ಬೆಂಗಳೂರು: ಇನ್ನು ಮುಂದೆ ಡಿಪ್ಲೊಮಾ ಪರೀಕ್ಷೆಗಳನ್ನು ಕನ್ನಡ ಮತ್ತು ಇಂಗ್ಲಿಷ್- ಎರಡೂ ಭಾಷೆಗಳಲ್ಲಿ ಬರೆಯಬಹುದು.
ಎಸೆಸೆಲ್ಸಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿ ಡಿಪ್ಲೊಮಾ ಸೇರುವ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ವಾಕ್ಯ ರಚನೆ ಮಾಡುವುದಕ್ಕೆ ಭಯ ಪಡುತ್ತಾರೆ. ಕಂಠಪಾಠ ಮಾಡಿಕೊಂಡು ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯುತ್ತಾರೆ. ಇಂಗ್ಲಿಷ್ ಬಗ್ಗೆ ಅವರಲ್ಲಿರುವ ಕೀಳರಿಮೆ ಹೋಗಲಾಡಿಸುವುದಕ್ಕಾಗಿ ಈ ನಿಯಮವನ್ನು ಪ್ರಸಕ್ತ ಸಾಲಿನಿಂದಲೇ ಜಾರಿಗೊಳಿಸಲಾಗುತ್ತಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತ ಪಿ. ಪ್ರದೀಪ್ ತಿಳಿಸಿದ್ದಾರೆ.
ತರಗತಿಗಳಲ್ಲಿ ಬೋಧನೆ ಸಮಯದಲ್ಲಿಯೂ ವಿದ್ಯಾರ್ಥಿಗಳಿಗೆ ಪಾಠವನ್ನು ಅರ್ಥೈಸಲು ಶಿಕ್ಷಕರು ಇಂಗ್ಲಿಷ್ ಜತೆಗೆ ಕನ್ನಡ ಬಳಸುತ್ತಾರೆ. ಇದೇ ವಿಧಾನವನ್ನು ಪರೀಕ್ಷೆಯಲ್ಲಿಯೂ ಅಳವಡಿಕೆ ಮಾಡಿಕೊಳ್ಳಲಾಗಿದೆ. ಡಿಪ್ಲೊಮಾ ಕೋರ್ಸ್‌ಗಳು ಹೆಚ್ಚಿನ ಭಾಗ ತಾಂತ್ರಿಕ ಮತ್ತು ಸಂವಹನಕ್ಕೆ ಸಂಬಂಧಿಸಿದ ಪಠ್ಯಗಳಾಗಿರುವುದರಿಂದ ಈ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ:ಬಂಡೀಪುರ ಸಂರಕ್ಷಿತ ಪ್ರದೇಶದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ!
ರಾಜ್ಯದಲ್ಲಿ 280 ಡಿಪ್ಲೊಮಾ ಕಾಲೇಜುಗಳಿದ್ದು, ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇತ್ತೀಚೆಗೆ ನಡೆದ ತಾಂತ್ರಿಕ ಶಿಕ್ಷಣ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವ ಶಿಕ್ಷಕರಿಗೂ ಈ ಕುರಿತು ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.