ಧಾರವಾಡ: ಮೂಢನಂಬಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಚಾರವಾದಿಗಳ ಒಕ್ಕೂಟದ ಸದಸ್ಯರು ನಗರದ ಕಡಪಾ ಮೈದಾನದಲ್ಲಿ ಖಗ್ರಾಸ ಚಂದ್ರಗ್ರಹಣದ ಸಂದರ್ಭದಲ್ಲಿಯೇ ಚಿತ್ರಾನ್ನ ತಯಾರಿಸಿದ್ದು, ಅಲ್ಲದೇ ಅಲ್ಲಿಯೇ ಕುಳಿತು ಸಹ ಭೋಜನ ಮಾಡಿದರು.
ತುಂಬು ಗರ್ಭಿಣಿ ಮಾಳಮಡ್ಡಿಯ ಮಹಿಷಿ ರಸ್ತೆಯ ನಿವಾಸಿ ಜಾನಕಿ ಗುದ್ದಿ ಅವರು ಸ್ವಯಂಪ್ರೇರಣೆಯಿಂದ ಚಿತ್ರಾನ್ನ ತಿನ್ನುವ ಮೂಲಕ ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ಊಟ ಮಾಡಿದರೆ ಏನೂ ಆಗುವುದಿಲ್ಲ ಎಂಬ ಸಂದೇಶ ಸಾರಿದರು. ಒಕ್ಕೂಟದ ಸಂಚಾಲಕರೂ ಆದ ಸ್ತ್ರೀರೋಗ ತಜ್ಞ ಡಾ| ಸಂಜೀವ ಕುಲಕರ್ಣಿ, ಗ್ರಹಣದ ಕುರಿತು ಅತಿ ಎನ್ನಿಸುವಷ್ಟು ಮೂಢನಂಬಿಕೆಗಳು ಚಾಲ್ತಿಯಲ್ಲಿವೆ.
ವಿದೇಶಗಳಲ್ಲಿ ಎಲ್ಲರೂ ಗ್ರಹಣವನ್ನು ಕಂಡು ಆನಂದಿಸುತ್ತಾರೆಯೇ ಹೊರತು ಅದರಿಂದ ಯಾವುದೇ ತೊಂದರೆ ಆಗುತ್ತದೆ ಎಂಬುದಾಗಿ ನಂಬಿಕೆಯಿಲ್ಲ ಎಂದರು. ಗ್ರಹಣದ ಸಂದರ್ಭದಲ್ಲಿ ಗರ್ಭಿಣಿಯರು ಹೊರಗೆ ಬಂದರೆ, ಊಟ ಮಾಡಿದರೆ, ತರಕಾರಿ ಕೊಯ್ದರೆ ಮಕ್ಕಳು ಅಂಗವಿಕಲರಾಗಿ ಹುಟ್ಟುತ್ತಾರೆ ಎಂಬ ಬಗ್ಗೆ ಪ್ರಸೂತಿಶಾಸ್ತ್ರದ ಯಾವ ಅಧ್ಯಾಯದಲ್ಲು ಇಲ್ಲ.
ಗ್ರಹಣದ ಸಂದರ್ಭದಲ್ಲಿ ವಿಕಿರಣಗಳು ಹೊರಸೂಸುತ್ತವೆ ಎಂಬುದಾಗಿ ನೀರನ್ನು ಮುಚ್ಚುತ್ತಾರೆ. ಹಾಗಿದ್ದರೆ ನದಿ, ಕೆರೆ, ಬಾವಿಯ ನೀರನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಕೆಲ ಪುರೋಹಿತಶಾಹಿ ಶಕ್ತಿಗಳು ಗ್ರಹಣದ ಬಗ್ಗೆ ಕಪೋಲಕಲ್ಪಿತ ಮಾಹಿತಿಗಳನ್ನು ಹರಡಿದ್ದರಿಂದ ಇಂತಹ ಗೊಂದಲ ಉಂಟಾಗಿದೆ.
ಇವುಗಳನ್ನು ವೈಜ್ಞಾನಿಕ, ವೈಚಾರಿಕವಾಗಿ ಅಲ್ಲಗಳೆಯುವ ಸಲುವಾಗಿ ಗ್ರಹಣದ ಸಂದರ್ಭದಲ್ಲಿ ಉಪಾಹಾರ ತಯಾರಿಸಿ ಸೇವಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ನಂತರ ಕೆಲ ಹೊತ್ತು ಸಂವಾದ ನಡೆಯಿತು. ಕವಿಸಂನ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕಾರ್ಯಕಾರಿ ಸಮಿತಿ ಸದಸ್ಯ ಡಾ| ಡಿ.ಎಂ. ಹಿರೇಮಠ, ಗುರು ತಿಗಡಿ, ಸಿಪಿಐ (ಎಂ) ಮುಖಂಡ ಕೆ.ಎಚ್. ಪಾಟೀಲ, ಕಿತ್ತೂರ, ಶಿಕ್ಷಕ ಎಲ್.ಐ. ಲಕ್ಕಮ್ಮನವರ, ದೀಪಕ ಪಾಟೀಲ ಇದ್ದರು.