Advertisement
ವಿಟ್ಲದ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರು ಮಾತನಾಡಿ, ಪುಣಚ ಗ್ರಾಮದ ಆಜೇರು ಎಂಬಲ್ಲಿ ಪರಿಶಿಷ್ಟ ಪಂಗಡದವರು ಹಾಗೂ ಇತರ ಜಾತಿ ಯವರು ವಾಸ ಮಾಡುವ ಹಲವು ಕುಟುಂಬಗಳಿವೆ. ಇಲ್ಲಿಗೆ ತೆರಳುವ ರಸ್ತೆ ಅಭಿವೃದ್ಧಿಯಾಗಿಲ್ಲ. ನೀರಿನ ಸಮಸ್ಯೆ ಇದೆ. ಈ ಬಗ್ಗೆ ಹಿಂದೆ ಸಂಬಂಧಪಟ್ಟ ಇಲಾಖೆಗೆ, ಶಾಸಕರಿಗೆ, ಸಂಸದರಿಗೆ, ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ನೀಡಿದ ಭರವಸೆ ಇದುವರೆಗೂ ಈಡೇರಿಕೆಯಾಗಿಲ್ಲ ಎಂದು ಆರೋಪಿಸಿದರು. ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಶ್ರೀಧರ್ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು.
ವಿಟ್ಲ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಮೌಖೀಕ ಭರವಸೆ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರತಿಭಾ ಶ್ರೀಧರ್ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿ, ಈ ಭಾಗದ ರಸ್ತೆ ಹಾಗೂ ನೀರಿನ ಬಗ್ಗೆ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ. ಶಾಸಕರ ಮಳೆ ಹಾನಿ ಯೋಜನೆಯಲ್ಲಿ 10 ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಇನ್ನುಳಿದ ರಸ್ತೆ ಕಾಮಗಾರಿ ಅನುದಾನದ ಕೊರತೆಯಿಂದ ಬಾಕಿಯಾಗಿದ್ದು, ಇಲಾಖೆಗೆ ಎಸ್ಟಿಮೇಟ್ ತಯಾರಿಸಿ ಮನವಿ ಸಲ್ಲಿಸಲಾಗಿದೆ ಎಂದರು. ಪುಣಚ ಬಿಜೆಪಿ ಅಧ್ಯಕ್ಷ ಹರೀಶ್ ಮಾತನಾಡಿ, ಕುಡಿಯುವ ನೀರಿನ ವ್ಯವಸ್ಥೆಗೆ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲಿ ಅನುದಾನ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಿದರು. ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ತಿಮ್ಮಣ್ಣ ನಾಯ್ಕ ಆಜೇರು, ಪ್ರೇಮ ದಡ್ಡಲ್ತಡ್ಕ, ಕುಶಾಲಪ್ಪ ಮೂಡಂಬೈಲು, ರಾಜು ಹೊಸ್ಮಠ, ಪ್ರಸಾದ್ ಬೊಳಾರ್, ಕೃಷ್ಣಪ್ಪ ಅಜ್ಜಿನಡ್ಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.