ಪಣಜಿ: ಗೋವಾದಲ್ಲಿ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಗೋವಾ ಕಾಂಗ್ರೇಸ್ ಸಮೀತಿಯು ಇಲ್ಲಿನ ಕೋವಿಡ್ ಸೋಂಕಿತರಿಗೆ ಅಗತ್ಯ ಸಹಾಯ ಮಾಡುವಂತೆ ಮತ್ತು ಸಾಧ್ಯವಾದಷ್ಟು ಜೀವಗಳನ್ನು ಉಳಿಸಲು ಪ್ರಯತ್ನಿಸಬೇಕು ಎಂದು ಗೋವಾ ಕಾಂಗ್ರೇಸ್ ಪ್ರಭಾರಿ ಹಾಗೂ ಕರ್ನಾಟಕ ಕಾಂಗ್ರೇಸ್ ನಾಯಕ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ಶುಕ್ರವಾರ ಗೋವಾ ಕಾಂಗ್ರೇಸ್ ಸಮೀತಿಯ ಪ್ರಮುಖರೊಂದಿಗೆ ದಿನೇಶ್ ಗುಂಡೂರಾವ್ ವೀಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿ- ಒಬ್ಬ ಕೋವಿಡ್ ಸೋಂಕಿತ ಒಬ್ಬ ವ್ಯಕ್ತಿಯ ಜೀವ ಉಳಿಸಿದರೂ ಅದು ಉತ್ತಮ ಕೆಲಸ. ನಾವು ರಾಜಕೀಯವನ್ನು ಬದಿಗಿಟ್ಟು ಕೆಲಸ ನಿರ್ವಹಿಸಬೇಕಾಗಿದೆ. ಕೋವಿಡ್ ಸೋಂಕಿತರು ಮತ್ತು ತೊಂದರೆಯಲ್ಲಿರುವ ಜನರಿಗೆ ಸಹಾಯ ಹಸ್ತ ನೀಡಬೇಕು ಎಂದು ದಿನೇಶ್ ಗುಂಡೂರಾವ್ ನುಡಿದರು.
ಇದನ್ನೂ ಓದಿ:ಕೋವಿಡ್ ಅಬ್ಬರ: ಗೋವಾದಲ್ಲಿ ವೀಕೆಂಡ್ ಲಾಕ್‍ಡೌನ್ ಬಿಸಿ
ವೀಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಗೋವಾ ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ಗಿರೀಶ್ ಚೋಡಣಕರ್-ಗೋವಾದಲ್ಲಿ ಕೋವಿಡ್ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಾಮರ್ಥ್ಯಕ್ಕಿಂತ ಶೇ.25 ರಷ್ಟು ಹೆಚ್ಚು ಬೆಡ್ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಕೂಡ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರು ನೆಲದ ಮೇಲೆ, ಕುರ್ಚಿಯ ಮೇಲೆ ಮತ್ತು ಸ್ಟ್ರೆಚರ್‍ಗಳ ಮೇಲೆ ಮಲಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೀಡಿಯೊ ಕಾನ್ಫರೆನ್ಸ್ ನಲ್ಲಿ ರಾಜ್ಯ ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್, ಮಹಿಳಾ ಕಾಂಗ್ರೇಸ್ ಮುಖ್ಯಸ್ಥೆ ಬೀನಾ ನಾಯಕ್ ಮತ್ತಿತರರು ಪಾಲ್ಗೊಂಡು ಗೋವಾದಲ್ಲಿ ಕೋವಿಡ್ ಸ್ಥಿತಿಯ ಬಗ್ಗೆ ಮತ್ತು ರಾಜ್ಯ ಕಾಂಗ್ರೇಸ್ ಜನತೆಗೆ ಸಹಾಯಹಸ್ತ ನೀಡಿರುವ ಬಗ್ಗೆ ಗೋವಾ ಪ್ರಭಾರಿ ದಿನೇಶ್ ಗುಂಡೂರಾವ್ ರವರಿಗೆ ಮಾಹಿತಿ ನೀಡಿದರು.