Advertisement
ಅನಂತರದಲ್ಲಿ ಏನೇನಾಯಿತು? ತಮ್ಮ ಪ್ರತಿಜ್ಞೆಯನ್ನು ದೀಪೇಶ್ ಹೇಗೆ ಪಾಲಿಸಿದರು? ಕಾಮುಕರಿಂದ ಹೆಣ್ಣು ಮಕ್ಕಳನ್ನು ಎಲ್ಲಿ, ಹೇಗೆ ಕಾಪಾಡಿದರು? ಈ ಕೆಲಸದಿಂದ ಅವರಿಗೆ ಸಿಕ್ಕಿದ್ದಾದರೂ ಏನು ಎಂಬ ವಿವರಗಳನ್ನು ಹುಡುಕಿಕೊಂಡು ಹೊರಟಾಗ, ದೀಪೇಶ್ ಅವರೇ ಮಾತಿಗೆ ಸಿಕ್ಕಿದರು. ತಮ್ಮ ಕೆಲಸದ ಬಗ್ಗೆ ಮಾತ್ರವಲ್ಲ; ಬದುಕಿನ ಕುರಿತೂ ಹೇಳಿಕೊಂಡರು. ಅದು ಹೀಗೆ:*****
“ನಾನು ಚಿಕ್ಕವನಿದ್ದಾಗಲೇ, ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಅಪ್ಪ ತೀರಿಕೊಂಡರು. ಆಗ, ಇಡೀ ಕುಟುಂಬದ ಜವಾಬ್ದಾರಿ ಅಮ್ಮನ ಮೇಲೆ ಬಿತ್ತು. ಅಮ್ಮ, ಪಿ.ಜಿ.ಗಳಲ್ಲಿ, ರೂಮ್‌ಗಳಲ್ಲಿ ವಾಸಿಸುವ ಹೆಣ್ಣು ಮಕ್ಕಳಿಗೆ ಅಡುಗೆ ಮಾಡಿಕೊಡುವ ಕೆಲಸಕ್ಕೆ ಸೇರಿಕೊಂಡಳು. ಕಷ್ಟದಲ್ಲಿ ರುವವರಿಗೆ, ಹೆಣ್ಣುಮಕ್ಕಳಿಗೆ ನೆರವಾಗಬೇಕು; ಆ ಮೂಲಕ ಈ ಸಮಾಜದ ಋಣ ತೀರಿಸಬೇಕು- ಇದು ಅಮ್ಮ ನನಗೆ ಬಾಲ್ಯದಲ್ಲಿಯೇ ಹೇಳಿಕೊಟ್ಟಿದ್ದ ಪಾಠ. ಬಡತನದ ಕಾರಣದಿಂದ ಕಾಲೇಜಿಗೆ ಹೋಗಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಾಲವೂ ನಮಗಿತ್ತು. ನಾನೂ ದುಡಿದರೆ ಮನೆಯ ಕಷ್ಟ ಕಳೆಯುತ್ತೆ ಅನ್ನಿಸಿದಾಗ, ಕಂಪ್ಯೂಟರ್ ತಯಾರಿಸುವ ಕಂಪೆನಿಯೊಂದರಲ್ಲಿ ಆಫೀಸ್ ಬಾಯ್ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿದ್ದಾಗಲೇ ಕಂಪ್ಯೂಟರ್‌ಗಳ ರಿಪೇರಿ, ಸರ್ವಿಸಿಂಗ್ ಸೇರಿದಂತೆ ಹಲವು ಬಗೆಯ ತಾಂತ್ರಿಕ ಪರಿಣತಿ ಗಳಿಸಿಕೊಂಡೆ. ಅನಂತರ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಹುಡುಕಿಕೊಂಡೆ. ಹೊಸ ಕೆಲಸದಿಂದ ಸಂಬಳ ದುಪ್ಪಟ್ಟಾಯಿತು. ಹೆಚ್ಚುವರಿಯಾಗಿ ಸಿಕ್ಕ ಹಣದಿಂದ ಎಲ್ಲಾ ಸಾಲ ತೀರಿಸಿದ್ದು ಮಾತ್ರವಲ್ಲ, ಮುಂಬಯಿಯ ಮಲಾಡ್‌ನಲ್ಲಿದ್ದ ಅಪಾರ್ಟ್‌ಮೆಂಟ್‌ಗೆ ವಾಸ್ತವ್ಯ ಬದಲಿಸಿಕೊಂಡೆ.
Related Articles
Advertisement
ಈ ಮಧ್ಯೆ ಮುಂಬಯಿಯ ಹಲವು ಪತ್ರಿಕೆಗಳಲ್ಲಿ ನಮ್ಮ ಕೆಲಸದ ಕುರಿತು ಸ್ಟೋರಿಗಳು ಪ್ರಕಟವಾದವು. ಅನಂತರದಲ್ಲಿ ರೈಲ್ವೇ ಪೊಲೀಸರು ನಮ್ಮ ದೂರುಗಳನ್ನು ಸ್ವೀಕರಿಸಿ ಪುಂಡರ ವಿರುದ್ಧ ಕ್ರಮ ಕೈಗೊಳ್ಳಲು ಆರಂಭಿಸಿದರು. ನಮ್ಮ ಕೆಲಸ ಸುಲಭದ್ದಿರಲಿಲ್ಲ. ನಾವೂ ಬೋಗಿಯೊಳಗೇ, ಪುಂಡರಿಂದ ಒಂದಷ್ಟು ದೂರದಲ್ಲಿದ್ದುಕೊಂಡೇ ಅವರ ಕುಕೃತ್ಯವನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ರೈಲ್ವೇ ಪೊಲೀಸರಿಗೆ ಕಳುಹಿಸಬೇಕಿತ್ತು. ಎಷ್ಟೋ ಬಾರಿ ಪುಂಡರು ಒಟ್ಟಾಗಿ ನುಗ್ಗಿ ಬಂದು-“ಏನು ರೆಕಾರ್ಡ್ ಮಾಡ್ತಾ ಇದ್ದೀಯ? ಈ ಹುಡುಗೀರ್ನ ರೇಗಿಸಿದರೆ ನಿನಗೇನ್ ಕಷ್ಟ? ಇವರೇನು ನಿನ್ನ ಸ್ವಂತ ಅಕ್ಕ-ತಂಗಿಯಾ? ಊರ ಉಸಾಬರಿ ನಿಮಗ್ಯಾಕೆ? ಎಂದೆಲ್ಲ ಗದರುತ್ತಿದ್ದರು. ಹಲ್ಲೆ ಮಾಡುತ್ತಿದ್ದರು. ಇಂಥ ಸಂದರ್ಭಗಳಲ್ಲಿ ನಾನೂ ಹೊಡೆದಾಟಕ್ಕೆ ಸಿದ್ಧನಾಗಿಯೇ ಇರುತ್ತಿದ್ದೆ. ಆದರೆ ಹೀಗೇ ಅದೆಷ್ಟು ದಿನ ಹೊಡೆದಾಡಿಕೊಂಡು ಬದುಕುವುದು? ಆಗ ಗೆಳೆಯನೊಬ್ಬ ಹೊಸ ಐಡಿಯಾ ಕೊಟ್ಟ. ಅದರಂತೆ- ಹಿಡನ್ ಕೆಮರಾ ಹೊಂದಿರುವ ಕನ್ನಡಕ ಧರಿಸಿ ರೈಲು ಹತ್ತುವುದೆಂದು ನಿರ್ಧರಿಸಿದ್ದಾಯಿತು. ಆ ಕನ್ನಡಕದ ಬೆಲೆ 30 ಸಾವಿರ ರೂಪಾಯಿ ಎಂದು ತಿಳಿದಾಗ ಗಾಬರಿಯಾದದ್ದು ನಿಜ. ಏಕೆಂದರೆ ನನ್ನ ತಿಂಗಳ ಸಂಬಳ 24 ಸಾವಿರ ರೂ. ಮಾತ್ರವಿತ್ತು. ಈ ಸಂದರ್ಭದಲ್ಲಿ ಗೆಳೆಯರು ಸಹಾಯಕ್ಕೆ ಬಂದರು.
ಅನಂತರದಲ್ಲಿ ನಮ್ಮ ಕೆಲಸ ಸುಲಭವಾಯಿತು. ಕನ್ನಡಕಕ್ಕೆ ಫಿಕ್ಸ್ ಆಗಿದ್ದ ಒಂದು ಬಟನ್ ಪ್ರಸ್ ಮಾಡಿದರೆ ಸಾಕು; ಆ ಬೋಗಿಯಲ್ಲಿ ನಡೆಯುವ ದೃಶ್ಯವೆಲ್ಲ ರೆಕಾರ್ಡ್ ಆಗಿ ಮರುಕ್ಷಣದಲ್ಲಿಯೇ ರೈಲ್ವೇ ಪೊಲೀಸರಿಗೆ ತಲುಪಿಬಿಡುತ್ತಿತ್ತು. ಮುಂದಿನ ನಿಲ್ದಾಣದಲ್ಲಿಯೇ ರೈಲಿಗೆ ಹತ್ತುತ್ತಿದ್ದ ಪೊಲೀಸರು ಪುಂಡರನ್ನು ಜೈಲಿಗೆ ಕರೆದೊಯ್ಯುತ್ತಿದ್ದರು. ಪೀಡನೆಗೆ ಒಳಗಾದ ಹೆಣ್ಣುಮಕ್ಕಳಾಗಲಿ, ಆ ವೀಡಿಯೋ ಮಾಡಿದ ನಾವಾಗಲಿ ದೂರು ಕೊಡುತ್ತಿರಲಿಲ್ಲ. ಹಾಗಾಗಿ ಪುಂಡರಿಗೆ ಜೈಲಿನಲ್ಲಿ ರಾತ್ರಿ ಕಳೆಯುವಂಥ ಪ್ರಸಂಗಗಳು ಎದುರಾಗುತ್ತಿರಲಿಲ್ಲ. ಪುಂಡರನ್ನು ಠಾಣೆಗೆ ಕರೆದೊಯ್ದು, ಅವರ ಕುಕೃತ್ಯದ ವೀಡಿಯೋ ವನ್ನು ಪ್ಲೇ ಮಾಡಿ ತೋರಿಸಿ, ಒಂದೆರಡು ಒದೆ ಕೊಟ್ಟು, ಮತ್ತೆಂದೂ ಇಂಥ ತಪ್ಪು ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಬರೆಸಿಕೊಂಡು ಕಳುಹಿಸಿಬಿಡುತ್ತಿದ್ದರು. ಪೊಲೀಸರಿಂದ ಹೀಗೆ ಎಚ್ಚರಿಕೆ ಪಡೆದ ಹುಡುಗರಲ್ಲಿ ಹೆಚ್ಚಿನವರು ಬದಲಾದರು. ನಮ್ಮ ತಂಡ ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಅಕಸ್ಮಾತ್, ಅವರು ಮತ್ತೆ ಪುಂಡಾಟ ಶುರು ಮಾಡಿದರೆ ಪುನಃ ವೀಡಿಯೋ ಮಾಡಿ ಪೊಲೀಸರಿಗೆ ಕಳುಹಿಸುತ್ತಿದ್ದೆವು!
ಈ ಕೆಲಸದಿಂದ ನಿಮಗೆ ಸಿಕ್ಕಿದ್ದೇನು? ಸಮಾಜ ನಿಮ್ಮ ಕೆಲಸವನ್ನು ಗುರುತಿಸಿ ಗೌರವಿಸಿತಾ? ತಮ್ಮನ್ನು ಕಾಪಾಡಿದ್ದಕ್ಕೆ ಹೆಣ್ಣುಮಕ್ಕಳು ಥ್ಯಾಂಕ್ಸ್ ಹೇಳಿದ್ರಾ?-ಇದು ಹಲವರ ಪ್ರಶ್ನೆ. ನಮ್ಮ ಕಾರ್ಯಾಚರಣೆ ನಡೆಯುತ್ತಿದ್ದುದು ಹಿಡನ್ ಕೆಮರಾದ ಸಹಾಯದಿಂದ. ಹಾಗಾಗಿ ನಾವು ವೀಡಿಯೋ ಮಾಡಿದ್ದು, ಅದನ್ನು ಪೊಲೀಸರಿಗೆ ಕಳಿಸಿದ್ದು ಮಹಿಳೆಯರಿಗೆ ಗೊತ್ತಾಗುತ್ತಿರಲಿಲ್ಲ. ದಿಢೀರ್ ನುಗ್ಗಿಬಂದ ಪೊಲೀಸರು ಪುಂಡರನ್ನು ಎಳೆದೊಯ್ದಾಗ, ಸದ್ಯ ಪೀಡೆ ತೊಲಗಿತು ಎಂದು ಅವರು ಸಮಾಧಾನ ಪಡುತ್ತಿದ್ದರು. ಮುಖ್ಯವಾಗಿ, ನಾನು ಈ ಕೆಲಸ ಮಾಡುತ್ತಿದ್ದುದು ಆತ್ಮಸಂತೋಷಕ್ಕಾಗಿ. ಹಿಂಸೆಯಿಂದ ಯಾವ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ ಎಂದು ಈಗ ಅರ್ಥವಾಗಿದೆ. WAARಸಂಘಟನೆಯ ಜತೆಗೇ YOUTHS FOR PEOPLE ಎಂಬ ನನ್ನದೇ ತಂಡವಿದೆ. ಈ ತಂಡಗಳ ಮೂಲಕ ಜನಜಾಗೃತಿಯ ಕೆಲಸ ಮಾಡ್ತೇನೆ.
“ಹೆಣ್ಣು ಮಕ್ಕಳನ್ನು ಜನ ಯಾಕಿಷ್ಟು ಕೀಳಾಗಿ ನೋಡ್ತಾರೆ?’ ಇದು ಈಗಲೂ ಎಲ್ಲ ಕಡೆಯಿಂದಲೂ ಕೇಳಿಬರುತ್ತಿರುವ ಪ್ರಶ್ನೆ. ನನ್ನ ಪ್ರಕಾರ ಈ ಸಮಸ್ಯೆಯ ಮೂಲವಿರುವುದೇ ಮನೆಗಳಲ್ಲಿ. ಮೊದಲು, ಮನೆಯ ವಾತಾವರಣ ಬದಲಾಗಬೇಕು. ಹೆಣ್ಣು -ಗಂಡು ಸಮಾನ ಎಂಬ ಭಾವನೆ ಮಕ್ಕಳಲ್ಲಿ ಬೆಳೆಯಬೇಕು. ನಮ್ಮಲ್ಲಿ ಹೆಚ್ಚಿನ ಗಂಡಸರು ಊಟವಾದ ಮೇಲೆ ಕೈ ತೊಳೆದುಕೊಂಡು ಎದ್ದು ಹೋಗಿಬಿಡುತ್ತಾರೆ. ಅಲ್ಲವಾ? ಹಾಗಾಗಬಾರದು. ನಮ್ಮ ಊಟ ಮುಗಿದ ಅನಂತರ, ಪತ್ನಿ/ಅಮ್ಮ/ಪುತ್ರಿ/ಸೊಸೆಗೆ ಊಟ ಬಡಿಸುವಂಥ ಮನಸ್ಸು ಪ್ರತೀಮನೆಯ ಗಂಡಸರಿಗೂ ಬರಬೇಕು. ಹೀಗೆ ಆದಾಗ ಹೆಣ್ಣು ಮಕ್ಕಳನ್ನು ಗೌರವದಿಂದ ನೋಡುವ ಭಾವನೆ ಪ್ರತಿಯೊಬ್ಬರಿಗೂ ಬರುತ್ತದೆ’ ಅನ್ನುತ್ತಾರೆ. ದೀಪೇಶ್ ತಾಂಕ್. ಹೂ ಮನಸ್ಸಿನ ಈ ಹೃದಯವಂತನಿಗೆ ಹಿಂದಿ, ಇಂಗ್ಲಿಷ್ ಅರ್ಥವಾಗುತ್ತದೆ. ಅವರಿಗೆ ಅಭಿನಂದನೆ ಹೇಳಲು- 98331 52162.
– ಎ.ಆರ್.ಮಣಿಕಾಂತ್