತ್ತದೆ. ಆದರೆ ಹೂಡಿಕೆಗೆ ಮುನ್ನ ವಿಶ್ವಾಸಾರ್ಹ ಹಣಕಾಸು ಪತ್ರಿಕೆಗಳು, ಫಿನಾನ್‌ಶಿಯಲ್‌ ವೆಬ್‌ ಸೈಟ್‌ ಗಳು, ಇತ್ಯಾದಿಗಳನ್ನು ಅಧ್ಯಯನ ಮಾಡುವುದು ಅತೀ ಅಗತ್ಯ. ಈ ಅಧ್ಯಯನ ಕ್ರಮವನ್ನು ನಿರಂತರವಾಗಿ ತಪ್ಪದೆ ಪಾಲಿಸಿದರೆ ನಾವೇ ಪರಿಣತಿಯನ್ನು ಸಾಧಿಸುತ್ತಾ ಮುನ್ನಡೆಯಲು ಸಾಧ್ಯವಾಗುತ್ತದೆ. ಆದರೆ ಅದು ರಾತ್ರಿ ಬೆಳಗಾಗುವುದರೊಳಗೆ ಆಗುವ ಮ್ಯಾಜಿಕ್‌ ಅಲ್ಲ. 

ಶೇರುಗಳಲ್ಲಿ ಹೂಡಿಕೆ ಮಾಡಲು ಮೊತ್ತ ಮೊದಲಾಗಿ ಬ್ಯಾಂಕುಗಳಲ್ಲಿ, ಹಣಕಾಸು ಕಂಪೆನಿಗಳಲ್ಲಿ ಡಿ- ಮ್ಯಾಟ್ ಅಕೌಂಟ್ ತೆರೆಯಬೇಕಾಗುತ್ತದೆ. ನಾವು ತೆರೆಯುವ ಡಿ ಮ್ಯಾಟ್ ಅಕೌಂಟ್ ನಿರ್ದಿಷ್ಟ ಬ್ಯಾಂಕಿನ ನಮ್ಮ SB (ಉಳಿತಾಯ) ಖಾತೆಗೆ ಜೋಡಿಸಲ್ಪಟ್ಟಿರುತ್ತದೆ.

ಬ್ಯಾಂಕಿನ ವೆಬ್ ಸೈಟಿನ Trading Section ನಲ್ಲಿ  ಶೇರು ವಹಿವಾಟನ್ನು  ನಾವೇ ಖುದ್ದಾಗಿ ನಡೆಸುವುದಕ್ಕೆ ಅವಕಾಶ ಇರುತ್ತದೆ. ಅದಕ್ಕೆ ಐಡಿ, ಪಾಸ್ ವರ್ಡ್ ಕೊಡಲಾಗಿರುತ್ತದೆ. ಅದನ್ನು ಬಳಸಿಕೊಂಡು ಟ್ರೇಡಿಂಗ್ ಪೋರ್ಟಲ್ ಪ್ರವೇಶಿಸಿದರೆ ಶೇರು ಮಾರುಕಟ್ಟೆ (ಬಾಂಬೆ ಸ್ಟಾಕ್ ಎಕ್ಸ್ಚೇಂಜ್/ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್)ಯ ಲೈವ್ ಶೇರು ವಹಿವಾಟು ಕಂಡು ಬರುತ್ತದೆ. ಇಳಿಕೆ ಹಾದಿಯಲ್ಲಿರುವ ಶೇರು ಧಾರಣೆ ಕೆಂಬಣ್ಣದಲ್ಲೂ, ಏರುಗತಿಯಲ್ಲಿರುವ ಶೇರು ಧಾರಣೆ ಹಸಿರು ಬಣ್ಣದಲ್ಲೂ ಮಿಂಚುತ್ತಿರುತ್ತವೆ. ಇದಕ್ಕೆ ಲೈವ್ ಸ್ಟ್ರೀಮಿಂಗ್ ಎಂದು ಹೇಳುತ್ತಾರೆ. 

ಹಾಸಿಗೆ ಇದ್ದಷ್ಟೇ ಕಾಲು ಚಾಚು ಎಂಬ ಪಾಠವನ್ನು ಶೇರು ಮಾರುಕಟ್ಟೆಯು ಎಲ್ಲ ಹೂಡಿಕೆದಾರರಿಗೆ ಅತ್ಯುತ್ತಮವಾದ ರೀತಿಯಲ್ಲಿ, ಆದ್ಯಾತ್ಮಿಕತೆಯೇ ಮೈವೆತ್ತಂತೆ, ಎಂದೂ ಮರೆಯದ ರೀತಿಯಲ್ಲಿ ಕಲಿಸಿಕೊಡುತ್ತದೆ ! ಸಾಲ ಮಾಡಿ ತಂದ ಹಣವನ್ನು ಎಂದೂ ಶೇರಿಗೆ ಹಾಕಬಾರದು ಎಂಬುದನ್ನು ಸದಾ ನೆನಪಿಟ್ಟುಕೊಳ್ಳುವಂತೆ ಮಾಡುತ್ತದೆ. ಉಳಿತಾಯದ ಹಣದಲ್ಲಿ ತುರ್ತಿಗಾಗಿ ಸ್ವಲ್ಪಾಂಶವನ್ನು ಪ್ರತ್ಯೇಕವಾಗಿ ಇರಿಸಿಕೊಂಡು ಉಳಿದ ಮೊತ್ತವನ್ನು ಶೇರಿಗೆ ಹಾಕುವ ಪರಿಪಾಠ ಉತ್ತಮ. 

ನಿಮ್ಮ ಆದಾಯದ ಪ್ರತೀ  ನೂರು ರೂಪಾಯಿಯಲ್ಲಿ 65 ರೂಪಾಯಿ ನಿಮಗಾಗಿ, ನಿಮ್ಮ ಖರ್ಚು ವಚ್ಚ, ಜೀವನ ನಿರ್ವಹಣೆ ಇತ್ಯಾದಿಗಳಿಗೆಂದು ಬಳಸಿ, ಉಳಿದ 35 ರೂ.ಗಳನ್ನು ಉಳಿತಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ 35 ರೂ.ಗಳಲ್ಲಿ ಹೆಚ್ಚೆಂದರೆ ಅರ್ಧಾಂಶವನ್ನು ಶೇರು ಹೂಡಿಕೆಗೆ ವಿನಿಯೋಗಿಸಬಹುದು. ಹಣ ಉಳಿತಾಯದಲ್ಲಿ ಇಡಿಯ ವಿಶ್ವದಲ್ಲೇ ಚೀನಿಯರು ಅಗ್ರರು; ನಾವು ಅವರಿಂದ ಉಳಿತಾಯದ ಪಾಠ ಕಲಿಯಬೇಕು ಎಂದು ವಿಶ್ಲೇಷಕರು ಹೇಳುತ್ತಾರೆ. 

ಶೇರು ಹೂಡಿಕೆಯನ್ನು ಕನಿಷ್ಠ ಐದು ವರ್ಷಗಳ ಅವಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಾಡಿದರೆ ಮಾತ್ರವೇ ಲಾಭಕರವಾದೀತು. ಬ್ಯಾಂಕಿನಲ್ಲಿ ನಾವು  ಹಣವನ್ನು 5 ವರ್ಷ ನಿರಖು  ಠೇವಣಿ ಇಟ್ಟ ಬಳಿಕ ಐದು ವರ್ಷ ಮುಗಿವ ತನಕ ಅದನ್ನು  ಕಡ್ಡಾಯವಾಗಿ ಮರೆತೇ ಬಿಟ್ಟವರಂತೆ ಹೇಗೆ ಅದರ ಗೋಜಿಗೆ ಹೋಗುವುದಿಲ್ಲವೋ ಹಾಗೆಯೇ ಶೇರು ಹೂಡಿಕೆ ಮಾಡಬೇಕು ಎನ್ನುವುದನ್ನು ಮರೆಯಬಾರದು.  

Advertisement

Udayavani is now on Telegram. Click here to join our channel and stay updated with the latest news.

Next