Advertisement
ಕೊಳ್ತಿಗೆ ಗ್ರಾಮದ ವಿಶ್ವನಾಥ ಮತ್ತು ಸರಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಸರಿತಾ ಅವರ ಕಡೆಯಿಂದ ಯಾರೂ ಇಲ್ಲದ ಕಾರಣ ಈ ವಿವಾಹ ಕಾರ್ಯದ ಮುಂದಾಳತ್ವ ವಹಿಸಿದ್ದ ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷ ರಾಜು ಹೊಸ್ಮಠ ಅವರು ಹೆಣ್ಣಿನ ಮಾವನ ಸ್ಥಾನ ವಹಿಸಿ ಧಾರೆ ಎರೆದು ವಿವಾಹ ನೆರವೇರಿಸಿದರು.
ಮಂದಿ ಸತಿಪತಿಗಳಾಗಿ ನೂರಾರು ವರ್ಷಗಳ ಕಾಲ ಪ್ರೀತಿಯಿಂದ ಬಾಳಿ ಎಂದು ಶುಭ ಹಾರೈಸಿದರು. ಕೊಳ್ತಿಗೆ ಗ್ರಾಮದ ಬೈಲೋಡಿ ನಿವಾಸಿ ಕುಂಞಿ ಅವರ ಪುತ್ರ ವಿಶ್ವನಾಥ ಮತ್ತು ಕೊಳ್ತಿಗೆ ಗ್ರಾಮದ ಕೆಳಗಿನ ಮನೆ ನಿವಾಸಿ ಅಂಗಾರ ಕೆ. ಅವರ ಪುತ್ರಿ ಸರಿತಾ ಕೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಅವರಿಬ್ಬರ ಮನೆ ಕೇವಲ ನೂರು ಮೀಟರ್‌ಗಳಷ್ಟು ಅಂತರ ದಲ್ಲಿದೆ. ಕೊಳ್ತಿಗೆ ಅಂಗನವಾಡಿ ಕೆಂದ್ರದಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಸರಿತಾ ಮತ್ತು ಕೂಲಿ ಕೆಲಸ ಮಾಡುತ್ತಿದ್ದ ವಿಶ್ವನಾಥ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸ್ವಇಚ್ಛೆಯಿಂದ ವಿವಾಹವಾಗಲು ಬಯಸಿದ್ದರೂ ಯುವತಿಯ ಕಡೆಯವರು ನಿರಾಕರಿಸಿದ್ದರು. ಆದರೆ ಯುವಕನ ಕಡೆಯವರ ಸಂಪೂರ್ಣ ಒಪ್ಪಿಗೆಯಿತ್ತು.
Related Articles
ಪ್ರೀತಿಸಿದ ಯುವಕನನ್ನೇ ವಿವಾಹವಾಗಬೇಕೆಂಬ ಹಠಕ್ಕೆ ಬಿದ್ದ ಸರಿತಾ ಕಳೆದ ಮಂಗಳವಾರ ಮನೆಬಿಟ್ಟು ಬಂದು ದಲಿತ್ ಸೇವಾ ಸಮಿತಿಯ ಮುಖಂಡರನ್ನು ಸಂಪರ್ಕಿಸಿ ರಕ್ಷಣೆ ಕೋರಿದ್ದರು. ಜತೆಗೆ ಪ್ರೀತಿಸಿದ ಯುವಕನ ಜತೆ ವಿವಾಹ ಮಾಡುವಂತೆ ವಿನಂತಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದಲಿತ್ ಸೇವಾ ಸಮಿತಿ ಮುಖಂಡರು ಸೇರಿಕೊಂಡು ಶುಕ್ರವಾರ ಮಧ್ಯಾಹ್ನ ಸರಳ ವಿವಾಹ ನಡೆಸುವ ಮೂಲಕ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ. ದಲಿತ್ ಸೇವಾ ಸಮಿತಿ ಪುತ್ತೂರು ಶಾಖೆಯ ಗೌರವಾಧ್ಯಕ್ಷ ಮೋಹನ ನಾಯ್ಕ, ಪ್ರ. ಕಾರ್ಯದರ್ಶಿ ಸಂಕಪ್ಪ ನಿಡ್ಪಳ್ಳಿ , ಕೋಶಾಧಿಕಾರಿ ಸುರೇಶ್ ಕುಂಬ್ರ, ಮಾಜಿ ಉಪಾಧ್ಯಕ್ಷ ಸಾಂತಪ್ಪ ನರಿಮೊಗರು, ಜತೆ ಕಾರ್ಯದರ್ಶಿ ಯಾಮಿನಿ, ಸದಸ್ಯರಾದ ಮನೋಹರ್ ಕೋಡಿಜಾಲು, ಶ್ರೀಧರ್ ಬನ್ನೂರು, ಚಂದ್ರ ಬೀರಿಗ, ಗೋಪಾಲ್ ಬೀರಿಗ, ರಮೇಶ್ ಕೇಪುಳು, ಶೀನ ಬಾಳಿಲ, ಮೋಹನ್ ಬೀರಗ, ರಮಣಿ ಕೇಪುಳು, ಶ್ರೀಧರ್ ಬನ್ನೂರು, ಸೀತಾ ರಾಮ ಕುಂಬರ್ಗ, ಚಿನ್ನಪ್ಪ ತೊಡಿಕಾನ, ಲಲಿತಾ ಕುಂಬ್ರ, ಜನಾರ್ದನ ನಾಯ್ಕ ಆಲಂಕಾರು, ಕೇಶವ ಪಡೀಲು, ಲೋಕೇಶ್ ತೆಂಕಿಲ ಮೊದಲಾದವರು ವಿವಾಹಕ್ಕೆ ಸಾಕ್ಷಿಯಾದರು.
Advertisement
ನ್ಯಾಯ ಒದಗಿಸಿದ್ದೇವೆಇದು ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆಸುತ್ತಿರುವ 6ನೇ ಸರಳ ವಿವಾಹ ಇದು. ಪರಸ್ಪರ
ಪ್ರೀತಿಸುತ್ತಿದ್ದ ಯುವಕ ಮತ್ತು ಯುವತಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಿದ್ದೇವೆ. ಈ ವಿವಾಹಕ್ಕೆ ಯುವತಿಯ
ಕಡೆಯವರ ಒಪ್ಪಿಗೆ ಇಲ್ಲದಿದ್ದರೂ ಮುಂದೆ ಅವರು ಸತಿಪತಿಗಳಾಗಿ ಬಾಳುವುದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದು
ಆಕೆಯ ಹೆತ್ತವರು ನಮ್ಮಲ್ಲಿ ತಿಳಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಿ, ಅನುಮತಿ ಪಡೆದುಕೊಂಡು ನ್ಯಾಯ ಬದ್ಧವಾಗಿಯೇ ವಿವಾಹ ನಡೆಸಲಾಗಿದೆ.
– ರಾಜು ಹೊಸ್ಮಠ,
ಅಧ್ಯಕ್ಷರು, ದಸೇಸ, ಪುತ್ತೂರು ತಾಲೂಕು