ಹೊಸದಿಲ್ಲಿ : ಪ್ರಯಾಗ್‌ರಾಜ್ ನಲ್ಲಿ ನಿನ್ನೆ ಮಂಗಳವಾರ ತನ್ನ ಮೊತ್ತ ಮೊದಲ ಸಚಿವ ಸಂಪುಟ ಸಭೆ ನಡೆಸಿ 36,000 ಕೋಟಿ ರೂ ವೆಚ್ಚದ ವಿಶ್ವದ ಅತೀ ಉದ್ದದ ಗಂಗಾ ಎಕ್ಸ್‌ಪ್ರೆಸ್ ವೇ ನಿರ್ಮಾಣ ಯೋಜನೆಯನ್ನು ಪ್ರಕಟಿಸಿದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಸಂಗಡಿಗರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಕುಂಭ ಪುಣ್ಯ ಸ್ನಾನ ಮಾಡಿರುವ ಫೋಟೋಗೆ ಕಾಂಗ್ರೆಸ್ ನಾಯಕ ಶಶಿ ತರೂರ್ “ಇಸ್ ಸಂಗಮ್ ಮೇ ಸಬ್ ನಂಗೇ ಹೇಂ (ಈ ಸಂಗಮದಲ್ಲಿ ಎಲ್ಲರೂ ನಗ್ನರು) ಎಂದು ಕ್ಯಾಪ್ಶನ್ ಬರೆದು ನೀಡಿರುವ ಪ್ರತಿಕ್ರಿಯೆಗೆ ಬಿಜೆಪಿ ಉಗ್ರ ತಿರುಗೇಟು ನೀಡಿದೆ.
‘ಗಂಗೆಯನ್ನು ಶುದ್ಧೀಕರಿಸಬೇಕಿರುವಲ್ಲಿ ಎಲ್ಲರೂ ಅಲ್ಲೇ ತಮ್ಮ ಪಾಪವನ್ನು ತೊಳೆಯುತ್ತಿದ್ದಾರೆ’ ಎಂಬ ಬರಹವನ್ನು ತರೂರ್ ಅವರು ಸಿಎಂ ಯೋಗಿ ಅವರ ಪವಿತ್ರ ಸ್ನಾನದ ಫೋಟೋದಡಿ ಬರೆದು ವಿವಾದ ಎಬ್ಬಿಸಿದ್ದರು.
ಇದಕ್ಕೆ ಉತ್ತರವಾಗಿ ಯುಪಿ ಸಚಿವ ಸಿದ್ಧಾರ್ಥ ನಾಥ್ ಸಿಂಗ್, ‘ನಿಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ನೀವು ಗಂಗೆಯಲ್ಲಿ ಮುಳೇಗೇಳಿ’ ಎಂಬ ಸಲಹೆ ನೀಡುವ ಮೂಲಕ ತರೂರ್‌ಗೆ ತಿರುಗೇಟು ನೀಡಿದರು.
ಮುಂದುವರಿದು ಸಿಂಗ್, ‘ಕುಂಭ ಮೇಳದ ಮಹತ್ವ ತರೂರ್‌ಗೆ ಗೊತ್ತಾಗುವುದಾದರೂ ಹೇಗೆ ? ಆತ ಇರುವ ವಾತಾವರಣ, ಬೆಳೆದು ಬಂದಿರುವ ಸಂಸ್ಕೃತಿಯಿಂದಾಗಿ ಆತ ಅದನ್ನು ತಿಳಿಯಲಾರರು. ನೀವು ತುಂಬಾ ಪಾಪ ಕರ್ಮಗಳನ್ನು ಮಾಡಿದವರಾಗಿದ್ದೀರಿ. ಆದುದರಿಂದ ಅವುಗಳಿಗೆ ಪ್ರಾಯಶ್ಚಿತ್ತವಾಗಿ ನೀವು ಕುಂಭ ಮೇಳದ ಈ ಸಂದರ್ಭದಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ’ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪೂರ್ವ ಉತ್ತರ ಪ್ರದೇಶಕ್ಕೆ ಹೊಸದಾಗಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿ ಜತೆಗೆ ಕುಂಭ ಮೇಳದ ಈ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ.