Advertisement

ಆಳುವವರ ಮಧ್ಯೆ ಅತ್ತು, ಅಳಿಸುವವರು!

10:15 AM Jan 06, 2018 | |

ಕನ್ನಡದಲ್ಲಿ ಹೆತ್ತವರನ್ನು ಕಡೆಗಣಿಸುವ ಕುರಿತ ಚಿತ್ರಗಳಿಗೇನೂ ಬರವಿಲ್ಲ. ಹೊಡಿ, ಬಡಿ, ಕಡಿ ಚಿತ್ರಗಳ ನಡುವೆ ಒಂದಷ್ಟು ಕಣ್ಣು ಒದ್ದೆ ಮಾಡುವಂತಹ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. “ನಮ್ಮವರು’ ಕೂಡ ಆ ಸಾಲಿಗೆ ಸೇರುವ ಚಿತ್ರ ಎಂಬುದು ಸ್ಪಷ್ಟ. ಹೊಸ ಕಥೆ ಅಲ್ಲದಿದ್ದರೂ, ಸರಳವಾಗಿದೆ. ಚಿತ್ರಕಥೆಯಲ್ಲೊಂದಷ್ಟು ಚುರುಕುತನ ಮಾಯವಾಗಿದೆ. ಅಲ್ಲಲ್ಲಿ ನಗೆಯಾಟ, ಮಿಕ್ಕಿದ್ದು ಗೋಳಾಟ!

Advertisement

ಒಟ್ಟಾರೆ ಸಿನಿಮಾ ನೋಡಿ ಹೊರಬಂದವರಿಗೆ ಹೆತ್ತವರ ಮೇಲಿನ ಪ್ರೀತಿ ಎಂದಿಗಿಂತ ಜಾಸ್ತಿಯಾಗುತ್ತೆ, ಮಕ್ಕಳ ಮೇಲಿನ ಕಾಳಜಿ ಇನ್ನಷ್ಟು ಗಟ್ಟಿಯಾಗುತ್ತೆ, ವ್ಯವಸ್ಥೆಯೊಳಗಿನ ಪರಿಪಾಠ ಹಾಗೇ ಇರುತ್ತೆ ಎನ್ನಬಹುದು. ಅದು ಬಿಟ್ಟರೆ, ಹೆಚ್ಚೇನೂ ಹೇಳುವಂತಿಲ್ಲ. ಸಿನಿಮಾ ಅಂದಾಕ್ಷಣ, ಮನರಂಜನೆ ಮತ್ತು ಸಂದೇಶ ನಿರೀಕ್ಷಿಸುವುದು ಸಹಜ. ಇಲ್ಲಿ ಸಂದೇಶಕ್ಕಂತೂ ಮೋಸವಿಲ್ಲ. ಆದರೆ, ಮನರಂಜನೆ ಬಗ್ಗೆ ಕೇಳುವಂತಿಲ್ಲ.

ನಗಿಸಬೇಕು ಎಂಬ ಧಾವಂತದಲ್ಲಿ ಅರಗಿಸಿಕೊಳ್ಳದಂತಹ ಹಾಸ್ಯ ತುರುಕುವ ಪ್ರಯತ್ನ ಮಾಡಲಾಗಿದೆ. ಎಲ್ಲೋ ಒಂದು ಕಡೆ ಕಥೆ ಗಂಭೀರವಾಗಿ ಸಾಗುತ್ತಿರುವಾಗಲೇ, ವಿನಾಕಾರಣ “ಅಪ’ಹಾಸ್ಯ ಹೆಚ್ಚಾಗಿ ವೇಗಕ್ಕೆ ಅಡಚಣೆಯನ್ನುಂಟು ಮಾಡುತ್ತೆ. ಅದನ್ನು ಹೊರತುಪಡಿಸಿದರೆ  ಭಾವನಾತ್ಮಕ ಸಂಬಂಧಗಳನ್ನು ಅಚ್ಚುಕಟ್ಟಾಗಿ ಪೋಣಿಸುವ ಮೂಲಕ ಎದೆ ಭಾರವಾಗಿಸುವಂತಹ ಅಂಶಗಳನ್ನು ಕಣ್ಣ ಮುಂದೆ ತಂದಿರುವುದೇ “ನಮ್ಮವರ’ ಹೆಚ್ಚುಗಾರಿಕೆ.

ಈಗಿನ ನಗರೀಕರಣ ವ್ಯವಸ್ಥೆ, ವಾಸ್ತವ ಜೀವನ ಶೈಲಿ, ನಾಗಾಲೋಟದ ಬದುಕಲ್ಲಿ ಮಿಂದೆದ್ದು ಮಾನವೀಯತೆಯನ್ನೇ ಮರೆತಿರುವ ಅಂಶ ಇಡೀ ಚಿತ್ರದ ಕೇಂದ್ರಬಿಂದು. ಮೊದಲರ್ಧ ಮಂದಗತಿಯಲ್ಲೇ ಸಾಗುವ ಚಿತ್ರ, ದ್ವಿತಿಯಾರ್ಧದಲ್ಲಿ ಗಂಭೀರತೆಗೆ ದೂಡುತ್ತದೆ. ಅಷ್ಟೇ ಅಲ್ಲ, ಭಾವುಕರನ್ನಾಗಿಸುತ್ತ ಹೋಗುತ್ತೆ. ಈಗಿನ ನಗರ ಜೀವನ ಶೈಲಿಗೆ ಒಗ್ಗಿಕೊಂಡ ಮನಸ್ಸುಗಳು ಹೇಗೆಲ್ಲಾ ವಿಕೃತಗೊಳ್ಳುತ್ತವೆ,

ಹೆತ್ತ ಕರುಳನ್ನು ಎಷ್ಟೆಲ್ಲಾ ನೋಯಿಸುತ್ತವೆ, ಪ್ರೀತಿ-ಮಮತೆಯಿಂದ ದೂರವಿದ್ದು ಮಾನವೀಯ ಬದುಕಿನ ಅರ್ಥವನ್ನು ಹೆಂಗೆಲ್ಲಾ ಕಳೆದುಕೊಳ್ಳುತ್ತವೆ ಎಂಬುದನ್ನು ಅರ್ಥಪೂರ್ಣವಾಗಿ ತೋರಿಸಲಾಗಿದೆ. ಶೋಕಿ ಬದುಕಿಗೆ ಒಗ್ಗಿಕೊಂಡ ಮನಸ್ಸು, ಆಸ್ತಿ-ಅಂತಸ್ತಿನ ದೌಲತ್ತು, ಅಸೂಯೆ, ನಿರ್ಲಕ್ಷ್ಯ, ಶ್ರೀಮಂತಿಕೆಯ ಅಮಲು ಹೇಗೆ ತನ್ನ ವ್ಯಕ್ತಿತ್ವವನ್ನು ಹರಾಜಿಗಿಡುತ್ತದೆ ಎಂಬ ಸೂಕ್ಷ್ಮಅಂಶಗಳು ಚಿತ್ರದ “ಸಾರ’ವನ್ನು ಸಾರುತ್ತವೆ.

Advertisement

ಇಲ್ಲಿ ವಾಟ್ಸಾಪ್‌ನಲ್ಲಿ ಬಂದ ಚಿತ್ರಣವೊಂದು ಚಿತ್ರರೂಪ ಪಡೆದಿರುವುದು ವಿಶೇಷ! ನಿರೂಪಣೆಯಲ್ಲಿ ಇನ್ನಷ್ಟು ಹಿಡಿತ ಇರಬೇಕಿತ್ತು. ಕಮರ್ಷಿಯಲ್‌ ದೃಷ್ಟಿಕೋನ ಬಿಟ್ಟು ನೋಡುವುದಾದರೆ, “ನಮ್ಮವರು’ ಎದೆ “ಭಾರ’ ಎನಿಸುವ ಚಿತ್ರ. ಶ್ರೀಮಂತ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾದ ವಿಜಯ್‌ಗೆ, ಹೆಂಡತಿಯೇ ಹೋಮ್‌ ಮಿನಿಸ್ಟರ್‌. ಏನೂ ಮಾಡದ ಸ್ಥಿತಿಯಲ್ಲಿರುವ ವಿಜಯ್‌ಗೆ “ತುತ್ತಾ-ಮುತ್ತಾ …’ ಎತ್ತಾ? ಎನ್ನುವ ಸ್ಥಿತಿ.

ವಯಸ್ಸಾದ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಲಾರದ ಮಗ, ಹೆಂಡತಿಗೆ ಭಯದಿಂದ ವೃದ್ಧಾಶ್ರಮಕ್ಕೆ ಸೇರಿಸುತ್ತಾನೆ. ತಾಯಿ ವಾತ್ಸಲ್ಯವೂ ಕಾಣದೆ, ಹೆಂಡತಿಯ ಪ್ರೀತಿಯೂ ಸಿಗದೆ ಒದ್ದಾಡುವ ವಿಜಯ್‌ ಇಕ್ಕಟ್ಟಿಗೆ ಸಿಲುಕುತ್ತಾನೆ. ಕೊನೆಗೆ ಅಜ್ಜಿಯನ್ನು ಹುಡುಕಿ ಹೋಗುವ ಮೊಮ್ಮಗನಿಂದ ಎಚ್ಚೆತ್ತುಕೊಳ್ಳುವ ದಂಪತಿ ಬದುಕನ್ನು ಬದಲಿಸಿಕೊಳ್ಳುತ್ತಾರಾ? ಎಂಬುದು ಕಥೆ. ಗಣೇಶ್‌ರಾವ್‌ ಸಿಕ್ಕ ಪಾತ್ರಕ್ಕೆ ಮೋಸ ಮಾಡದೆ, ಅಸಹಾಯಕ ಮಗನಾಗಿ, ಗಂಡನಾಗಿ ಇಷ್ಟವಾಗುತ್ತಾರೆ.  

ತಾಯಿಯಾಗಿ ಜಯಲಕ್ಷ್ಮೀ ಗಮನಸೆಳೆಯುತ್ತಾರೆ. ಅಷ್ಟೇ ಅಲ್ಲ, ಕೆಲವು ಕಡೆ ಭಾವುಕತೆ ಹೆಚ್ಚಿಸುವಲ್ಲಿಯೂ ಯಶಸ್ವಿ. ಸಿಡುಕಿನ ಸೊಸೆಯಾಗಿ ಜ್ಯೋತಿ ಸಿಕ್ಕ ಪಾತ್ರವನ್ನು ಜೀವಿಸಿದ್ದಾರೆ. ರಮೇಶ್‌ ಭಟ್‌, ಶ್ರೀನಿವಾಸ ಮೂರ್ತಿ ಅವರು ಇರುವಷ್ಟು ಕಾಲ ಸೈ ಎನಿಸಿಕೊಳ್ಳುತ್ತಾರೆ. ಉಳಿದಂತೆ ಬಂದು ಹೋಗುವ ಪಾತ್ರಗಳಾವೂ ಗಮನಸೆಳೆಯುವುದಿಲ್ಲ. ರಾಜ್‌ಭಾಸ್ಕರ್‌ ಹಿನ್ನೆಲೆ ಸಂಗೀತ ಹಾಸ್ಯ ದೃಶ್ಯ ಹೊರತುಪಡಿಸಿದರೆ, ಉಳಿದಂತೆ ಪೂರಕ. ಮುತ್ತುರಾಜ್‌ ಕ್ಯಾಮೆರಾ ಕೆಲಸದಲ್ಲಿ “ನಮ್ಮವರು’ ಅಲ್ಲಲ್ಲಿ ಡಲ್ಲು.

ಚಿತ್ರ: ನಮ್ಮವರು
ನಿರ್ಮಾಣ: ಉಷಾ ಪುರುಷೋತ್ತಮ್‌, ಆಶಾ ಮುನಿಯಪ್ಪ
ನಿರ್ದೇಶನ: ಪುರುಷೋತ್ತಮ್‌ ಓಂಕಾರ್‌
ತಾರಾಗಣ: ಗಣೇಶ್‌ ರಾವ್‌, ಜ್ಯೋತಿ, ಶ್ರೀನಿವಾಸಮೂರ್ತಿ, ರಮೇಶ್‌ಭಟ್‌, ಜಯಲಕ್ಷ್ಮೀ, ಚಿನ್ಮಯಿ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next