ಚಿಕ್ಕಬಳ್ಳಾಪುರ: ರಾಜ್ಯದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ ಗುಂಡೂರಾವ್ ನೇಮಕವಾದ ಬಳಿಕವೇ ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಯಿತು ಎಂದು ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಗ್ರಾಮದಲ್ಲಿ ನೂತನ ಐಟಿಐ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ನೆರೆ ಪರಿಹಾರ ತರುವಲ್ಲಿ ವಿಫಲವಾಗಿದೆಯೆಂಬ ದಿನೇಶ್ ಗುಂಡೂರಾವ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದಿನೇಶ್ ಗುಂಡೂರಾವ್ ಪಕ್ಷದ ಅಧ್ಯಕ್ಷರಾದ ಮೇಲೆಯೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಗತಿ ಬಂದಿದೆ ಎಂದರು.
ಯಾವುದೇ ಸರ್ಕಾರವನ್ನು ಎರಡು ತಿಂಗಳಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ, ಐದು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 127 ಇದ್ದ ಶಾಸಕರ ಸಂಖ್ಯೆ ಈಗ 78 ಕ್ಕೆ ಬಂದಿದೆ. ದಿನೇಶ್ ಗುಂಡೂರಾವ್ ಪಕ್ಷದ ಅಧ್ಯಕ್ಷರಾದ ಮೇಲೆ ಲೋಕಸಭಾ ಚುನಾವಣೆಯಲ್ಲಿ 1 ಸ್ಥಾನಕ್ಕೆ ಬಂದಿದೆ ಎಂದರು.
ದಿನೇಶ್ ಗುಂಡೂರಾವ್ ಮೊದಲು ತಮ್ಮ ಯೋಗ್ಯತೆಯನ್ನು ಅರಿಯಲಿ. ಅಧ್ಯಕ್ಷರಾಗಿ ಹೇಗೆ ಇರಬೇಕು. ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ತಿಳದುಕೊಳ್ಳಿ. ಅವರಿಂದಲೇ ಪಕ್ಷ ರಾಜ್ಯದಲ್ಲಿ ಆಧೋಗತಿಗೆ ಇಳಿಯಿತು. ಯಡಿಯೂಪ್ಪ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ದಿನೇಶ್ ಗುಂಡೂರಾವ್ ವಿರುದ್ದ ಅನರ್ಹ ಶಾಸಕ ಸುಧಾಕರ್ ತೀವ್ರ ವಾಗ್ದಾಳಿ ನಡೆಸಿದರು. ಸಿಎಂ ಬಿ.ಎಸ್. ಯಡಿಯೂರಪ್ಪ ನೇತ್ರತ್ವದಲ್ಲಿ ಬಿಜೆಪಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.