Advertisement

ಶಿಥಿಲಗೊಂಡಿದೆ ತೊಡಿಕಾನ ಕಿರು ಸಂಪರ್ಕ ಸೇತುವೆ 

10:45 AM Oct 27, 2018 | |

ಅರಂತೋಡು: ತೊಡಿಕಾನ ಶಾಲಾ ಬಳಿ ಮತ್ಸ್ಯ ತೀರ್ಥ ಹೊಳೆಗೆ ನಿರ್ಮಿಸಿದ ಹಳೆಯ ಕಿರು ಸೇತುವೆ ಶಿಥಿಲಗೊಂಡಿದ್ದು, ಈ ಮೂಲಕ ಸಂಚರಿಸುವವರು ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದ್ದಾರೆ.

Advertisement

ಮತ್ಸ್ಯತೀರ್ಥ ಹೊಳೆಗೆ ಈ ಜಾಗದಲ್ಲಿ ಸೇತುವೆ ನಿರ್ಮಾಣವಾಗುವುದಕ್ಕಿಂತ ಮೊದಲು ತೊಡಿಕಾನ ಶಾಲೆಗೆ ತೆರಳುವ ಮಕ್ಕಳು, ಸಾರ್ವಜನಿಕರು ಅಡಿಕೆ ಮರದ ಪಾಲದ ಮೂಲಕ ನಡೆದುಕೊಂಡು ಹೋಗುತ್ತಿದ್ದರು. 35 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ಶಾಲಾ ಬಳಿಯ ಮತ್ಸ್ಯತೀರ್ಥ ಹೊಳೆಗೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಬಳಿಕ ಸಾರ್ವಜನಿಕರು ಅದರ ಪ್ರಯೋಜನವನ್ನು ಪಡೆದಿದ್ದರು. ಮುಖ್ಯವಾಗಿ ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ತೆರಳುತ್ತಿದ್ದು, ಅವರಿಗೆ ವರದಾನವಾಗಿ ಪರಿಣಮಿಸಿತ್ತು.

ಮುಖ್ಯ ಸಂಪರ್ಕ ಸೇತುವೆ
ಸುಮಾರು ನಾಲ್ಕೈದು ವರ್ಷಗಳ ಹಿಂದೆ ಈ ಸೇತುವೆ ಮುಖ್ಯ ಸೇತುವೆಯಾಗಿತ್ತು. ತೊಡಿಕಾನದ ಕುಂಟುಕಾಡು, ಬಾಳೆಕಜೆ, ಚಿಪ್ಪುರು ಗುಡ್ಡೆ ಕುತ್ತಮೊಟ್ಟೆ ಭಾಗದ ಜನರು ಈ ಸೇತುವೆಯನ್ನೆ ಅವಲಂಬಿಸಿದ್ದರು. ಸಾರ್ವಜನಿಕರು ವಾಹನ ಸಂಚಾರಕ್ಕೆ ಹೊಳೆಯ ಕೆಳಭಾಗದ ಸೇತುವೆಯನ್ನೆ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. 

ಶಿಥಿಲಹಂತದಲ್ಲಿರುವ ಈ ಸೇತುವೆಯ ಕಂಬವನ್ನು (μಲ್ಲರ್‌) ಕಗ್ಗಲ್ಲಿನಿಂದ ನಿರ್ಮಿಸಲಾಗಿದೆ. ಆದರೆ ಸೇತುವೆಯ ಕಂಬದ ತಳ ಜೇಡಿ ಮಣ್ಣಿನಿಂದ ಕೋಡಿದೆ. ಈ ವರ್ಷ ಸುರಿದ ಭಾರೀ ಮಳೆಗೆ ನೀರಲ್ಲಿ ಕೊಚ್ಚಿಕೊಂಡು ಬಂದ ಮರದ ದಿಮ್ಮಿಗಳು ಸೇತುವೆಗೆ ಬಡಿದ ಪರಿಣಾಮ ಸೇತುವೆಗೆ ಭಾಗಶಃ ಹಾನಿಯಾಗಿದೆ. ಇದೀಗ ಸೇತುವೆ ಕುಸಿಯುವ ಭೀತಿಯಲ್ಲಿದೆ.

ವಾಹನ ಸಂಚಾರ ನಿರ್ಬಂಧ
ಸೇತುವೆಯು ಶಿಥಿಲಗೊಂಡಿರುವ ವಿಚಾರವನ್ನು ಆರಂತೋಡು ಗ್ರಾ.ಪಂ. ಗಮನಕ್ಕೆ ತರಲಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾ.ಪಂ.ವತಿಯಿಂದ ಸೇತುವೆಯ ಮೇಲೆ ವಾಹನಗಳು ಸಂಚಾರಿಸಿದಂತೆ ಕಬ್ಬಿಣದ ಪೈಪ್‌ ಮೂಲಕ ತಡೆ ಬೇಲಿ ನಿರ್ಮಿಸಲಾಗಿದ್ದು, ದ್ವಿಚಕ್ರ ಸವಾರರಿಗೆ ಮಾತ್ರ ಮಾತ್ರ ಅವಕಾಶ ಕಲ್ಪಿಸಲಾಗಿದೆ.

Advertisement

ಹೂಳು ತುಂಬಿದ ಹೊಳೆ
ಹೊಳೆಯಲ್ಲಿ ಕೆಲವೆಡೆ ಹೂಳು ತುಂಬಿಕೊಂಡಿರುವ ಕಾರಣ ಹೊಳೆ ಹರಿಯುವ ಪಥ ಸ್ವಲ್ಪ ಬದಲಾಗಿದೆ. ಅಲ್ಲದೆ ಹೊಳೆಯ ಬದಿ ದಟ್ಟ ಪೊದೆಗಳು ಬೆಳೆದುಕೊಂಡಿರುವುದರಿಂದ ಮಳೆಗಾದಲ್ಲಿ ಹೊಳೆ ನೀರು ಸಮರ್ಕವಾಗಿ ಹರಿಯದೇ ಸೇತುವೆಯ ಕಂಬಗಳು ಹಾನಿಗೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.

ಏನು ಮಾಡಬಹುದು?
ಸೇತುವೆಯ ಸ್ಲ್ಯಾಬ್‌ಗಳು ಸಮರ್ಪಕವಾಗಿದ್ದು, ಯಾವುದೇ ದುರಸ್ತಿ ಮಾಡುವ ಅಗತ್ಯ ಇಲ್ಲ. ಆದರೆ ಪಿಲ್ಲರ್‌ ಮಾತ್ರ ಕುಸಿಯುವ ಹಂತದಲ್ಲಿದೆ. ಇದಕ್ಕೆ ಪರಿಹಾರವಾಗಿ ಹಾನಿಯಾಗಿರುವ ಪಿಲ್ಲರ್‌ ಸುತ್ತ ಒಂದುವರೆ ಮೀಟರ್‌ನಷ್ಟು ಎತ್ತರಕ್ಕೆ ಕಾಂಕ್ರೀಟ್‌ ಹಾಕಿ ಪಿಲ್ಲರನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಪತ್ರ ಬರೆಯಲಾಗುವುದು
ತೊಡಿಕಾನ ಶಾಲಾ ಮಕ್ಕಳು ಹೆಚ್ಚಾಗಿ ಸಂಚರಿಸುವ ಸೇತುವೆ ಶಿಥಿಲಗೊಂಡಿರುವ ಬಗ್ಗೆ ನಮಗೆ ದೂರು ಬಂದಿವೆ. ಸೇತುವೆಯಲ್ಲಿ ಬೈಕನ್ನು ಹೊರತುಪಡಿಸಿ ಇತರ ವಾಹನ ಸಂಚರಿಸದಂತೆ ತಡೆಬೇಲಿ ಹಾಕಲಾಗಿದೆ. ಈ ಸೇತುವೆಯ ದುರಸ್ತಿಗಾಗಿ ಅಥವಾ ಸೇತುವೆ ನಿರ್ಮಾಣಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಗ್ರಾ.ಪಂ. ವತಿಯಿಂದ ಪತ್ರ ಬರೆಯಲಾಗುವುದು.
– ಜಯಪ್ರಕಾಶ್‌ ಪಿ.ಡಿ.ಒ.
ಅರಂತೋಡು ಗ್ರಾ.ಪಂ.

ಗಮನಕ್ಕೆ ತರಲಾಗಿದೆ
ಸೇತುವೆ ಶಿಥಿಲಗೊಂಡಿರುವ ಬಗ್ಗೆ ಈಗಾಗಲೇ ಸ್ಥಳೀಯ ಗ್ರಾ.ಪಂ.ನ ಗಮನಕ್ಕೆ ತರಲಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಇಲಾಖೆಗೆ ಎಸ್‌ಡಿಎಂಸಿ ವತಿಯಿಂದ ಪತ್ರ ಬರೆಯಲಾಗುವುದು.
– ತಿಮ್ಮಯ್ಯ ಮೆತ್ತಡ್ಕ
ಎಸ್‌ಡಿಎಂಸಿ ಅಧ್ಯಕ್ಷ
ಹಿ.ಪ್ರಾ. ಶಾಲೆ ತೊಡಿಕಾನ

 ದುರಸ್ತಿ ಕಾರ್ಯ ಆಗಿಲ್ಲ
ಈ ಸೇತುವೆಯ ದುರಸ್ತಿ ಕಾರ್ಯವನ್ನು ತಡಮಾಡದೇ ತತ್‌ಕ್ಷಣ ಆರಂಭಿಸಬೇಕಾಗಿದೆ. ಇದು ತುಂಬಾ ಹಳೆಯ ಸೇತುವೆ ಆಗಿದೆ. ಈ ಸೇತುವೆ ನಿರ್ಮಾಣವಾದ ಬಳಿಕ ಒಮ್ಮೆಯೂ ದುರಸ್ತಿ ಕಾರ್ಯ ನಡೆದಿಲ್ಲ. ಸಂಬಂಧಪಟ್ಟವರು ಶೀಘ್ರ ಈ ಕುರಿತು ಕ್ರಮಕೈಗೊಳ್ಳಬೇಕಾಗಿದೆ.
ವಸಂತ ಭಟ್‌ ತೊಡಿಕಾನ
  ಸ್ಥಳೀಯರು

 ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next