ಜಮಖಂಡಿ: ತಾಲೂಕಿನ ಬಿದರಿ ಗ್ರಾಮದಲ್ಲಿ ಅಂದಾಜು 30 ವರ್ಷದ ಹಿಂದೆ ನಿರ್ಮಿಸಿದ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದೆ. ಆದರೂ ಕೃಷ್ಣಾ ನದಿಯಿಂದ ಓವರ್ ಹೆಡ್ ಟ್ಯಾಂಕ್ ಮೂಲಕ ಶುದ್ಧಿಗೊಳಿಸದ ನೀರು ಸರಬರಾಜು ಆಗುತ್ತಿದೆ. ಹೀಗಾಗಿ ಗ್ರಾಮದ ಜನರು ನಿತ್ಯ ಕಲುಷಿತ ನೀರನ್ನು ಸೇವಿಸುತ್ತಿದ್ದಾರೆ.
ಶಿಥಿಲಾವಸ್ಥೆಯಲ್ಲಿರುವ ಈ ಓವರ್ ಹೆಡ್ ಟ್ಯಾಂಕ್ 50 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ್ದು, ಈ ಹಿಂದೆ ಗ್ರಾಪಂ ರಾಜ್ಯ ಸಚಿವರಾಗಿದ್ದ ದಿ| ಅಬ್ದಲ್ ನಜೀರ ಸಾಹೇಬ ಉದ್ಘಾಟಿಸಿದ್ದರು. ಗ್ರಾಮದ ಜನತೆಗೆ ನೀರಿನ ಅನುಕೂಲತೆ ಬದಲಾಗಿ ಶಿಥಿಲಾವ್ಯವಸ್ಥೆ ತಲುಪಿದೆ. ಈ ಟ್ಯಾಂಕ್ ರಸ್ತೆ ಪಕ್ಷದಲ್ಲಿರುವುದರಿಂದ ಪಕ್ಕದಲ್ಲಿ ವಾಸಿಸುತ್ತಿರುವ ದಲಿತ ಸಮಾಜದ ಕುಟುಂಬಗಳು ಜೀವ ಭಯದಲ್ಲಿದ್ದಾರೆ.
10 ಸಾವಿರ ಜನಸಂಖ್ಯೆ ಹೊಂದಿರುವ ಬಿದರಿ ಗ್ರಾಮಕ್ಕೆ ನೀರು ಶುದ್ಧೀಕರಣವಾಗದೆ ನೇರವಾಗಿ ಶಿಥಿಲಗೊಂಡಿರುವ ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಗ್ರಾಮದಲ್ಲಿ ಶ್ರೀಮಂತರಿಗೆ ಮಾತ್ರ ಶುದ್ಧೀಕರಣದ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಬಡವರು, ಕೂಲಿ, ಕಾರ್ಮಿಕರು ಕಲುಷಿತ ನೀರನ್ನು ಸೇವನೆ ಸಹಿತ ಮನೆ ಬಳಕೆ ಮಾಡುತ್ತಿದ್ದಾರೆ. ಶಿಥಿಲಗೊಂಡಿರುವ ಓವರ್ ಹೆಡ್ ಟ್ಯಾಂಕ್ ಅನ್ನು ಯಾವಾಗ ಸ್ವಚ್ಛಗೊಳಿಸಿದ್ದು?, ಎಷ್ಟು ದಿನಗಳ ಹಿಂದೆ ಸ್ವಚ್ಛತೆ ಮಾಡಲಾಗಿದೆ? ಎಂಬುದು ಗ್ರಾಪಂನಲ್ಲಿಯೇ ಮಾಹಿತಿ ಇಲ್ಲ.
ಶಿಥಿಲಗೊಂಡಿರುವ ಟ್ಯಾಂಕದ ತಳಪಾಯದ ಕಂಬಗಳು ಸಂಪೂರ್ಣ ತುಕ್ಕು ಹಿಡಿದಿವೆ. ಒಳಗಡೆವಿರುವ ಕಬ್ಬಣದ ಸಲಾಕಿಗಳು ಶಕ್ತಿ ಕಳೆದುಕೊಂಡಿದ್ದು, ಯಾವುದೇ ಕ್ಷಣದಲ್ಲಿ ಧರೆಗೆ ಅಪ್ಪಳಿಸುವ ಸಾಧ್ಯತೆಯಿದೆ. ಭಯದಲ್ಲಿ ಇರುವ ಜನರ ಮನಸ್ಥಿತಿ ಅರಿತು ಶಿಥಿಲಗೊಂಡಿರುವ ಟ್ಯಾಂಕ್‌ಅನ್ನು ಅಧಿಕಾರಿಗಳು ತೆರವುಗೊಳಿಸಬೇಕಾಗಿದೆ.
ಅಧಿಕಾರಿಗಳು ಕುರುಡ ಜಾನತನ ತೋರಿದಲ್ಲಿ ಬಡವರ, ಶಾಲಾ ಮಕ್ಕಳ ಜೀವಕ್ಕೆ ಅಪಾಯ ತಪ್ಪಿದ್ದಲ್ಲ ಎಂಬ ಆತಂಕ ಗ್ರಾಮಸ್ಥರದ್ದಾಗಿದೆ.