ಮೈಸೂರು: ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕಳೆದ ಹಲವು ವರ್ಷದಿಂದ ಶ್ರಮಿಸುತ್ತಿರುವ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಗುಂಡೂರಾವ್ ಅಭಿಮಾನಿ ಬಳಗದ ಸದಸ್ಯರು ಒತ್ತಾಯಿಸಿದರು.
ನಗರದ ನಾರಾಯಣಶಾಸಿ ರಸ್ತೆಯಲ್ಲಿರುವ ಅಗರಂ ರಂಗಯ್ಯ ವೃತ್ತದಲ್ಲಿ ಜಮಾಯಿಸಿದ ಬಳಗದ ಸದಸ್ಯರು, ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹಿಸಿ ಸಾರ್ವಜನಿಕರ ಶೂ ಪಾಲಿಶ್ ಮಾಡುವ ಅಣಕು ಪ್ರದರ್ಶನ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್ ದಕ್ಷ ಆಡಳಿತ ನೀಡುವ ಮೂಲಕ ಅಪಾರ ಸೇವೆ ಸಲ್ಲಿಸಿದ್ದಾರೆ. ಅದೇ ರೀತಿಯಲ್ಲಿ ದಿನೇಶ್ ಗುಂಡೂರಾವ್ ರಾಜಕೀಯವಾಗಿ ಕಳೆದ ಎರಡು ದಶಕಗಳಿಂದ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಕೆಪಿಸಿಸಿ ಯುವ ಘಟಕದ ರಾಜ್ಯಾಧ್ಯಕ್ಷರಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ತಮಗೆ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ದಿನೇಶ್ ಗುಂಡೂರಾವ್, ಎಲ್ಲಾ ವರ್ಗದವರೊಂದಿಗೆ ಬೆರೆತು ಪಕ್ಷದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಕಳೆದ ಬಾರಿ ಹೈಕಮಾಂಡ್ ಸೂಚನೆ ಮೇರೆಗೆ ಸಚಿವ ಸ್ಥಾನವನ್ನು ತ್ಯಾಗ ಮಾಡಿದ್ದರು. ಹೀಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ನಿಟ್ಟಿನಲ್ಲಿ ಪಕ್ಷದ ಹೈಕಮಾಂಡ್ ಅಥವಾ ಶಾಸಕಾಂಗ ಸಮನ್ವಯ ಸಮಿತಿ ಕ್ರಮ ವಹಿಸಬೇಕಿದ್ದು, ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದ ಅಳಿವು ಉಳಿವಿನ ಪ್ರಶ್ನೆಯಾಗಿ ಉಳಿಯುತ್ತದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷ ವಿನಯ್ ಕಣಗಾಲ್, ಯುವ ಕಾಂಗ್ರೆಸ್ ಮುಖಂಡರಾದ ಸಿ.ಎಸ್.ರಘು, ತಿವಾರಿ, ವಕೀಲ ರಾಜಶೇಖರ್, ಜೋಗಿ ದೀಪು, ನಾಗಭೂಷಣ್, ಯೋಗೇಶ್, ಸುಕೃತ್ ಮತ್ತಿತರರು ಹಾಜರಿದ್ದರು.