ಬೆಂಗಳೂರು: ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಮಾಡಲು ಅಡ್ಡಿಯಾಗಿದ್ದು ಕೇಂದ್ರ ಸರ್ಕಾರ. ಬಿಜೆಪಿ ಅಧಿಕಾರಕ್ಕೆ ಬರಲು ಬಹುಸಂಖ್ಯಾತ ವೀರಶೈವ ಲಿಂಗಾಯಿತರ ಬೆಂಬಲ ಕಾರಣವಾಗಿತ್ತು. ಈಗ ವೀರಶೈವ ಲಿಂಗಾಯಿತರಿಗೆ ಅನ್ಯಾಯವಾದರೆ ಅದರ ಪರಿಣಾಮ ಏನಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ದಿಂಗಾಲೇಶ್ವರ ಶ್ರೀ ಗಳು ಹೇಳಿದರು.
ಈ ಹೋರಾಟದಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಪ್ರಮುಖ ಮಠಗಳ ಸ್ವಾಮಿಗಳು ಬಾಯಿ ಮುಚ್ಚಿಕೊಂಡು ಕೂರಬಾರದು. ನಿಮ್ಮ ನಿಲುವು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದರು.
ಇದನ್ನೂ ಓದಿ:ಕೇಂದ್ರ ಬಜೆಟ್ ನಲ್ಲಿ ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ: ವಿ.ಸೋಮಣ್ಣ
ನಾವು ನಮ್ಮ ಸಮಾಜವನ್ನೇ ಅಲಕ್ಷ್ಯ ಮಾಡಿದ್ದಕ್ಕೆ ಈಗ ಪ್ರಾಯಶ್ಚಿತ್ತ ಅನುಭವಿಸಬೇಕಾಗಿದೆ. ಈಗ ಸಮಸ್ತ ವೀರಶೈವ ಲಿಂಗಾಯಿತರನ್ನು ಒಬಿಸಿಗೆ ಸೇರ್ಪಡೆ ಮಾಡುವವರೆಗೆ ನಾವು ಹೋರಾಟ ಮಾಡಬೇಕು. ಯಾವುದೇ ಪರಿಸ್ಥಿತಿಯಲ್ಲಿ ಸಮುದಾಯ ಒಡೆಯದಂತೆ ನೋಡಿಕೊಂಡಿದ್ದೇವೆ. ಈಗ ಸಮುದಾಯಕ್ಕೆ ಏನುಬೇಕೋ ಅದನ್ನು ಕೊಡಬೇಕಾಗಿದೆ ಎಂದರು.
ಅಂದು ಯಡಿಯೂರಪ್ಪ ತುರ್ತು ಸಚಿವ ಸಂಪುಟ ಸಭೆ ಕರೆದು ವೀರಶೈವ ಲಿಂಗಾಯಿತರನ್ನು ಒಬಿಸಿ ಗೆ ಸೇರ್ಪಡೆ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಹಿಂದೆ ಸರಿದರು. ಅಂದು ಅವರು ನಿರ್ಧಾರ ಕೈಗೊಂಡಿದ್ದಿದ್ದರೆ ಪಂಚಮಸಾಲಿ ಜಗದ್ಗುರುಗಳು ಕಾಲಿಗೆ ಬೊಬ್ಬೆ ಬರುವ ಹಾಗೆ ಪಾದಯಾತ್ರೆ ಮಾಡಬೇಕಾಗಿರಲಿಲ್ಲ ಎಂದು ಶ್ರೀಗಳು ಹೇಳಿದರು.
ಇದನ್ನೂ ಓದಿ: ಕಾಶ್ಮೀರದ ಬಗೆಗಿನ ನಿಮ್ಮ ಭರವಸೆಗಳು ಹಾಗೆಯೇ ಇವೆ : ಕೇಂದ್ರದ ವಿರುದ್ಧ ಕಿಡಿ ಕಾರಿದ ಚೌಧರಿ
ಯಡಿಯೂರಪ್ಪನವರು ವೀರಶೈವ ಲಿಂಗಾಯಿತರು ಎಂಬ ಕಾರಣಕ್ಕೆ ನಮ್ಮನ್ನು ಒಬಿಸಿ ಗೆ ಸೇರ್ಪಡೆ ಮಾಡುವ ಶಿಫಾರಸ್ಸು ಮಾಡಿ ಎಂದು ನಾವು ಕೇಳಲ್ಲ. ಆದರೆ ವೀರಶೈವ ಲಿಂಗಾಯಿತರ ಪರಿಸ್ಥಿತಿಯನ್ನು ಅವಲೋಕನ ಮಾಡಿ ಬಳಿಕ ಶಿಫಾರಸ್ಸು ಮಾಡಿ. ರಾಜ್ಯ ಸರ್ಕಾರದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸದೆ ಪರಿಗಣಿಸಿ ಜಾರಿಗೊಳಿಸಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.