ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ದಿಮುತ್ ಕರುಣಾರತ್ನೆ ಅವರನ್ನು ಏಕದಿನಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ಅಫ್ಘಾನಿಸ್ಥಾನ ವಿರುದ್ಧದ ತವರಿನ ಸರಣಿಗಾಗಿ ಪ್ರಕಟಿಸಲಾದ ತಂಡದಲ್ಲಿ ಕರುಣಾರತ್ನೆ ಸ್ಥಾನ ಪಡೆದಿದ್ದಾರೆ.
2019ರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶ್ರೀಲಂಕಾವನ್ನು ಮುನ್ನಡೆಸಿದ ದಿಮುತ್ ಕರಣಾರತ್ನೆ ಅನಂತರ ಈ ಮಾದರಿಯಲ್ಲಿ ಹೆಚ್ಚು ಆಡಿರಲಿಲ್ಲ. 2021ರ ಮಾರ್ಚ್‌ನಲ್ಲಿ ಕೊನೆಯ ಸಲ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.
ಗಾಯದಿಂದ ಗುಣಮುಖರಾದ ವೇಗಿ ದುಷ್ಮಂತ ಚಮೀರ ಕೂಡ ತಂಡಕ್ಕೆ ಮರಳಿದ್ದಾರೆ. ದುಶನ್ ಹೇಮಂತ ಈ ತಂಡದ ಏಕೈಕ ಹೊಸ ಮುಖ. ಐಪಿಎಲ್ ವಿಜೇತ ತಂಡದ ಸದಸ್ಯರಾದ ಮಹೀಶ ತೀಕ್ಷಣ ಮತ್ತು ಮತೀಶ ಪತಿರಣ ನೇರವಾಗಿ ರಾಷ್ಟ್ರೀಯ ತಂಡದ ಡ್ನೂಟಿಗೆ ತೆರಳಲಿದ್ದಾರೆ.
ಗಾಯಾಳು ಕುಸಲ್ ಪೆರೆರ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಪಾದದ ನೋವಿಗೆ ಸಿಲುಕಿರುವ ವನಿಂದು ಹಸರಂಗ ಸಂಪೂರ್ಣ ಫಿಟ್‌ನೆಸ್ ಹೊಂದಿದ್ದರಷ್ಟೇ ಆಡುವರು. 3 ಪಂದ್ಯಗಳ ಏಕದಿನ ಸರಣಿ ಜೂ. 2, 4 ಮತ್ತು 7ರಂದು ಹಂಬತೋಟದಲ್ಲಿ ನಡೆಯಲಿದೆ.