ಬೆಂಗಳೂರು: ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರಿಬ್ಬರು ಮಾಡಿಕೊಂಡಿರುವ ಗಲಾಟೆ ಕಾಂಗ್ರೆಸ್ ನಾಯಕರನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಿದಂತೆ ಕಾಣುತ್ತಿದೆ. ಹಲ್ಲೆಗೊಳಗಾಗಿರುವ ಆನಂದ್ ಸಿಂಗ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ನಾಪತ್ತೆಯಾಗಿ ರುವ ಕಂಪ್ಲಿ ಶಾಸಕ ಗಣೇಶ್ ಅವರ ಹುಡುಕಾಟಕ್ಕೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಕಂಪ್ಲಿ ಕ್ಷೇತ್ರದ ಕಾರ್ಯಕರ್ತರು, ಗುರುವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ, ತಮ್ಮ ಶಾಸಕರನ್ನು ಅಮಾನತು ಮಾಡಿರುವ ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಲು ಆಗಮಿಸಿದ್ದರು. ಈ ವೇಳೆ ಚಿತ್ರೀಕರಣ ಮಾಡಲು ತೆರಳಿದ್ದ ಮಾಧ್ಯಮದವರನ್ನು ನಾನ್‌ಸೆನ್ಸ್, ಮಾನ ಮರ್ಯಾದೆ ಇಲ್ವಾ ನಿಮಗೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಮ್ಮ ಕಚೇರಿಯಿಂದ ಹೊರ ಹೋಗುವಂತೆ ಸೂಚಿಸಿದರು.
ಕಂಪ್ಲಿ ಶಾಸಕ ಗಣೇಶ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರೂ, ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ. ಅವರನ್ನು ಬಂಧಿಸದೇ ಪೊಲೀಸರು ಮೀನ ಮೇಷ ಎಣಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್ ನಾಯಕರೆ ಗಣೇಶ್‌ರನ್ನು ರಕ್ಷಣೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಈ ಪ್ರಕರಣ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರವಾಗುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದ್ದು, ಅದೇ ಕಾರಣಕ್ಕೆ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಮ್ಮ ಆಕ್ರೋಶ ಹೊರ ಹಾಕಿದರು.
ನಂತರ ತಮ್ಮ ಹೇಳಿಕೆಯಿಂದ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅರಿತ ಅವರು, ಮಾಧ್ಯಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದಕ್ಕೆ ವಿಷಾದ ವ್ಯಕ್ತಪಡಿ ಸಿದರು. ಅಲ್ಲದೇ ರೆಸಾರ್ಟ್ ಗಲಾಟೆ ಪ್ರಕರಣದಲ್ಲಿ ಕಂಪ್ಲಿ ಗಣೇಶ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಅವರ ವಿರುದ್ಧ ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.