Advertisement

ಬಿಎಸ್‌ವೈ,ಶೆಟ್ಟರ್‌,ಅಶೋಕ್‌ ವಿರುದ್ಧದ ಅರ್ಜಿ ಇತ್ಯರ್ಥ

12:55 AM Jan 10, 2019 | Team Udayavani |

ಬೆಂಗಳೂರು: ನಗರದ ಆರ್‌.ಎಂ.ವಿ ಬಡಾವಣೆ 2ನೇ ಹಂತದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡಿದ್ದ 14 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ವಿರುದ್ಧ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಇತ್ಯರ್ಥಪಡಿಸಿದೆ.

Advertisement

ಪ್ರಕರಣದ ಕುರಿತು ಮರು ತನಿಖೆ ನಡೆಸಲು ಭ್ರಷ್ಟಚಾರ ನಿಗ್ರಹ ದಳಕ್ಕೆ (ಎಸಿಬಿ)ನಿರ್ದೇಶಿಸುವಂತೆ ಕೋರಿ ನಿವೃತ್ತ ವಿಂಗ್‌
ಕಮಾಂಡರ್‌ ಜಿ.ಬಿ.ಅತ್ರಿ ಸಲ್ಲಿಸಿರುವ ಪಿಐಎಲ್‌, ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ.ಅರವಿಂದ್‌ ಕುಮಾರ್‌ ಅವರಿದ್ದ ಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂತು.

ವಿಚಾರಣೆ ವೇಳೆ ಬಿಡಿಎ ಪರ ವಕೀಲರು ಆಕ್ಷೇಪಣೆ ಸಲ್ಲಿಸಿ, ವಿವಾದಿತ ಜಮೀನನ್ನು ಆರ್‌.ಅಶೋಕ್‌ 2011ರಲ್ಲೇ ಬಿಡಿಎಗೆ ದಾನಪತ್ರ ಮಾಡಿಕೊಟ್ಟಿದ್ದು, ಸದ್ಯ ಜಮೀನು ಬಿಡಿಎ ವಶದಲ್ಲೇ ಇದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. 

ಅಲ್ಲದೆ, ಈ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆಸಿರುವ ಲೋಕಾಯುಕ್ತ ಬಿ-ರಿಪೋರ್ಟ್‌ ಸಲ್ಲಿಸಿದೆ. ವಿಶೇಷ ಸನ್ನಿವೇಶಗಳನ್ನು ಹೊರತುಪಡಿಸಿ ಈ ರೀತಿ ಒಂದು ತನಿಖಾ ಸಂಸ್ಥೆ ಮುಕ್ತಾಯಗೊಳಿಸಿದ ಪ್ರಕರಣವನ್ನು ಮತ್ತೂಂದು ತನಿಖಾ ಸಂಸ್ಥೆ ಅದನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಎಸಿಬಿ ಹೇಳಿತು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ಆಕ್ಷೇಪಿಸಿದ್ದ ಜಮೀನು ಈಗಾಗಲೇ ಬಿಡಿಎ ವಶದಲ್ಲಿದ್ದು, ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಯನ್ನು ಕಳೆದುಕೊಂಡಿದೆ.

Advertisement

ಒಂದು ವೇಳೆ ಅಗತ್ಯವೆನಿಸಿದರೆ ಅರ್ಜಿದಾರರು ಕಾನೂನಿನಲ್ಲಿ ಲಭ್ಯವಿರುವ ಪರ್ಯಾಯ ಮಾರ್ಗದ ಮೂಲಕ ಸಮಸ್ಯೆಗೆ
ಪರಿಹಾರ ಕಂಡುಕೊಳ್ಳಬಹುದು ಎಂದು ಅವಕಾಶ ನೀಡಿ ಅರ್ಜಿ ಇತ್ಯರ್ಥಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next