ಮಾದನಹಿಪ್ಪರಗಿ: ಕಳೆದ ತಿಂಗಳು ಆ.5ರಂದು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮೇಲ್ಛಾವಣಿಯ ಪದರು ಬಿದ್ದು ವಿದ್ಯಾರ್ಥಿಗಳಿಗೆ ಗಾಯವಾದ ಬೆನ್ನಲ್ಲೇ ಗ್ರಾಮಸ್ಥರು ಹಾಗೂ ಪಾಲಕರು ಶಾಲೆಗಳಿಗೆ ಬೇಟಿ ಕೊಟ್ಟು ಶಿಥಿಲಗೊಂಡ ಕೋಣೆಗಳನ್ನು ನೋಡಿ ತಮ್ಮ ಮಕ್ಕಳಿಗೆ ಶಾಲಾ ಕಾಲೇಜಿಗೆ ಕಳಿಸಬೇಕೋ ಬೇಡವೋ ಎನ್ನುವ ಆತಂಕದಲ್ಲಿದ್ದಾರೆ.
ಗ್ರಾಮಗಳಲ್ಲಿರುವ ಸರಕಾರಿ ಕನ್ಯಾ ಪ್ರಾಥಮಿಕ ಶಾಲೆ ಮತ್ತು ಕರ್ನಾಟಕ ಪಬ್ಲಿಕ್ ಹಿರಿಯ ಪ್ರಾಥಮಿಕ ಹಾಗೂ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡದ ಎಲ್ಲ ಕೋಣೆಗಳು ಸೋರುತ್ತಿವೆ. ಹಿರಿಯ ಪ್ರಾಥಮಿಕ ಶಾಲೆಯೊಂದು ಹಳೆಯ ಕಟ್ಟಡವಾದರೆ ಉಳಿದ ಕಟ್ಟಡಗಳು ಹೊಸದಾಗಿ ನಿರ್ಮಿಸಲಾಗಿದೆ. ಅವೆಲ್ಲವೂ ಅತ್ಯಂತ ಕಳಪೆಮಟ್ಟದ ಕಟ್ಟಡಗಳಾಗಿವೆ. ಹಳೆಯ ಕಟ್ಟಡಗಳು ಮೇಲ್ಚಾವಣಿಗಳ ಮೇಲೆ ಸಾಕಷ್ಟು ಮಳೆ ನೀರು ನಿಂತು ಸೋರುತ್ತಿವೆ.
ಮಳೆ ನೀರು ಹೋಗಲು ಸರಿಯಾದ ರೀತಿಯಲ್ಲಿ ಮೇಲ್ಚಾವಣಿ ನಿರ್ಮಿಸಿಲ್ಲ. ಕಾಲೇಜಿನ ಕಟ್ಟಡಗಳು 2014ರಿಂದ 2000ದ ವರೆಗೆ ನಿರ್ಮಿಸಲಾಗಿದೆ ಆರೇಳು ವರ್ಷಗಳಲ್ಲಿಯೇ ಅವುಗಳ ಗುಣಮಟ್ಟ ಹೊರಹೊಮ್ಮಿದೆ. ಕೋಣೆಗಳು ಸೋರುತ್ತಿದ್ದು, ಶಿಕ್ಷಕರು ಮಕ್ಕಳಿಗೆ ಹೊರಗಿನ ವರಾಂಡದೊಳಗೆ ಪಾಠ ಹೇಳಿಕೊಡುತ್ತಿದ್ದಾರೆ.
ಸರಕಾರಿ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಶಿಥಿಲಗೊಂಡ ಕೋಣೆಗಳಲ್ಲಿ ಕೆಟ್ಟ ಗಬ್ಬು ವಾಸನೆ ಬರುತ್ತಿದೆ. ಮಕ್ಕಳು ಮಳೆ ಬಂದರೆ ಪಾಲಕರು ಮಕ್ಕಳಿಗೆ ಶಾಲೆಗಳಿಗೆ ಕಳಿಸುತ್ತಿಲ್ಲ. ಕೆಪಿಎಸ್ ಕಾಲೇಜಿನಲ್ಲಿ ಮೇಲ್ಛಾವಣಿ ಪದರು ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿನಿಯರ ಮನೆಗೆ ಮತ್ತು ಕಾಲೇಜಿಗೆ ಬೇಟಿ ನೀಡಿದ ಕಲಬುರಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ್ ಅವರು ಕಟ್ಟಡಗಳ ಅವ್ಯವಸ್ಥೆ ನೋಡಿ ಕಳಪೆ ಕಾಮಗಾರಿ ಮಾಡಲಾಗಿದೆ ಎಂದಿದ್ದಾರೆ.
-ಪರಮೇಶ್ವರ ಭೂಸನೂರ