ಬೆಂಗಳೂರು: ರಾಜ್ಯದಲ್ಲಿರುವ ಸಿಆರ್‌ಪಿಎಫ್ ಕೇಂದ್ರವನ್ನು ದಿಢೀರ್ ಉತ್ತರ ಪ್ರದೇಶಕ್ಕೆ ಸ್ಥಳಾಂತರಿಸಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ತರಳು ಸಿಆರ್‌ಪಿಎಫ್ ಕೇಂದ್ರವನ್ನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರ ತವರು ಜಿಲ್ಲೆ ಚಾಂದೌಲಿಗೆ ಸ್ಥಳಾಂತರಿಸಿದ್ದು, ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೇ ಇರುವುದು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದರು.
ಈ ಕೇಂದ್ರದಲ್ಲಿ ಸುಮಾರು 1500 ಕ್ಕೂ ಹೆಚ್ಚು ರಾಜ್ಯ ಸೇರಿದಂತೆ ದಕ್ಷಿಣ ಭಾರತದ ಅಧಿಕಾರಿಗಳೇ ಇದ್ದು, ಯಾವುದೇ ಮುನ್ಸೂಚನೆ ಇಲ್ಲದೇ ಸ್ಥಳಾಂತರ ಮಾಡಿರುವುದು ಅಧಿಕಾರಿಗಳಿಗೂ ತೊಂದರೆಯುಂಟಾಗಲಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಲಕ್ನೊ, ಅಲಹಾಬಾದ್, ರಾಮ್‌ಪುರ, ಅಮೇಥಿ ಹಾಗೂ ನೋಯ್ಡಾಗಳಲ್ಲಿ ಸಿಆರ್‌ಪಿಎಫ್ ಕೇಂದ್ರಗಳಿವೆ.ಮತ್ತೆ ಅಲ್ಲಿಗೆ ಸ್ಥಳಾಂತರಿಸಿರುವುದು ಬಿಜೆಪಿಯ ಕರ್ನಾಟಕ ವಿರೋಧಿ ಧೋರಣೆ ಎತ್ತಿ ತೋರಿಸುತ್ತದೆ ಎಂದರು.
ಕುಡಿಯುವ ನೀರು ಹಾಗೂ ಭಾಷೆಯ ವಿಷಯದಲ್ಲಿಯೂ ಬಿಜೆಪಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದು, ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿಯ 17 ಸಂಸದರಿದ್ದಾರೆ. ಅವರು ಅನಗತ್ಯ ಕಾರಣಗಳ ಬಗ್ಗೆ ಮಾತನಾಡಿ ಕಾಲಹರಣ ಮಾಡುವ ಬದಲು ಕೇಂದ್ರ ಸರ್ಕಾರ ಜೊತೆಗೆ ಮಾತನಾಡಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕು. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ ಅವರೂ ಕರ್ನಾಟಕದ ಪರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ರಾಜ್ಯದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ನೇಮಕಾತಿ ನಡೆಯುವ ಸಂದರ್ಭದಲ್ಲಿಯೂ ಕನ್ನಡಿಗರಿಗೆ ಅನ್ಯಾಯ ಮಾಡಲಾಗುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ. ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯ ಬಿಜೆಪಿ ನಾಯಕರು ಕನ್ನಡಿಗರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಮಾಡಲಿ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.
ಇದೇ ವೇಳೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ವಿರುದ್ಧ ಕೇರಳ ಸರ್ಕಾರ ರಾಜಕೀಯ ಪ್ರೇರಿತವಾಗಿ ಆರೋಪ ಮಾಡುತ್ತಿದ್ದು, ಸರಿತಾ ನಾಯರ್ ಹಗರಣದ ಕುರಿತು ಈಗಾಗಲೇ ತನಿಖಾ ಆಯೋಗ ಕೆ.ಸಿ. ವೇಣುಗೋಪಾಲ ಅವರ ಪಾತ್ರದ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಅವರನ್ನು ಪ್ರಕರಣದಿಂದ ಕೈ ಬಿಟ್ಟಿದೆ. ಅಲ್ಲದೇ ಆ ನಂತರ ಕೇರಳದಲ್ಲಿ ಚುನಾವಣೆ ನಡೆದು ವೇಣುಗೋಪಾಲ ಸಂಸದರಾಗಿ ಆಯ್ಕೆ ಆಗಿದ್ದಾರೆ. ಆದರೆ, ಕೇರಳದ ಎಡ ಪಂಥೀಯ ಸರ್ಕಾರ ಬಿಜೆಪಿಯ ಪ್ರೇರಣೆಯಿಂದ ವೇಣುಗೋಪಾಲ್ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಭಾಷೆ ಮಿತಿ ಮೀರದಿರಲಿ:ದಿನೇಶ್ ಗುಂಡೂರಾವ್
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್ ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತ ಇರಬೇಕು. ಪ್ರಧಾನಿಯಾಗಿರಲಿ ಸಾಮಾನ್ಯ ವ್ಯಕ್ತಿಯೇ ಆಗಿರಲಿ, ಅವರ ಬಗ್ಗೆ ಕೆಟ್ಟ ಪದಗಳನ್ನು ಬಳಸುವುದು ಸರಿಯಲ್ಲ ಎಂದು ಹೇಳಿದರು.