ಬೆಂಗಳೂರು: 2022-23ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಭತ್ತ ಮತ್ತು ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಭಾರಿ ಕುಸಿತಕಂಡಿದ್ದು, ಇದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಕಳೆದ ಸಾಲಿನಲ್ಲಿ 20 ಲಕ್ಷ ಕ್ವಿಂಟಾಲ್ ಭತ್ತ ಹಾಗೂ 5 ಲಕ್ಷ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಖರೀದಿ ಮಾಡಲಾಗಿತ್ತು. ಆದರೆ, ಈ ಸಾಲಿನಲ್ಲಿ 79 ಸಾವಿರ ಕ್ವಿಂಟಾಲ್ ಭತ್ತ ಖರೀದಿಯಾಗಿದ್ದರೆ, 3.29 ಲಕ್ಷ ಕ್ವಿಂಟಾಲ್ ರಾಗಿ ಖರೀದಿಯಾಗಿದೆ. ಹೀಗಾಗಿ ಮುಂದಿನ ಸಾರಿಯಾದರೂ ಸೂಕ್ತ ಸಮಯದಲ್ಲಿ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಂಡ್ಯ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಶಾಸಕ ದಿನೇಶ್ ಗೂಳಿಗೌಡ ಅವರು ಆಗ್ರಹಿಸಿದ್ದಾರೆ.
ಈಗಾಗಲೇ ಬೆಲೆ ಕುಸಿತ ಹಾಗೂ ರಾಸಾಯನಿಕ ಗೊಬ್ಬರಗಳ, ಕೀಟನಾಶಕಗಳ ಬೆಲೆ ಏರಿಕೆಯಾಗಿದೆ. ಜೊತೆಗೆ ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದ್ದು, ರೈತನ ಬದುಕು ದುಸ್ತರವಾಗಿದ್ದಲ್ಲದೆ, ಆತ್ಯಹತ್ಯೆ ಹಾದಿ ಹಿಡಿಯುವಂತಾಗುತ್ತಿದೆ. ಕೃಷಿ ವಲಯ ಸಂಕಷ್ಟಕ್ಕೆ ಸಿಲುಕಿ ನಷ್ಟದ ದಾರಿ ಹಿಡಿದಿದೆ. ಕೃಷಿ ಕಾರ್ಮಿಕರ ಕೊರತೆಯು ಕೂಡ ತೀವ್ರವಾಗಿ ರೈತರನ್ನು ಕಾಡುತ್ತಿದೆ. ಈ ಮಧ್ಯೆ ಸರ್ಕಾರ ಹಾಗೂ ಸರ್ಕಾರದ ಆದೇಶವನ್ನು ಅನುಷ್ಠಾನಕ್ಕೆ ತರುವ ಅಧಿಕಾರಿಗಳು ಇದನ್ನು ಪಾಲಿಸದೇ ಇದ್ದರೆ ಏನು ಗತಿ? ಹೀಗಾಗಿ ಸೂಕ್ತ ಸಮಯದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪನೆ ಹೇಗೆ ಮುಖ್ಯವೋ ಅದರ ನಿಷ್ಪಕ್ಷಪಾತ ನಿರ್ವಹಣೆಯೂ ಅಷ್ಟೇ ಮುಖ್ಯವಾಗುತ್ತದೆ ಎಂಬುದು ಎಲ್ಲರ ಗಮನದಲ್ಲಿರಬೇಕು ಎಂದು ಆಗ್ರಹಿಸಿದರು.
ಭತ್ತ ಹಾಗೂ ರಾಗಿ ಖರೀದಿ ವಿಷಯದಲ್ಲಿ ಕಳೆದ ಬಾರಿಯ ಖರೀದಿ ಪ್ರಕ್ರಿಯೆಗೆ ಹೋಲಿಕೆ ಮಾಡಿದರೆ ಈ ಬಾರಿ ಸರ್ಕಾರದಿಂದ ನಡೆದಿರುವ ಖರೀದಿಯು ಏನೇನೂ ಅಲ್ಲ. ಅದರಲ್ಲೂ ಭತ್ತ ಖರೀದಿಯಲ್ಲಂತೂ ಭಾರಿ ವಿಳಂಬ ನೀತಿ, ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 79,302 ಕ್ವಿಂಟಾಲ್ ಅಷ್ಟೇ ಭತ್ತ ಖರೀದಿಯಾಗಿದೆ. ಅಂದರೆ, ಕಳೆದ ಬಾರಿಗೆ ಹೋಲಿಸಿದರೆ 19.20 ಲಕ್ಷ ಕ್ವಿಂಟಾಲ್ ವ್ಯತ್ಯಾಸ ಕಂಡುಬಂದಿದೆ. ಕಳೆದ ಬಾರಿ 5 ಲಕ್ಷ ಕ್ವಿಂಟಾಲ್ ರಾಗಿ ಖರೀದಿಯಾಗಿತ್ತು. ಆದರೆ, ಈ ಬಾರಿ 329979 ಕ್ವಿಂಟಾಲ್ ರಾಗಿ ಖರೀದಿಯಾಗಿದೆ. ಅಂದರೆ, 1.70 ಲಕ್ಷ ಕ್ವಿಂಟಾಲ್ ವ್ಯತ್ಯಾಸ ಕಂಡುಬಂದಿದೆ. ಇದು ರೈತರ ಜನಜೀವನದ ಮೇಲೆ ಭಾರಿ ಪರಿಣಾಮವನ್ನೇ ಬೀರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ರೈತರಿಗೆ ನಷ್ಟ- ಶಾಸಕರ ಕಳವಳ
ಇದಕ್ಕೆ ಕಾರಣವೂ ನಮ್ಮ ಕಣ್ಣೆದುರಿಗೇ ಕಾಣುತ್ತದೆ. ಇಳುವರಿ ಬರುವ ಇಲ್ಲವೇ ಕಟಾವು ಮಾಡುವ ಸಂದರ್ಭದಲ್ಲಿ ನಿಗದಿತ ವೇಳೆಯಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತೆರೆಯದೇ ಇರುವುದು ಬಹುಮುಖ್ಯ ಕಾರಣವಾಗಿರುತ್ತದೆ. ಏಕೆಂದರೆ ರೈತರು ಮೊದಲೇ ಸಾಲ-ಸೋಲ ಮಾಡಿ ಬೆಳೆ ಬೆಳೆದಿರುತ್ತಾನೆ. ಆತನಿಗೆ ಕಟಾವು ಆದ ತಕ್ಷಣವೇ ಒಂದಷ್ಟು ಸಾಲ ತೀರಿಸುವ ಸೇರಿದಂತೆ ಇನ್ನಿತರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವ ಅನಿರ್ವಾಯತೆ ಎದುರಾಗಿರುತ್ತದೆ. ಆದರೆ, ಕಟಾವು ಆದ ಸಂದರ್ಭದಲ್ಲಿ ಸರ್ಕಾರ ಇಲ್ಲವೇ ಅಧಿಕಾರಿಗಳು ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತೆರೆಯದೇ ಹೋದಲ್ಲಿ ರೈತರು ಅನಿವಾರ್ಯವಾಗಿ ಹೊರಗಡೆ ಮಾರುಕಟ್ಟೆಯಲ್ಲಿ ಬೆಳೆಯನ್ನು ಮಾರಾಟ ಮಾಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿಗದಿತ ಸಮಯದಲ್ಲಿ ಖರೀದಿ ಕೇಂದ್ರ ತೆರೆಯಲು ಸಲಹೆ
ಬೆಳೆಯನ್ನು ಮಾರಾಟ ಮಾಡುವ ವೇಳೆ ದಲ್ಲಾಳಿಗಳು ಕೇಳುವ ದರಕ್ಕೆ ಅಂದರೆ ಕಡಿಮೆ ದರಕ್ಕೆ ಮಾರಾಟ ಮಾಡಿ ನಷ್ಟವನ್ನು ಅನುಭವಿಸುವ ಸ್ಥಿತಿ ಬಂದೊದಗಿದೆ. ಯಾವುದೇ ಬೆಳೆಯಾಗಲಿ, ಅದು ಯಾವ ಸಂದರ್ಭದಲ್ಲಿ ಇಳುವರಿ ಬರುತ್ತದೆ, ಕಟಾವು ಆಗುತ್ತದೆ ಎಂಬ ಅರಿವು ಸರ್ಕಾರ ಸಹಿತ ಅಧಿಕಾರಿಗಳಿಗೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ಕಟಾವು ಅವಧಿಯಲ್ಲಾದರೂ ಸೂಕ್ತ ಸಂದರ್ಭದಲ್ಲಿ ಭತ್ತ ಹಾಗೂ ರಾಗಿಗೆ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ದಿನೇಶ್ ಗೂಳಿಗೌಡ ಅವರು ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.